ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಉತ್ತರ ಪ್ರದೇಶದ ಪ್ರಯಾಗ್‌ನಲ್ಲಿ ನಡೆಯುತ್ತಿರುವ ಕುಂಭಮೇಳವು ವಿಶ್ವಕ್ಕೆ ನಮ್ಮ ದೇಶದ ಶಕ್ತಿ, ಭಕ್ತಿ ತೋರಿಸಿದೆ ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕೆ.ಎಂ.ನಾಗರಾಜು ಹೆಮ್ಮೆಯಿಂದ ಹೇಳಿದರು.ಸಿದ್ದಾಪುರ ಗ್ರಾಮದಲ್ಲಿ ಲೋಕಾರ್ಪಣೆಗೊಂಡ ಯಲ್ಲಮ್ಮದೇವಿ ದೇಗುಲ, ದೇವಿ ನೂತನ ವಿಗ್ರಹ ಪ್ರತಿಷ್ಟಾಪನೆ, ವಿಮಾನಗೋಪುರ ಕಳಶ ಸ್ಥಾಪನೆ ಮಹೋತ್ಸವದಲ್ಲಿ ಮಾತನಾಡಿ, ಭಾರತದಲ್ಲಿ ನಡೆಯುವಷ್ಟು ಪೂಜೆ, ಪುನಸ್ಕಾರ ಮತ್ತೆಲ್ಲೂ ಕಾಣಲಾಗದು. ವಿಶ್ವದಲ್ಲೆ ನಮ್ಮ ದೇಶ ಧಾರ್ಮಿಕ ಕ್ಷೇತ್ರವಾಗಿ ಹೊರಹೊಮ್ಮಿದೆ ಎಂದರು.
ಮುಜರಾಯಿ ದೇಗುಲದ ಹಣ ಅನ್ಯ ಮತೀಯ ದೇಗುಲ ಅಭಿವೃದ್ಧಿಗೆ ನೀಡುವ ವದಂತಿ ಶುದ್ಧ ಸುಳ್ಳು. ಕುಕ್ಕೆ ಸುಬ್ರಹ್ಮಣ್ಯ, ಮಹದೇಶ್ವರಬೆಟ್ಟದಂತಹ ಯಾವುದೇ ದೇಗುಲದ ಹಣವನ್ನು ಆಯಾ ದೇಗುಲದ ಬ್ಯಾಂಕ್ ಖಾತೆಯಲ್ಲಿ ಇದೆ. ಈ ಕ್ಷೇತ್ರದ ಅಭಿವೃದ್ಧಿಗೆ ಮಾತ್ರ ಮೀಸಲು. ಬೇರೆ ಧರ್ಮದ ಅಭಿವೃದ್ಧಿಗೆ ಬಳಸಲಾಗದು. ವದಂತಿ ಹಬ್ಬಿಸುವ ಸುಳ್ಳುಗಾರರನ್ನು ನಂಬದಿರಿ ಎಂದರು.ನಂಬುಗೆ ಪರಮಾತ್ಮನ ಮೇಲಿನ ಭಕ್ತಿಯಾಗಿದೆ. ಭಯ, ಭಕ್ತಿ ಎರಡನ್ನು ರೂಢಿಸಿಕೊಂಡು ಒಂದೈದು ನಿಮಿಷ ದೇಗುಲದಲ್ಲಿ ಕುಳಿತು ಏಕಾಗ್ರತೆಯಿಂದ ಭಗವಂತನ ಪ್ರಾರ್ಥಿಸಿದರೆ ಇಷ್ಟಾರ್ಥ ಖಚಿತವಾಗಿ ಸಿಗಲಿದೆ. ಬ್ರಹ್ಮಾಂಡದ ಪರಿಪೂರ್ಣ ಹತೋಟಿ ಸೃಷ್ಟಿಕರ್ತ ಪರಮಾತ್ಮನಲ್ಲಿದೆ ಎಂದರು.
ನಮ್ಮ ಆತ್ಮದಲ್ಲಿ ಪರಿಶುದ್ಧತೆ ಬೇಕಿದೆ. ಸರ್ವಾಂತಯಾಮಿ ದೇವರ ಗುಡಿ ನಿರ್ಮಿಸಿ, ಮೂರ್ತಿ ಪ್ರತಿಷ್ಟಾಪಿಸಿ, ಪ್ರಾಣ ಪ್ರತಿಷ್ಟಾಪನೆ ಮಾಡಿದಾಗ ಸಕಾರಾತ್ಮಕ ಶಕ್ತಿ ಇಡೀ ಕ್ಷೇತ್ರಕ್ಕೆ ಲಭಿಸಲಿದೆ. ಈ ಭೂಮಿ ಮೇಲೆ ಇರುವುದು ಒಂದೇ ಜಾತಿ ಅದು ಮಾನವಜಾತಿ. ಅನ್ಯಜಾತಿಗಳನ್ನು ಭಗವಂತ ಒಪ್ಪಲಾರ ಎಂದರು.ಪರಮಾತ್ಮನ ಸೃಷ್ಟಿ ಅಭೂತ ಪೂರ್ಣವಾಗಿದ್ದು, ಎಲ್ಲ ಜೀವಿಗಳನ್ನು ಅರ್ಥೈಸಿಕೊಳ್ಳುವ ಶಕ್ತಿ ಇದೆ. ಸೂರ್ಯನಿಗೆ ಭೂಮಿ ಮುಖ ಮಾಡಿದರೆ ಹಗಲು, ಹಿಂದೆ ಸರಿದರೆ ಕತ್ತಲು. ರಾಜ್ಯದಲ್ಲಿ 34ಸಾವಿರ ಮುಜರಾಯಿ ದೇಗುಲವಿದ್ದರೆ, ಖಾಸಗಿಯಾಗಿ 1.80 ಲಕ್ಷ ದೇಗುಲವಿದೆ. ಎಲ್ಲ ದೇಗುಲಗಳಿಗೆ ಅವಶ್ಯಕತೆ ಸಾರವಾಗಿ ಧನ ಸಹಾಯವಿದೆ. ಇಲ್ಲಿನ ದೇಗುಲಕ್ಕೆ ವಿಮಾನಗೋಪುರವಿದೆ. ರಾಜಗೋಪುರ ನಿರ್ಮಿಸಿದರೆ ಸರ್ಕಾರದಿಂದ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಗ್ರೀಕರು, ಮುಸಲ್ಮಾನರು ದೇಶವನ್ನು ದಾಳಿ ಮಾಡಿ ಲೂಟಿ ಮಾಡಿದರು. ಪ್ರೆಂಚ್, ಗ್ರೀಕರು, ಡಚ್ಚರು, ಬ್ರಿಟಿಷರು ಬಂದು ಹೋದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ದೇವರ ಮೇಲಿನ ನಂಬುಗೆಯ ಪೂಜಾರಾಧನೆ ಶಕ್ತಿಯಿಂದ ಎಂದರು.ಆರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ದೇಗುಲಗಳು ಒಗ್ಗಟ್ಟಿನ , ಭಾವೈಕ್ಯತೆ ಸಂಕೇತವಾಗಿದೆ. ಯುವಕರಲ್ಲಿದ್ವೇಷ ಅಸೂಯೆ ದೂರ ಮಾಡಿ ಶಾಂತಿ, ನೆಮ್ಮದಿ ನೀಡುವ ದೇಗುಲ ನಿರ್ಮಾಣದಷ್ಟೆ ಉಳಿಸಿಕೊಂಡು ಜವಾಬ್ದಾರಿ ಎಲ್ಲರಲಿ ಇರಲಿ ಎಂದರು.
ಹಳ್ಳಿಕಾರ್ ತಳಿಯ ಗೋವುಗಳ ಮೆರವಣಿಗೆ, ಮಹಿಳೆಯರು ಪೂರ್ಣಕುಂಭ ಮೆರವಣಿಗೆಯೊಂದಿಗೆ ಗಣ್ಯರನ್ನು ಸ್ವಾಗತಿಸಲಾಯಿತು. ವಿವಿಧ ಪೂಜೆ, ಹೋಮ ಹವನಾದಿ, ವಿಮಾನಗೋಪುರ ಕಳಶ ಪ್ರತಿಷ್ಟಾಪನೆಯಂತಹ ಹಲವು ಪೂಜಾ ವಿಧಿಗಳು ಜರುಗಿದವು. ಮಹಾಮಂಗಳಾರತಿ, ತೀರ್ಥ ಪ್ರಸಾದ, ಅನ್ನದಾಸೋಹ ನಡೆಯಿತು.ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಪ್ರಕಾಶ್, ಮನ್ಮುಲ್ ಮಾಜಿ ಅಧ್ಯಕ್ಷಚನ್ನಿಂಗೇಗೌಡ, ತಾಪಂ ಮಾಜಿ ಸದಸ್ಯ ಗೂಡೆಹೊಸಹಳ್ಳಿ ಜವರಾಯಿಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಎಂ.ವೀರೇಶಪ್ಪ, ಕಿಕ್ಕೇರಮ್ಮ ಎಳನೀರು ವರ್ತಕರ ಸಂಘದ ಅಧ್ಯಕ್ಷ ಭಾರತೀಪುರ ಪುಟ್ಟಣ್ಣ, ಗ್ಯಾಸ್ ಶ್ರೀನಾಥ್, ಮಂಜೇಗೌಡ, ಕುಮಾರ್, ಸೋಮಶೇಖರ್, ರಂಗೇಗೌಡ ಇದ್ದರು.