ಸಾರಾಂಶ
ಶಿವಮೊಗ್ಗ: ಭಾರತ ವಿಶ್ವಗುರು ಎನ್ನುವುದಕ್ಕೆ 45 ದಿನಗಳ ಕಾಲ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಲ್ಲಿ ನಡೆದ ಕುಂಭಮೇಳವೇ ಸಾಕ್ಷಿಯಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 45 ದಿನಗಳ ಕಾಲ ಪ್ರಯಾಗದಲ್ಲಿ ನಡೆದ ಮಹಾ ಕುಂಭಮೇಳ ಅತ್ಯಂತ ಯಶಸ್ವಿಯಾಗಿದೆ. ಅದರ ಪರಿಣಾಮ ಇಡೀ ದೇಶ ಸಂಭ್ರಮದಿಂದ ಪ್ರಯಾಗದ ಕುಂಭಮೇಳವನ್ನು ವೀಕ್ಷಿಸಿದ್ದಾರೆ. ಸುಮಾರು 64.23 ಕೋಟಿ ಜನ ಪ್ರತ್ಯಕ್ಷವಾಗಿ ಭಾಗವಹಿಸಿದ್ದಾರೆ. ಇದೊಂದು ಅವಿಸ್ಮರಣೀಯ ಕಾರ್ಯ. ಗಂಗಾ, ಯಮುನಾ ಸೇರುವಂತಹ ಜಾಗಕ್ಕೆ ಹೋಗುವುದು ಒಂದು ಭಾವನಾತ್ಮಕ ಸಂಗತಿ. ಇದು ಹಿಂದೂ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಿದೆ ಎಂದರು.ಕುಂಭಮೇಳಕ್ಕೆ ದೇಶ, ವಿದೇಶಗಳಿಂದ ಭಕ್ತರು ಆಗಮಿಸಿದ್ದರು. ಲಕ್ಷಾಂತರ ಜನರ ಭಕ್ತಿ ಭಾವನೆಗೆ ಕುಂಭ ಮೇಳ ಸಾಕ್ಷಿಯಾಗಿದೆ. ಇದಕ್ಕೆ ಕಾರಣೀಭೂತರಾದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅವರ ತಂಡ ವ್ಯವಸ್ಥಿತವಾಗಿ ನಡೆಸಿದ್ದಾರೆ. ನರೇಂದ್ರ ಮೋದಿಯವರ ಮಾರ್ಗದರ್ಶನದ ಮೂಲಕ ಅವರದೇ ಆದ ಕಾರ್ಯತಂತ್ರದ ಮೂಲಕ ಅಚ್ಚುಕಟ್ಟಾಗಿ ನೆರವೇರಿಸಿದ್ದಾರೆ ಎಂದರು.
ಅನೇಕ ಸಾಧು ಸಂತರ ತಂಡವೇ ಅಲ್ಲಿತ್ತು. ಆಗಮಿಸಿದ್ದ ಭಕ್ತಾದಿಗಳಿಗೆ ಎಲ್ಲಾ ರೀತಿಯ ಸಮಗ್ರ ವ್ಯವಸ್ಥೆ ಮಾಡಲಾಗಿತ್ತು. ಅವಶ್ಯಕತೆಗೆ ತಕ್ಕಂತೆ ಎಲ್ಲದನ್ನೂ ಸಿಗುವ ರೀತಿಯಲ್ಲಿ ಅವಶ್ಯಕತೆ ಮಾಡಲಾಗಿತ್ತು. ಕೋಟಿಗಟ್ಟಲೆ ಜನ ಸ್ನಾನ ಮಾಡುತ್ತಿದ್ದರೂ ನೀರು ಅಷ್ಟೊಂದು ತಿಳಿಯಾಗಿತ್ತು. ಅಲ್ಲಿಗೆ ಬಂದಿದ್ದ ಭಕ್ತರು ಹೆಚ್ಚು ಸಂಭ್ರಮದಿಂದ ಆಗಮಿಸಿದ್ದರು. ಜೊತೆಗೆ ಪೊಲೀಸ್ ಸಿಬ್ಬಂದಿಗಳ ಸಹನೆಯನ್ನು ಮೆಚ್ಚಬೇಕು. ಅತ್ಯಂತ ಸಂಯಮದಿಂದ ತಾಳ್ಮೆಯಿಂದ 75 ಸಾವಿರ ಪೊಲೀಸ್ ಸಿಬ್ಬಂದಿಗಳು ಕಾರ್ಯನಿರ್ವಹಿಸಿದ್ದರು. ದೋಣಿಯ ಮೇಲೆ ಕರೆದುಕೊಂಡು ಹೋಗುವ ವ್ಯವಸ್ಥೆಯು ಇತ್ತು. ಒಂದು ಸರ್ಕಾರ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ನೋಡಬೇಕು ಎಂದರು.ಸ್ವಚ್ಛತಾ ಕಾರ್ಮಿಕರಿಗೆ 10 ಸಾವಿರ ಬೋನಸ್ ನೀಡಿದ್ದಾರೆ. 16 ಸಾವಿರ ರು ಸಂಭಾವನೆ ಕೊಡುವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಹೆಚ್ಚುವರಿ ಬೋನಸ್ ಅನೌನ್ಸ್ ಮಾಡುತ್ತಾರೆ. 45 ದಿನಗಳ ಕುಂಭ ಮೇಳದ ಅತ್ಯಂತ ಅವಿಸ್ಮರಣೀಯ ಕಾರ್ಯ. ಹೆಚ್ಚು ಭಾವನಾತ್ಮಕನಾಗಿದ್ದೆ. ಎಲ್ಲ ಹಿಂದೂಗಳು ಒಮ್ಮೆಯಾದರೂ ಹೋಗಿ ಬರಬೇಕು ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಡಿ.ಮೋಹನ್ ರೆಡ್ಡಿ, ಶ್ರೀನಾಗ್, ಮಂಜುನಾಥ್, ದೀನ ದಯಾಳ್, ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.
ಮುತಾಲಿಕ್ ಗೆ ನಿರ್ಬಂಧ ಖಂಡನೀಯ ರಾಜ್ಯ ಸರ್ಕಾರ ಹಿಂದೂ ಹೋರಾಟಗಾರರನ್ನು ನಿರ್ಬಂಧಿಸುವ ಕೆಲಸ ಮಾಡಿದೆ. ಪ್ರಮೋದ್ ಮುತಾಲಿಕ್ ಅವರು ಏನು ಅಪರಾಧ ಮಾಡಿದ್ದಾರೆ. ಅವರ ಮೇಲೆ ಹಾಕಿರುವ ಎಲ್ಲ ಕೇಸ್‍ಗಳು ವಾಪಸ್ ಆಗಿವೆ. ಯಾವ ಶಿಕ್ಷೆಯೂ ಅವರಿಗೆ ಆಗಿಲ್ಲ. ಶಿವಮೊಗಕ್ಕೆ ಆಗಮಿಸದ ರೀತಿಯಲ್ಲಿ ಪತ್ರಿಕಾಗೋಷ್ಠಿಯನ್ನು ಮಾಡದ ರೀತಿಯಲ್ಲಿ ಅವರಿಗೆ ನಿರ್ಬಂಧ ಹೇರಿದ್ದಾರೆ. ಈ ರೀತಿಯ ರಾಜ್ಯ ಸರ್ಕಾರದ ನಿರ್ಧಾರ ಅಕ್ಷಮ್ಯ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹರಿಹಾಯ್ದರು.ಲವ್ ಜಿಹಾದ್ ಪುಸ್ತಕ ಬಿಡುಗಡೆ ಮಾಡುವುದು ಅಪರಾಧವಾ ?, ಅವರೇನು ಬೆಂಕಿ ಹಚ್ಚಲು ಬಂದಿದ್ದರಾ. ಹಿಂದೂ ನಾಯಕರನ್ನು ಬಗ್ಗು ಬಡಿಯುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ರಕ್ಷಣಾಧಿಕಾರಿಗಳ ಮೇಲೆ ನನಗೆ ಗೌರವವಿದೆ. ಪುಸ್ತಕ ಬಿಡುಗಡೆ ಮಾಡುವುದನ್ನು ತಡೆಯುತ್ತಿರಿ, ಡ್ರಗ್ ಮಾಫಿಯಾ ಮಾಡುವವರನ್ನು, ಮರಳು ದಂಧೆ ಮಾಡುವವರನ್ನು ಬಿಡುತ್ತೀರಿ. ಕಾಂಗ್ರೆಸ್ ಸರ್ಕಾರ ನೀತಿ ಮತ್ತೊಮ್ಮೆ ಪ್ರಕಟವಾಗಿದೆ. ರಾಜ್ಯ ಸರ್ಕಾರದ ಈ ದುರ್ವರ್ತನೆಯನ್ನು ಖಂಡಿಸುತ್ತೇನೆ ಎಂದರು.
ಇನ್ನೊಂದು ವರ್ಷದಲ್ಲಿ 3 ಸಾವಿರಆಶ್ರಯ ಮನೆಗಳ ವಿತರಣೆ ಆಶ್ರಯ ಬಡಾವಣೆಯಲ್ಲಿ ಇನ್ನು 3 ತಿಂಗಳ ಒಳಗೆ 574 ಮನೆಗಳನ್ನು ವಿತರಣೆ ಮಾಡಲಾಗುವುದು ಶಾಸಕ ಎಸ್.ಎನ್.ಚನ್ನಬಸಪ್ಪ ಎಂದು ತಿಳಿಸಿದರು.
ಈಗಾಗಲೇ 2 ಹಂತದಲ್ಲಿ ಮನೆಗಳ ವಿತರಿಸಲಾಗಿದೆ. ವಿತರಿಸಲಾದ ಮನೆಗಳಿಗೆ ಜೂನ್ ತಿಂಗಳೊಳಗೆ ನೀರು ಸಿಗುವಂತೆ ಪ್ಲಾನ್ ಮಾಡಲಾಗಿದೆ. 3000 ಮನೆಗಳಿಗೆ ಸಿಗಬೇಕಾದ ವಿದ್ಯುತ್ ನೀಡಲು ಸರ್ಕಾರ 12 ಕೋಟಿ ರು. ಕೊಡುವುದಾಗಿ ಹೇಳಿದೆ. ಮೂರರಿಂದ ನಾಲ್ಕು ತಿಂಗಳಿನ ಉಳಿದ ಮನೆಯನ್ನು ಕೊಡುವುದಾಗಿ ಹೇಳಿದ್ದಾರೆ. ಇನ್ನೊಂದು ವರ್ಷದಲ್ಲಿ ಸಂಪೂರ್ಣ 3000 ಮನೆಗಳನ್ನು ನೀಡಬೇಕು ಎಂದು ನಿರ್ಧಾರ ಮಾಡಿದೆ ಎಂದು ತಿಳಿಸಿದರು.ಆಶ್ರಯ ಮನೆಗಳ ವಿತರಣೆಗೆ ಸಂಬಂಧಿಸಿದಂತೆ ಫಲಾನುಭವಿಗಳಿಂದ ಒಳ್ಳೆ ಕಡೆ ಮನೆ ನೀಡುವುದಾಗಿ 50 ಸಾವಿರದವರೆಗೆ ಹಣ ಪಡೆದಿದ್ದಾರೆ ಎಂಬ ಆರೋಪಗಳು ನನ್ನ ಕಿವಿಗೂ ಬಿದ್ದಿದೆ. ನಾನಾಂತು ಫಲಾನುಭವಿಗಳಿಂದ ಅರ್ಧ ಟೀ ಕುಡಿದಿಲ್ಲ. ಈ ರೀತಿ ಹಣ ಪಡೆದವರು ಮನುಷ್ಯರೇ ಅಲ್ಲ. ಅವರಿಗೆ ದೇವರು ಒಳ್ಳೆಯದನ್ನು ಮಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.