ಖರ್ಚುವೆಚ್ಚ ವಿವರ ನೀಡುವಂತೆ ಕುಮಟಾ ಪುರಸಭೆ ಸದಸ್ಯರ ಆಗ್ರಹ

| Published : Feb 11 2025, 12:46 AM IST

ಸಾರಾಂಶ

ಸಭೆಯ ಆರಂಭದಲ್ಲೇ ಹಿಂದಿನ ಆಡಳಿತಾಧಿಕಾರಿಗಳ ಅವಧಿಯಲ್ಲಿ ನಡೆದ ಖರ್ಚುವೆಚ್ಚಗಳು, ಬಜೆಟ್ ಮಾಹಿತಿ ಕುರಿತು ಸದಸ್ಯರು ಪುರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಗಮನ ಸೆಳೆಯಿತು.

ಕುಮಟಾ: ಇಲ್ಲಿನ ರಾ.ರಾ. ಅಣ್ಣಾ ಪೈ ಸಭಾಭವನದಲ್ಲಿ ಒಂದೂವರೆ ವರ್ಷದ ಬಳಿಕ ಸೋಮವಾರ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಉಪಸ್ಥಿತಿಯಲ್ಲಿ ಪುರಸಭೆಯ ಸಾಮಾನ್ಯ ಸಭೆ ಜರುಗಿತು. ಸಭೆಯ ಆರಂಭದಲ್ಲೇ ಹಿಂದಿನ ಆಡಳಿತಾಧಿಕಾರಿಗಳ ಅವಧಿಯಲ್ಲಿ ನಡೆದ ಖರ್ಚುವೆಚ್ಚಗಳು, ಬಜೆಟ್ ಮಾಹಿತಿ ಕುರಿತು ಸದಸ್ಯರು ಪುರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಗಮನ ಸೆಳೆಯಿತು.

ಸಭೆಯಲ್ಲಿ ಮೊದಲಿಗೆ ವಿಷಯ ಪ್ರಸ್ತಾಪಿಸಿದ ಹಿರಿಯ ಸದಸ್ಯ ರಾಜೇಶ ಪೈ, ಸಾಮಾನ್ಯ ಸಭೆಯಲ್ಲಿ ಚರ್ಚಿಸುವ ವಿಷಯಗಳ ಪಟ್ಟಿ(ನಡಾವಳಿ)ಯಲ್ಲಿ ಕಳೆದ ಒಂದೂವರೆ ವರ್ಷಕ್ಕೂ ಹೆಚ್ಚು ಅವಧಿಯ ಅಧಿಕಾರಿಗಳ ಆಡಳಿತ ಕಾಲದ ಖರ್ಚು ವೆಚ್ಚಗಳ ವಿಷಯ ಯಾಕಿಲ್ಲ. ನಮಗೆ ಪ್ರಶ್ನಿಸುವವರು ಸಾವಿರ ಮಂದಿ ಇದ್ದಾರೆ. ಅವರಿಗೆ ಉತ್ತರಿಸಬೇಡವೇ? ಲೋಪದೋಷಗಳಿಗೆ ಯಾರು ಹೊಣೆ ಎಂದರು. ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಸಾಮಾನ್ಯ ಸಭೆಯ ನೋಟಿಸನ್ನು ವಾರದ ಮುಂಚೆಯೇ ನೀಡಿರುತ್ತೇವೆ. ಈ ನಡುವೆ ಮುಂಚಿತವಾಗಿಯೇ ತಿಳಿಸಿದ್ದರೆ ಮಾಹಿತಿ ತರುತ್ತಿದ್ದೆವು ಎಂದರು.ಇದಕ್ಕೆ ವಿರೋಧಿಸಿದ ಹಲವು ಸದಸ್ಯರು, ಖರ್ಚು ವೆಚ್ಚಗಳ ಮಾಹಿತಿಯನ್ನು ನಾವು ಕೇಳಿದ ಮೇಲೆ ಕೊಡುವುದಲ್ಲ. ನೀವೇ ತಿಳಿದುಕೊಂಡು ಕೊಡಬೇಕು. ಸಭೆಯ ಗಮನಕ್ಕೆ ತರುವುದು ನಿಮ್ಮ ಜವಾಬ್ದಾರಿ ಎಂದರು. ಸದಸ್ಯ ಸಂತೋಷ ನಾಯ್ಕ ಎದ್ದು ನಿಂತು, ಇತ್ತೀಚೆಗೆ ಪುರಸಭೆಯ ಬಜೆಟ್ ಮಂಡಿಸಿ ಅನುಮೋದನೆ ಪಡೆಯಲಾಗಿದೆ. ಆದರೆ ಯಾವ ಸದಸ್ಯರ ಗಮನಕ್ಕೂ ತಂದಿಲ್ಲ. ಯಾಕೆ? ಬಜೆಟ್ ನಿರ್ಧಾರವನ್ನೂ ಅಧಿಕಾರಿಗಳೇ ಮಾಡಿದರೆ ಜನಪ್ರತಿನಿಧಿಗಳ ಅವಶ್ಯಕತೆಯೇನು? ಬಜೆಟ್ ಏನು ಮಾಡಿದ್ದೀರೆಂದು ತಿಳಿಯುವುದು ಹೇಗೆ? ಸದಸ್ಯರಿಗೆ ತಿಳಿಸದೇ ಇರಲು ಕಾರಣವೇನು? ಎಂದರು. ಇದಕ್ಕೆ ದನಿಗೂಡಿಸಿದ ಸದಸ್ಯ ರಾಜೇಶ ಪೈ, ಬಜೆಟ್‌ನಿಂದ ಪುರಸಭೆಗೆ ನಷ್ಟ ಉಂಟಾಗಿದ್ದಲ್ಲಿ ಅದನ್ನು ಅಧಿಕಾರಿಗಳು ತುಂಬಿಕೊಡುತ್ತಾರೆಯೇ ಎಂದು ಪ್ರಶ್ನಿಸಿದರು. ಸಾಕಷ್ಟು ಚರ್ಚೆಯ ಬಳಿಕ ಮುಖ್ಯಾಧಿಕಾರಿ ಕಲಾದಗಿ ಉತ್ತರಿಸಿ, ಬಜೆಟ್‌ನ್ನು ಸಾಕಷ್ಟು ಪರಿಶೀಲಿಸಿಯೇ ಮಂಡಿಸಲಾಗಿದೆ. ತಪ್ಪಾಗಿಲ್ಲ. ತಪ್ಪಾಗಿದ್ದರೆ ಅದಕ್ಕೆ ನಾನೇ ಹೊಣೆ ಹೊರುತ್ತೇನೆ ಎಂದರು. ಬಳಿಕ ನಗರ ಯೋಜನಾ ಪ್ರಾಧಿಕಾರದಿಂದ ಬಂದ ತಾಂತ್ರಿಕ ವರದಿ ಪರಿಶೀಲಿಸಿ ವಿನ್ಯಾಸ ನಕ್ಷೆಗಳಿಗೆ ಅನುಮೋದನೆ ನೀಡಲಾಯಿತು. ಗುಂದ ಅಂಗನವಾಡಿ ಬಳಿ ಜೀರ್ಣಾವಸ್ಥೆಯಲ್ಲಿರುವ ಪೌರಕಾರ್ಮಿಕ ವಸತಿಗೃಹ ಖುಲ್ಲಾಪಡಿಸಿ ಆವರಣ ಗೋಡೆ ನಿರ್ಮಿಸುವುದಕ್ಕೆ ಸದಸ್ಯರು ಸಮ್ಮತಿಸಿದರು. ಉಳಿದಂತೆ ವಾಲ್ವಮನ್, ಡಾಟಾ ಎಂಟ್ರಿ ಅಪರೇಟರ್ ಟೆಂಡರ್, ಪಟ್ಟಣ ವ್ಯಾಪ್ತಿಯ ರಸ್ತೆ ಹೊಂಡ ಮುಚ್ಚುವುದು, ಚೆನ್ನಮ್ಮ ಉದ್ಯಾನವನ ನಿರ್ವಹಣೆ, ಉದ್ದಿಮೆ ಪರವಾನಗಿ ಶುಲ್ಕ ಪರಿಷ್ಕರಣೆ, ಸ್ಥಾಯಿ ಸಮಿತಿ ರಚನೆ ಇನ್ನಿತರ ವಿಷಯಗಳನ್ನು ಚರ್ಚಿಸಲಾಯಿತು. ಪುರಸಭೆಗೆ ನೂತನ ಅಧ್ಯಕ್ಷೆ ಸುಮತಿ ಭಟ್ ಅವರ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷ ಮಹೇಶ ನಾಯ್ಕ ಇತರ ಸದಸ್ಯರು ಇದ್ದರು.