ಕುಂಭಮೇಳ ಎಫೆಕ್ಟ್‌: ಈಗ ಪ್ಯಾಕೇಜ್‌ ಟೂರ್‌ ದರವೂ ದುಬಾರಿತುಟ್ಟಿ!

| Published : Jan 30 2025, 12:32 AM IST

ಸಾರಾಂಶ

ಖಾಸಗಿ ಟ್ರಾವೆಲ್‌ ಏಜೆನ್ಸಿಗಳು ಕೂಡ ಪ್ಯಾಕೇಜ್ ಟೂರ್‌ಗಳ ದರವನ್ನು ಅನಿವಾರ್ಯವಾಗಿ ಏರಿಕೆ ಮಾಡಿವೆ. ಇದರಿಂದಾಗಿ ಸಾಮಾನ್ಯ ದರದಲ್ಲಿ ಕುಂಭ ಮೇಳಕ್ಕೆ ತೆರಳುವ ಆಕಾಂಕ್ಷೆಯಲ್ಲಿದ್ದವರು ನಿರಾಸೆ ಪಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳುವವರಿಗೆ ವಿಪರೀತ ದುಬಾರಿ ಪ್ರಯಾಣದರ ತಣ್ಣೀರೆರಚಿದರೆ, ಪ್ಯಾಕೇಜ್‌ ಟೂರ್‌ನಲ್ಲಿ ಹೋಗುವವರಿಗೂ ದರ ಬರೆ ಎಳೆದಿದೆ. ಹೀಗಾಗಿ ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನದ ಕನಸು ಹೊತ್ತವರು ಈಗ ಪರಿತಪಿಸುವಂತಾಗಿದೆ. ರಾಜ್ಯದ ಕರಾವಳಿಯಿಂದ ಕುಂಭಮೇಳಕ್ಕೆ ಫೆ.15ರಂದು ವಿಶೇಷ ರೈಲು ಓಡಿಸಲಾಗುತ್ತಿದೆ. ಕೇವಲ ಒಂದು ರೈಲು ಮಾತ್ರ ಮಂಗಳೂರು ಜಂಕ್ಷನ್‌ ನಿಲ್ದಾಣದಿಂದ ವಯಾ ಕೇರಳ ಮೂಲಕ ಪ್ರಯಾಗ್‌ರಾಜ್‌ ತಲುಪಲಿದೆ. ಇದನ್ನು ಹೊರತುಪಡಿಸಿದರೆ ಬೇರೆ ವಿಶೇಷ ರೈಲುಗಳನ್ನು ಓಡಿಸುತ್ತಿಲ್ಲ. ಹೀಗಾಗಿ ಮಾಮೂಲು ರೈಲುಗಳಲ್ಲದೆ, ಒಂದೇ ವಿಶೇಷ ರೈಲನ್ನು ಭಕ್ತರು ಅವಲಂಬಿಸಬೇಕಾಗಿದೆ. ಈ ರೈಲು ಕೂಡ ಭರ್ತಿಯಾಗಿ ಸಂಚರಿಸುವುದರಿಂದ ಇನ್ನೊಂದು ರೈಲನ್ನು ಕೊಂಕಣ ಮಾರ್ಗ ಮೂಲಕ ಓಡಿಸುವಂತೆ ಬೇಡಿಕೆ ವ್ಯಕ್ತವಾಗತೊಡಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ತಕ್ಷಣಕ್ಕೆ ಅಂತಹ ತೀರ್ಮಾನ ಹೊರಬೀಳುವ ಸಾಧ್ಯತೆ ಕ್ಷೀಣವಾಗಿದೆ. ಈ ಬಗ್ಗೆ ಕರಾವಳಿಯ ಜನಪ್ರತಿನಿಧಿಗಳ ಗಮನ ಸೆಳೆದರೂ ಮತ್ತೊಂದು ರೈಲು ಸಂಚಾರದ ಸಾಧ್ಯತೆ ಕಂಡುಬರುತ್ತಿಲ್ಲ.

ಗಗನಮುಖಿಯಾದ ವಿಮಾನ ದರ: ಕರ್ನಾಟಕದಿಂದ ಪ್ರಯಾಗ್‌ರಾಜ್‌ಗೆ ದಿನನಿತ್ಯವೂ ಅಸಂಖ್ಯ ಭಕ್ತರು ತೆರಳುತ್ತಿದ್ದಾರೆ. ಬೆಂಗಳೂರಿನಿಂದ ನೇರ ವಿಮಾನ ಸೌಲಭ್ಯ ಇದೆ. ಆದರೆ ದರ ಮಾತ್ರ ಕೈಗೆಟಕುವಂತಿಲ್ಲ. ಮಾಮೂಲಿ 6-7 ಸಾವಿರ ರು. ಇರುವ ವಿಮಾನ ಪ್ರಯಾಣ ದರ ಈಗ 20 ಸಾವಿರ ರು.ನಿಂದ ಆರಂಭವಾಗುತ್ತದೆ. ಅದರಲ್ಲೂ ಫೆಬ್ರವರಿ ಮಧ್ಯಭಾಗದಲ್ಲಿ 37 ಸಾವಿರ ರು. ವರೆಗೆ ದರ ವಿಪರೀತ ಏರಿಕೆಯಾಗಿದೆ. ಸಾಧಾರಣ ವರ್ಗಕ್ಕೂ ವಿಮಾನದಲ್ಲಿ ಕುಂಭಮೇಳಕ್ಕೆ ಹೋಗಿ ಬರುವುದು ದುಸ್ತರ ಎನಿಸಿದೆ.

ಸಿಡ್ನಿಗೆ ಸರಿಸಾಟಿ ದರ ಏರಿಕೆ: ಖಾಸಗಿ ವಿಮಾನ ಸಂಸ್ಥೆಯೊಂದು ಬೆಂಗಳೂರಿನಿಂದ ಪ್ರಯಾಗ್‌ರಾಜ್‌ಗೆ 37,058 ರು. ವರೆಗೆ ದರ ಏರಿಕೆ ಮಾಡಿದೆ. ಇದೇ ಕಂಪನಿ ಸಿಡ್ನಿಗೆ 37,607 ರು. ದರ ಇದೆ. ಅಂದರೆ ಸಿಡ್ನಿಗೆ ಸರಿಸಾಟಿಯಾಗುವಷ್ಟರ ಮಟ್ಟಿಗೆ ಎರಡೂವರೆ ತಾಸು ಪ್ರಯಾಗ್‌ರಾಜ್‌ ಪ್ರಯಾಣ ದರ ಹಲವು ಪಟ್ಟು ಏರಿಕೆ ಕಂಡಿದೆ. ಪ್ಯಾಕೇಜ್‌ ಟೂರ್‌ಗೂ ಹೊಡೆತ: ಖಾಸಗಿ ಟ್ರಾವೆಲ್‌ ಏಜೆನ್ಸಿಗಳು ಕೂಡ ಪ್ಯಾಕೇಜ್ ಟೂರ್‌ಗಳ ದರವನ್ನು ಅನಿವಾರ್ಯವಾಗಿ ಏರಿಕೆ ಮಾಡಿವೆ. ಇದರಿಂದಾಗಿ ಸಾಮಾನ್ಯ ದರದಲ್ಲಿ ಕುಂಭ ಮೇಳಕ್ಕೆ ತೆರಳುವ ಆಕಾಂಕ್ಷೆಯಲ್ಲಿದ್ದವರು ನಿರಾಸೆ ಪಡುವಂತಾಗಿದೆ.

ಟ್ರಾವೆಲ್‌ ಏಜೆನ್ಸಿಗಳು ಪ್ಯಾಕೇಜ್ ಟೂರ್‌ ಸಂಘಟಿಸುವಾಗ ವಿಮಾನಯಾನ ದರವನ್ನು ನೆಚ್ಚಿಕೊಂಡು ನಿಗದಿಪಡಿಸುತ್ತವೆ. ಈ ಬಾರಿ ಕುಂಭ ಮೇಳ ಪ್ಯಾಕೇಜ್‌ ಟೂರ್‌ಗೆ ವಿಮಾನಯಾನದ ದುಬಾರಿ ದರ ಸಾಕಷ್ಟು ಹೊಡೆತ ನೀಡಿದೆ. ಉತ್ತರ ಭಾರತ ಪ್ರವಾಸಗಳಿಗೆ ವಿಮಾನವನ್ನೇ ನೆಚ್ಚುವುದರಿಂದ ಕುಂಭ ಮೇಳದ ಪ್ಯಾಕೇಜ್ ಟೂರ್‌ಗಳು ಟ್ರಾವೆಲ್ ಏಜೆನ್ಸಿಗಳಿಗೂ ಸುಲಭದಲ್ಲಿ ದಕ್ಕುತ್ತಿಲ್ಲ. ಪ್ಯಾಕೇಜ್‌ ಟೂರ್‌ಗಳಿಗೆ ದರ ಎರಡ್ಮೂರು ಪಟ್ಟು ಹೆಚ್ಚು ಮಾಡಿರುವುದರಿಂದ ಉಳ್ಳವರು ಮಾತ್ರ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಬೇಕಾಬಿಟ್ಟಿ ದರ ಏರಿಕೆಗೆ ಕಡಿವಾಣ ಇಲ್ಲದ ಕಾರಣ ಸಾಮಾನ್ಯರಿಗೆ ಕುಂಭ ಮೇಳ ಕನಸಿನ ಗಂಟು ಆಗಿ ಪರಿಣಮಿಸಿದೆ.

ಪ್ರಯಾಗ್‌ರಾಜ್‌ ಪ್ಯಾಕೇಜ್‌ ಟೂರಿಗೆ ಎಲ್ಲ ಸೇರಿ ಕಳೆದ ವಾರ ತನಕ ತನಕ 30 ಸಾವಿರ ರು. ದರ ಇತ್ತು. ಕಳೆದ ವಾರದ ವರೆಗೆ 7,500 ರು. ವಿಮಾನ ದರ ಇತ್ತು. ಈಗ ಇದು ಏಕಾಏಕಿ 20 ಸಾವಿರ ರು.ಗೆ ಏರಿದೆ. ರೈಲಿನಲ್ಲಿ ಹೋಗೋಣ ಎಂದರೆ ಸಾಕಷ್ಟು ರೈಲು ಸಹ ಲಭ್ಯವಿಲ್ಲ. ಬಸ್‌ ವ್ಯವಸ್ಥೆ ಇದ್ದರೂ ಅಷ್ಟು ದೂರ ಬಸ್ಸಿನಲ್ಲಿ ಕುಳಿತು ಹೋಗಲು ಕಷ್ಟವಾಗುತ್ತದೆ. ನಾನೀಗ ಪ್ರವಾಸವನ್ನೇ ರದ್ದು ಮಾಡುವ ಯೋಚನೆಯಲ್ಲಿದ್ದೇನೆ.

-ನೊಂದ ಪ್ರಯಾಣಿಕ, ಮಂಜೇಶ್ವರ