ಕಾವೇರಿಗಾಗಿ ಕುಮಾರಸ್ವಾಮಿ ಹೇಳಿಗೆ ನಗೆಪಾಟಲಿನ ಸಂಗತಿ: ಎಚ್.ಎ. ವೆಂಕಟೇಶ್

| Published : Apr 01 2024, 12:47 AM IST

ಕಾವೇರಿಗಾಗಿ ಕುಮಾರಸ್ವಾಮಿ ಹೇಳಿಗೆ ನಗೆಪಾಟಲಿನ ಸಂಗತಿ: ಎಚ್.ಎ. ವೆಂಕಟೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಎಚ್.ಡಿ. ದೇವೇಗೌಡರೇ ಪ್ರಧಾನಿಯಾಗಿದ್ದ ವೇಳೆ ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಲಿಲ್ಲ. ಚುನಾವಣೆ ವೇಳೆ ಬಳಸಿಕೊಳ್ಳಲು ವಿವಾದವನ್ನು ಹಾಗೆಯೇ ಉಳಿಸಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಚುನಾವಣೆ ನಂತರವೂ ಮುಂದುವರಿಯುತ್ತದೆ ಎಂದು ಮಾಜಿ ಪ್ರಧಾನಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಚುನಾವಣೆ ವೇಳೆ ಬಳಸಿಕೊಳ್ಳಲು ವಿವಾದವನ್ನು ಹಾಗೆಯೇ ಉಳಿಸಿಕೊಂಡಿರುವ ಜೆಡಿಎಸ್, ಈಗ ದೇಶಕ್ಕಾಗಿ ಪ್ರಧಾನಿ, ಕಾವೇರಿಗಾಗಿ ಎಚ್.ಡಿ. ಕುಮಾರಸ್ವಾಮಿ ಎಂದು ಹೇಳುತ್ತಿರುವುದು ನಗೆಪಾಟಲಿನ ಸಂಗತಿ ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ದೂರಿದರು.

ಎಚ್.ಡಿ. ದೇವೇಗೌಡರೇ ಪ್ರಧಾನಿಯಾಗಿದ್ದ ವೇಳೆ ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಲಿಲ್ಲ. ಚುನಾವಣೆ ವೇಳೆ ಬಳಸಿಕೊಳ್ಳಲು ವಿವಾದವನ್ನು ಹಾಗೆಯೇ ಉಳಿಸಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಚುನಾವಣೆ ನಂತರವೂ ಮುಂದುವರಿಯುತ್ತದೆ ಎಂದು ಮಾಜಿ ಪ್ರಧಾನಿ ಹೇಳಿದ್ದಾರೆ. ಆದರೆ ಅದು ಮೈತ್ರಿಯೋ ಅಥವಾ ವಿಲೀನವೋ ಎಂಬ ಅನುಮಾನ ಅವರ ಪಕ್ಷದವರಲ್ಲೇ ಇದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು.

ಜೆಡಿಎಸ್ ಪಕ್ಷದವರು ಒಂದು ರೀತಿ ಬಿಜೆಪಿಯ ಪ್ರಣಾಳಿಕೆಯಂತೆ. ಏಕೆಂದರೆ ಬಿಜೆಪಿಯು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವುದನ್ನೂ ಅನುಷ್ಠಾನಕ್ಕೆ ತರುವುದೇ ಇಲ್ಲ. ಅದೇ ರೀತಿ ಜೆಡಿಎಸ್ ನವರು ಬರೀ ಸುಳ್ಳುಗಳನ್ನೇ ಹೇಳುತ್ತಾರೆ ಎಂದು ಅವರು ಟೀಕಿಸಿದರು.

ಈ ವೇಳೆ ಬಿಜೆಪಿ ಮಾರ್ಗದರ್ಶಿ ಹಾಗೂ ಪ್ರಧಾನಿ ಮೋದಿ ಅವರ ಕಟ್ಟಾ ಅಭಿಮಾನಿಯಾದ ಸಾಹಿತಿ ಪ್ರೊ.ಎಸ್.ಎಲ್. ಭೈರಪ್ಪ ಅವರು ಈ ಬಾರಿ ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸದು ಎಂದು ಹೇಳಿರುವುದನ್ನು ನಾವು ಸ್ವಾಗತಿಸುತ್ತೇವೆ. ಅಂತೆಯೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಗರಕ್ಕೆ ಬಂದು ಭಾಷಣ ಮಾಡಿ ಹೋಗುವ ವೇಳೆ ತಮ್ಮಲ್ಲಿ ಹಣ ಇಲ್ಲದಿರುವುದರಿಂದ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಇದರಿಂದ ಹಣ ಇರುವವರಿಗೇ ಬಿಜೆಪಿಯಲ್ಲಿ ಚುನಾವಣೆ ಸಾಧ್ಯ ಎಂಬಂತಾಗಿದೆ ಎಂದು ಅವರು ಟೀಕಿಸಿದರು.

ಅಲ್ಲದೆ ತಾವು ಜನಪ್ರಿಯತೆ ಕಳೆದುಕೊಂಡಿದ್ದೇವೆ ಎಂಬ ಅರಿವು ಅವರಿಗಿದೆ. ಮೊದಲು ಬಿಜೆಪಿಯವರು ನಮ್ಮ ಐದು ಗ್ಯಾರೆಂಟಿ ಟೀಕಿಸುತ್ತಿದ್ದರು. ಇದನ್ನು ನಾವು ಪಕ್ಷದ ಯಾವುದೇ ಮುಖಂಡರ ಗ್ಯಾರಂಟಿ ಎಂದಿರಲಿಲ್ಲ. ಬದಲಾಗಿ ಕಾಂಗ್ರೆಸ್ ಗ್ಯಾರೆಂಟಿ ಎಂದಿದ್ದೆವು. ಆದರೆ ಈಗ ಬಿಜೆಪಿಯವರು ತಮ್ಮದನ್ನು ಮೋದಿ ಗ್ಯಾರಂಟಿ ಎಂದಿದ್ದಾರೆ. ಅಂದರೆ ಆ ಪಕ್ಷ ತಮ್ಮ ಪಕ್ಷದ ಗ್ಯಾರೆಂಟಿ ಎಂದು ಹೇಳಿಕೊಳ್ಳುವ ಧೈರ್ಯವಿಲ್ಲದ ದುರ್ಬಲ ಪಕ್ಷ ಎಂದು ಅವರು ಲೇವಡಿ ಮಾಡಿದರು.

ರಾಜ್ಯದಲ್ಲಿ ಪಂಚ ಗ್ಯಾರಂಟಿಗಳ ಮುಂದೆ ಹಿಂದುತ್ವ ಸೋಲುತ್ತದೆ. ಏ. 3 ರಂದು ಅಮಿತ್ ಶಾ ಭೇಟಿಯು ಯಾವುದೇ ಪರಿಣಾಮ ಬೀರುವುದಿಲ್ಲ. ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಜೈಲಿಗೆ ಹೋಗಬೇಕಾಗುತ್ತದೆ ಎಂಬ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ ಆಕ್ಷೇಪಾರ್ಹ. ಈ ಬಗ್ಗೆ ಕ್ಷಮೆ ಕೇಳದಿದ್ದರೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಚುನಾವಣೆ ಹಿನ್ನೆಲೆಯಲ್ಲಿ ನಾವೂ ಕೂಡ ಪ್ರಚಾರ ಆರಂಭಿಸಿದ್ದೇವೆ. ನಮ್ಮ ಪರವಾಗಿ ಉತ್ತಮ ವಾತಾವರಣವಿದೆ. ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಬೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ. ಸೀತಾರಾಂ, ಮಾಜಿ ಮೇಯರ್ ಬಿ.ಕೆ. ಪ್ರಕಾಶ್, ಶಿವನಾಗಪ್ಪ, ಲೋಕೇಶ್, ಗೋಪಿನಾಥ್, ಭಾಸ್ಕರ್ ಇದ್ದರು.