(ಓಕೆ) ಎಚ್‌ಡಿಕೆದು ಬರೀ ಹಿಟ್‌ ಆ್ಯಂಡ್‌ ರನ್‌ ಕೇಸ್‌-ಶೆಟ್ಟರ್‌

| Published : Oct 26 2023, 01:00 AM IST

(ಓಕೆ) ಎಚ್‌ಡಿಕೆದು ಬರೀ ಹಿಟ್‌ ಆ್ಯಂಡ್‌ ರನ್‌ ಕೇಸ್‌-ಶೆಟ್ಟರ್‌
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಎಚ್‌.ಡಿ. ಕುಮಾರಸ್ವಾಮಿ ಪೆನ್‌ಡ್ರೈವ್‌ ಬಿಡುಗಡೆ ಮಾಡುವುದಾಗಿ ಹೇಳಿದರು. ಆದರೆ, ಅದೂ ಆಗಲಿಲ್ಲ. ಈ ವಿಚಾರದಲ್ಲಿಯೂ‌ ಹಿಟ್‌ ಆ್ಯಂಡ್‌ ರನ್‌ ಕೇಸ್‌ ಆಯಿತು. ಟೀಕೆ ಮಾಡುವ ಸಲುವಾಗಿ ಟ್ವೀಟ್‌ ಮಾಡಿದರೆ ಅದರಿಂದ ಏನೂ ಉಪಯೋಗವಾಗುವುದಿಲ್ಲ ಎಂದಿದ್ದಾರೆ ಮಾಜಿ ಸಿಎಂ ಶೆಟ್ಟರ್

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬರೀ ಹಿಟ್ ಆ್ಯಂಡ್ ರನ್ ಮಾಡುತ್ತಾರೆ. ಏನೇ ಟೀಕೆ ಮಾಡಿದರೂ ಅದಕ್ಕೆ ತಳಪಾಯ ಇರಬೇಕು. ಆದರೆ, ಅವರದು ಬರೀ ಹಿಟ್ ಆ್ಯಂಡ್ ರನ್ ಕೇಸ್ ಆಗಿದೆ ಎಂದು ಮಾಜಿ‌ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ್ ಶೆಟ್ಟರ್ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಎಚ್‌.ಡಿ. ಕುಮಾರಸ್ವಾಮಿ ಪೆನ್‌ಡ್ರೈವ್‌ ಬಿಡುಗಡೆ ಮಾಡುವುದಾಗಿ ಹೇಳಿದರು. ಆದರೆ, ಅದೂ ಆಗಲಿಲ್ಲ. ಈ ವಿಚಾರದಲ್ಲಿಯೂ‌ ಹಿಟ್‌ ಆ್ಯಂಡ್‌ ರನ್‌ ಕೇಸ್‌ ಆಯಿತು. ಟೀಕೆ ಮಾಡುವ ಸಲುವಾಗಿ ಟ್ವೀಟ್‌ ಮಾಡಿದರೆ ಅದರಿಂದ ಏನೂ ಉಪಯೋಗವಾಗುವುದಿಲ್ಲ. ಕೇವಲ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತದೆಯೇ ಹೊರತು ವಾಸ್ತವವಾಗಿ ಏನೂ ಗೊತ್ತಾಗುವುದಿಲ್ಲ ಎಂದು ಎಚ್‌.ಡಿ.ಕೆ. ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿದು ಕೇವಲ ಪ್ರಯೋಗ:

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬರೀ‌ ಹೆಸರು ಕೇಳಿ ಬರುವುದೇ ಆಯಿತು. ಯಾರು ಅಧ್ಯಕ್ಷರು ಎಂದು ಬಹಿರಂಗವಾಗಿ ಹೇಳಲಿ. ದೆಹಲಿ ವರಿಷ್ಠರು ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ಮುಂಚೂಣಿಯಲ್ಲಿರುವವರ ಒಂದು ಹೆಸರು ಬಿಟ್ಟು ಪ್ಲಸ್ ಮೈನಸ್‌ ಮಾಡುತ್ತಾರೆ. ಅದು ವಿಫಲವಾಯಿತು ಎಂದರೆ ಮತ್ತೆ ಬೇರೆ ಹೆಸರು ಬಿಡುವ ಮೂಲಕ ಕೇವಲ ಪ್ರಯೋಗ ಮಾಡುತ್ತಿದ್ದಾರೆ. ಈ ಕುರಿತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೇಳಿದರೆ ಅದೆಲ್ಲ ಊಹಾಪೋಹ ಎಂದು ಹೇಳುತ್ತಾರೆ. ಇದನ್ನು ಹೇಗೆ ಅಧಿಕೃತ ಎಂದು ಹೇಳುತ್ತೀರಾ. ಇದಕ್ಕೆ ಯಾವುದೇ ಅರ್ಥವಿಲ್ಲ. ಒಂದು ರಾಷ್ಟ್ರೀಯ ಪಕ್ಷ ವಿಫಲತೆಯ ಹಾದಿ ಹಿಡಿದಿದೆ ಎಂಬುದನ್ನು ತೋರಿಸಲು ರಾಜ್ಯ ಬಿಜೆಪಿ ಉತ್ತಮ ಉದಾಹರಣೆ. ಬಿಜೆಪಿ ಪಕ್ಷ ರಾಜ್ಯಧ್ಯಕ್ಷರನ್ನು, ವಿಪಕ್ಷ ನಾಯಕರನ್ನು ಆಯ್ಕೆ ಮಾಡದ ಶೋಚನೀಯ ಪರಿಸ್ಥಿತಿ ಬಂದಿರುವುದು ದುರ್ದೈವದ ಸಂಗತಿ ಎಂದರು.

ಮೊದಲಿನಿಂದಲೂ ಪ್ರವಾಸ:

ಜನರ ಆಶೋತ್ತರಗಳಿಗೆ ತಕ್ಕಂತೆ ನಾನು ಪ್ರವಾಸ ಮಾಡುತ್ತಿದ್ದೇನೆ. ನಾನು ಕಾಂಗ್ರೆಸ್ಸಿಗೆ ಬಂದ ಮೇಲೆ ಪ್ರವಾಸ ಮಾಡುತ್ತಿಲ್ಲ. ನಾನು ಮೊದಲಿಂದಲೂ ಪ್ರವಾಸ ಮಾಡುತ್ತಿದ್ದೇನೆ. ನನಗೆ ಮೊದಲಿಂದಲೂ ರಾಜ್ಯ ಪ್ರವಾಸ ಮಾಡುವ ನಾಯಕತ್ವ ಗುಣ ಬೆಳೆದು ಬಂದಿದೆ. ಹಿಂದೆಯೂ ರಾಜ್ಯ ಪ್ರವಾಸ ಮಾಡುವುದು ನಡೆದುಕೊಂಡು ಬಂದಿದೆ. ಅದನ್ನು ಈಗ ಮುಂದುವರಿಸಿದ್ದೇನೆ ಅಷ್ಟೆ ಎಂದರು.

ಕಾಂಗ್ರೆಸ್‌ ಗಟ್ಟಿಮುಟ್ಟಾಗಿದೆ:

ಕಾಂಗ್ರೆಸ್ ಸರ್ಕಾರಕ್ಕೆ ಏನು ಆಗೋದಿಲ್ಲ. ಆದರೆ, ಸಂಕ್ರಾಂತಿ ನಂತರ ಅಲ್ಲೋಲ ಕಲ್ಲೋಲ ಆಗುತ್ತದೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ತಮ್ಮ ಪಕ್ಷ ಬಿಟ್ಟು ಹೋಗುತ್ತಿರುವ ನಾಯಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದೆ ಅಷ್ಟೇ. ಕಾಂಗ್ರೆಸ್ ಸರ್ಕಾರವು ಗಟ್ಟಿಮುಟ್ಟಾಗಿ ಐದು ವರ್ಷ ಇರುತ್ತದೆ. 104 ಸ್ಥಾನಗಳು ಇದ್ದಾಗಾಲೇ ಏನು ಮಾಡಲು ಆಗಲಿಲ್ಲ. ಈಗ ಏನು ಮಾಡಲು ಸಾಧ್ಯ ಎಂದು ತಿರುಗೇಟು ನೀಡಿದರು.

ಕನಕಪುರ ಬೆಂಗಳೂರಿಗೆ ಸೇರಿಸುವ ವಿಚಾರಕ್ಕೆ ಡಿಕೆಶಿ ಪರ ಬ್ಯಾಟಿಂಗ್ ಮಾಡಿದ ಶೆಟ್ಟರ್‌, ಕನಕಪುರ ಬೆಂಗಳೂರು ಗ್ರಾಮೀಣದ ಒಂದು ಭಾಗ. ಬೆಂಗಳೂರು ಸಾಕಷ್ಟು ಬೆಳವಣಿಗೆಯಾಗಿದೆ. ನೂರಾರು ಹಳ್ಳಿಗಳು ಬೆಂಗಳೂರಿಗೆ ಸೇರುತ್ತಿವೆ. ಇದಕ್ಕೆ ಕನಕಪುರ ಹೊರತಾಗಿಲ್ಲ. ಸಹಜವಾಗಿ ಕನಕಪುರ ಬೆಂಗಳೂರು ನಗರಕ್ಕೆ ಸೇರಿದೆ ಎನ್ನುವುದರಲ್ಲಿ ಆಶ್ಚರ್ಯಪಡುವಂತಹ ವಿಚಾರ ಏನಿದೆ. ಇದಕ್ಕೆ ವಿಶೇಷ ಹೇಳಿಕೆ ನೀಡುವ ಅವಶ್ಯಕತೆ ಇಲ್ಲ ಎಂದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕನಕಪುರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ. ಜಿಲ್ಲೆ ಬಗ್ಗೆ ಹೇಳಿಲ್ಲ. ತಮ್ಮ ಕ್ಷೇತ್ರದ ಬಗ್ಗೆ ಡಿಕೆಶಿ ಮಾತನಾಡಿದ್ದಾರೆ. ಈ ರೀತಿ ಹೇಳಿಕೆ ಮುಖಾಂತರ ಅಭಿವೃದ್ಧಿಗೆ ಒತ್ತು ನೀಡುವ ಕಾರ್ಯ ಮಾಡುತ್ತಿದ್ದಾರೆ. ಆದರೆ, ಇಂದು ಎಲ್ಲವನ್ನೂ ರಾಜಕೀಯ ಮಾಡುವ ಕಾರ್ಯವಾಗುತ್ತಿರುವುದು ವಿಪರ್ಯಾಸ. ಇದನ್ನು ಬಿಟ್ಟು ಇಡೀ ವ್ಯವಸ್ಥೆ ಅನುಕೂಲ ಆಗುವುದನ್ನು ನೋಡಬೇಕು‌. ಯಾರ ಯಾರ ಆಸ್ತಿ ಅಲ್ಲಿದೆ ಅಂತ ಯಾರು ಮಾಹಿತಿ ನೀಡಿದ್ದಾರಾ? ಸುಮ್ಮನೆ ರಾಜಕೀಯ ಟೀಕೆ ಮಾಡಲು ಆಸ್ತಿ ವಿಚಾರ ತರಬಾರದು ಎಂದರು.