ಬಿಎಸ್ವೈ ಕುಟುಂಬ ನಾಶಕ್ಕೆ ಕಾಂಗ್ರೆಸ್‌ ಕುತಂತ್ರ: ಎಚ್‌ಡಿಕೆ

| Published : Jun 15 2024, 01:00 AM IST / Updated: Jun 15 2024, 07:32 AM IST

HDK

ಸಾರಾಂಶ

ನಮ್ಮನ್ನೂ ಮುಗಿಸಲೆತ್ನಿಸಿದ್ದರು. ಈಗ ಬಿಎಸ್‌ವೈ ಕುಟುಂಬವನ್ನು ಟಾರ್ಗೆಟ್‌ ಮಾಡಿದ್ದಾರೆ. ಇದು ಸೇಡಿನ ರಾಜಕೀಯ ಎಂಬುದಾಗಿ ಕೇಂದ್ರ ಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

 ಬೆಂಗಳೂರು : ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಕುಟುಂಬ ಮುಗಿಸಲು ಪ್ರಯತ್ನಿಸಿದ ಕಾಂಗ್ರೆಸ್‌ ಇದೀಗ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕುಟುಂಬವನ್ನು ಮುಗಿಸಲು ಕುತಂತ್ರ ನಡೆಸಿದೆ ಎಂದು ಕೇಂದ್ರದ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆಪಾದಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 82 ವರ್ಷದ ರಾಜ್ಯದ ರೈತ ನಾಯಕ ಯಡಿಯೂರಪ್ಪ ಅವರ ಮೇಲೆ ಕಾಂಗ್ರೆಸ್‌ ಸೇಡಿನ ರಾಜಕಾರಣ ಮಾಡುತ್ತಿದೆ. ಅವರನ್ನು ಜೈಲಿಗೆ ಕಳಿಸಲೇಬೇಕು ಎಂಬಂತೆ ಕಾಂಗ್ರೆಸ್‌ ಕೆಲಸ ಮಾಡುತ್ತಿದೆ. ಯಡಿಯೂರಪ್ಪ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ. ಆದರೆ, ಅವರ ಪ್ರಯತ್ನ ಫಲಪ್ರದ ಆಗುವುದಿಲ್ಲ ಎಂದು ಹೇಳಿದರು.

ನಮ್ಮ ಕುಟುಂಬವನ್ನು ಮುಗಿಸಲು ಏನೇನೆಲ್ಲ ಮಾಡಿದರು ಎಂಬುದು ಗೊತ್ತಿದೆ. ಈಗ ಯಡಿಯೂರಪ್ಪ ಕುಟುಂಬ ಮುಗಿಸಲು ಹೊರಟಿದ್ದಾರೆ. ನಾಲ್ಕು ತಿಂಗಳ ಹಿಂದಿನ ಪ್ರಕರಣ ಇದು. ಇವತ್ತು ಯಡಿಯೂರಪ್ಪ ಅವರ ಮೇಲೆ ಜಾಮೀನುರಹಿತ ಕೇಸ್ ಹಾಕಲು ಹೊರಟಿದ್ದಾರೆ. ಯಡಿಯೂರಪ್ಪ ಅವರಿಗೆ ನ್ಯಾಯಾಲಯದಿಂದ ರಿಲೀಫ್‌ ಸಿಕ್ಕಿದೆ. ಸರ್ಕಾರದಲ್ಲಿ ಕಾನೂನು ಅನುಭವ ಇರುವವರು ಸಾಕಷ್ಟು ಮಂದಿ ಇದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ನಾಲ್ಕು ತಿಂಗಳ ನಂತರ ಪ್ರಕರಣವನ್ನು ಕೆದಕಿದ್ದಾರೆ ಎಂದು ಕುಮಾರಸ್ವಾಮಿ ಹರಿಹಾಯ್ದರು.