ಚಿಕ್ಕಮಗಳೂರುಚಿಕ್ಕಮಗಳೂರು ನಗರದ ಹೊರವಲಯದಲ್ಲಿ ಹಲವು ದಿನಗಳಿಂದ ಸಂಚರಿಸುತ್ತಿದ್ದ ಒಂಟಿ ಸಲಗವನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಶುಕ್ರವಾರ ಆರಂಭಿಸಿದ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
20 ವರ್ಷದ ಆನೆ ಹಿಡಿಯಲು ಹರಸಾಹಸ । ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ । ಅರವಳಿಕೆ ತಜ್ಞರ ಭುಜಕ್ಕೆ ಬಡಿದ ರೆಂಬೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಚಿಕ್ಕಮಗಳೂರು ನಗರದ ಹೊರವಲಯದಲ್ಲಿ ಹಲವು ದಿನಗಳಿಂದ ಸಂಚರಿಸುತ್ತಿದ್ದ ಒಂಟಿ ಸಲಗವನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಶುಕ್ರವಾರ ಆರಂಭಿಸಿದ ಕಾರ್ಯಾಚರಣೆಗೆ ಅಡ್ಡಿಯಾಗಿದೆ.ಸುಮಾರು 20 ವರ್ಷದ ಗಂಡಾನೆ ಸೆರೆಗೆ ತೆರಳಿದ್ದ ಆರು ಕುಮ್ಕಿ ಆನೆಗಳನ್ನೇ ಬೆದರಿಸಿದ್ದರಿಂದ ಅಯ್ಯಪ್ಪ ಎಂಬ ಕುಮ್ಕಿ ಆನೆ ಹಿಮ್ಮೆಟ್ಟಿ ಕಾಡಿನೊಳಗೆ ಓಡಿದ ಘಟನೆ ನಡೆದಿದೆ. ಈ ವೇಳೆ ಅದರ ಮೇಲಿದ್ದ ಮಾವುತನೂ ಕೆಳಕ್ಕೆ ಬಿದ್ದಿದ್ದಾನೆ. ಸಲಗದ ಚಾಣಾಕ್ಷ ಚಲನವಲನ ಹಾಗೂ ಆಕ್ರಮಣಕಾರಿ ವರ್ತನೆಯಿಂದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಹರಸಾಹಸ ಪಡುವಂತಾಗಿದೆ.ಶುಕ್ರವಾರ ಬೆಳಗ್ಗೆಯಿಂದಲೇ ಮುತ್ತಾವರ ಕ್ಯಾಂಪ್ನಿಂದ ಕರೆತಂದಿದ್ದ ಸುಗ್ರೀವ, ಅಯ್ಯಪ್ಪ, ಮಾಣಿಕ್ಯ, ಸಾಗರ್, ಭೀಷ್ಮ ಹಾಗೂ ಜ್ಯೂನಿಯರ್ ಅರ್ಜುನ ಸೇರಿದಂತೆ ಆರು ಕುಮ್ಕಿ ಆನೆಗಳ ನೆರವಿನಿಂದ ಮುತ್ತಾವರ ಸಮೀಪದ ನಲ್ಲೂರು ಗುಡ್ಡದಲ್ಲಿ ಕಾರ್ಯಾಚರಣೆ ಆರಂಭಿಸಲಾಯಿತು. ಎಪಿಸಿಸಿಎಫ್ ಮನೋಜ್ ರಾಜನ್ ಮಾರ್ಗದರ್ಶನದಲ್ಲಿ ಐವರು ನುರಿತ ಪಶು ವೈದ್ಯರು ಹಾಗೂ ಅರವಳಿಕೆ ತಜ್ಞರಾದ ರಮೇಶ್, ವಾಸೀಮ್, ಆದರ್ಶ್ ಮತ್ತು ವಿನಾಯಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಬೇಲೂರಿನಿಂದ ಬಂದಿದ್ದ ಕಾಡಾನೆಗಳ ಹಿಂಡಿನಿಂದ ಬೇರ್ಪಟ್ಟಿದ್ದ ಈ ಗಂಡಾನೆ ಇಂದಾವರ, ಹಳೇಉಪ್ಪಳ್ಳಿ ಸೇರಿದಂತೆ ನಗರದ ಹೊರವಲಯದ ಪ್ರದೇಶಗಳಲ್ಲಿ ಹಲವು ದಿನಗಳಿಂದ ಓಡಾಡುತ್ತಿತ್ತು. ಇದರಿಂದ ಆತಂಕಗೊಂಡಿದ್ದ ಸ್ಥಳೀಯರು ಸಲಗವನ್ನು ಸೆರೆಹಿಡಿಯುವಂತೆ ಒತ್ತಾಯಿಸಿದ್ದರು. ಸರ್ಕಾರದಿಂದ ಅನುಮತಿ ದೊರೆತ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿದೆ.ಕಾರ್ಯಾಚರಣೆ ವೇಳೆ ಕಾಡಾನೆ ಪೊದೆಗಳೊಳಗೆ ಸೇರಿಕೊಂಡು ಸಿಬ್ಬಂದಿಗೆ ಕಾಣಿಸಿಕೊಳ್ಳದೆ ಕಣಾಮುಚ್ಚಾಲೆ ಆಡಿದೆ. ಡ್ರೋನ್ ಕ್ಯಾಮೆರಾ ಮೂಲಕ ಅದರ ಚಲನವಲನ ಗಮನಿಸಿದರೂ ಪೊದೆಗಳಿಂದ ಹೊರಬರದ ಕಾರಣ ಅರವಳಿಕೆ ಮದ್ದು ನೀಡಲು ಸಾಧ್ಯವಾಗಲಿಲ್ಲ.
ಮತ್ತಿಘಟ್ಟ ಗ್ರಾಮದ ಸಮೀಪ ಕಾಡಾನೆ ಏಕಾಏಕಿ ಕುಮ್ಕಿ ಆನೆ ಅಯ್ಯಪ್ಪನ ಮುಂದೆ ಪ್ರತ್ಯಕ್ಷವಾಗಿದ್ದು, ಅದರ ಅಬ್ಬರಕ್ಕೆ ಬೆದರಿದ ಅಯ್ಯಪ್ಪ ಹಿಮ್ಮೆಟ್ಟಿ ಓಡಿದೆ. ಬಳಿಕ ಜ್ಯೂನಿಯರ್ ಅರ್ಜುನನ ನೆರವಿನಿಂದ ಅಯ್ಯಪ್ಪನನ್ನು ಮರಳಿ ಕರೆತರಲಾಯಿತು.ಇದೇ ಸಂದರ್ಭದಲ್ಲಿ ಕಾಡಾನೆ ಮತ್ತು ಕುಮ್ಕಿ ಆನೆಗಳ ಮುಖಾಮುಖಿ ವೇಳೆ ಮರದ ರೆಂಬೆಯೊಂದು ಅರವಳಿಕೆ ತಜ್ಞರ ಭುಜಕ್ಕೆ ಬಡಿದ ಘಟನೆಯೂ ನಡೆದಿದೆ.ಈ ಬೆಳವಣಿಗೆಗಳಿಂದ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಕುಮ್ಕಿ ಆನೆಗಳ ಮೂಲಕ ನಡೆಸುತ್ತಿದ್ದ ಕಾರ್ಯಾ ಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು. ಬಳಿಕ ಡಾಗ್ ಸ್ಕ್ವಾಡ್ ನೆರವಿನಿಂದ ಸಲಗ ಇರುವ ಸ್ಥಳ ಪತ್ತೆ ಕಾರ್ಯ ಆರಂಭಿಸಲಾಯಿತು.ಸಲಗ ನಿರಂತರವಾಗಿ ಸ್ಥಳ ಬದಲಿಸುತ್ತಿದ್ದು, ಕಾರ್ಯಾಚರಣೆ ಸುಳಿವು ಸಿಗುತ್ತಿದ್ದಂತೆ ಪೊದೆಗಳೊಳಗೆ ಸೇರಿಕೊಳ್ಳುತ್ತಿ ರುವುದು ಸಿಬ್ಬಂದಿಗೆ ದೊಡ್ಡ ಸವಾಲಾಗಿದೆ. ಗ್ರಾಮಸ್ಥರಿಗೆ ಎಚ್ಚರಿಕೆ: ಸಲಗ ಸೆರೆ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಮತ್ತಾವರ, ದಂಬದಹಳ್ಳಿ, ನಲ್ಲೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಮೈಕ್ ಮೂಲಕ ಪ್ರಕಟಣೆ ಹೊರಡಿಸಿ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಹಾಗೂ ತೋಟದ ಕೆಲಸಗಳಿಗೆ ತೆರಳದಂತೆ ಸೂಚಿಸಲಾಗಿದೆ. ಸಲಗ ಸೆರೆ ಸಿಗುವವರೆಗೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಮುಂದುವರಿಸಲಾಗಿದೆ.
