ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕುಂದಚೇರಿ (ಚೆಟ್ಟಿಮಾನಿ) ಗ್ರಾ.ಪಂ 2024-25ನೇ ಸಾಲಿನ ಗ್ರಾಮಸಭೆ ಚೆಟ್ಟಿಮಾನಿ ಸಮುದಾಯ ಭವನದಲ್ಲಿ ಗ್ರಾ.ಪಂ. ಅಧ್ಯಕ್ಷ ಪಿ.ಬಿ.ದಿನೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.66/11 ಕೆವಿ ವಿದ್ಯುತ್ ಉಪಕೇಂದ್ರದ ಅಗತ್ಯತೆ ಮತ್ತು ಮೂಲಭೂತ ಸೌಲಭ್ಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಪಂಚಾಯಿತಿ ಸದಸ್ಯ ಹ್ಯಾರೀಸ್ ಮಾತನಾಡಿ, ಪದಕಲ್ಲು ಗ್ರಾಮ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳಿಗೆ ಪಂಚಾಯ್ತಿ ಜಾಗ ಮಂಜೂರಾಗಿದೆ, ಸೋಲಾರ್ ಪ್ಲಾಂಟ್ ಗೆ ಜಾಗದ ಅವಶ್ಯಕತೆ ಇದೆ. ಆದರೆ ಪಂಚಾಯ್ತಿಗೆ ಸೇರಿದ ಜಾಗವನ್ನು ಇತ್ತೀಚೆಗೆ ಹೊರಗಿನ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ತೆರವುಗೊಳಿಸುವಂತೆ ತಹಸೀಲ್ದಾರ್ ಹಾಗೂ ಕಂದಾಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ, ಶಾಸಕರು ಕೂಡ ಸೂಚನೆ ನೀಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಗ್ರಾಮಸ್ಥ ದಬ್ಬಡ್ಕ ಶ್ರೀದರ್ ಮಾತನಾಡಿ, ನಮ್ಮ ಪಂಚಾಯಿತಿ ವ್ಯಾಪ್ತಿಯ ಜಾಗವನ್ನು ಈ ಭಾಗದ ಜನರಿಗೆ ಮತ್ತು ಇಲಾಖೆಗೆ ಮೀಸಲಿಡಬೇಕೆ ಹೊರತು ಹೊರಗಿನವರಿಗೆ ನೀಡಬಾರದು. ತಕ್ಷಣ ಸರ್ವೆ ಮಾಡಬೇಕು ಎಂದು ಒತ್ತಾಯಿಸಿದರು.
ಕಂದಾಯ ನಿರೀಕ್ಷಕ ಶಿವಕುಮಾರ್ ಇದಕ್ಕೆ ಒಪ್ಪಿಗೆ ಸೂಚಿಸಿದರು.ಎಚ್.ಮಧು ಮಾತನಾಡಿ, ಪದಕಲ್ಲು ಗ್ರಾಮದಲ್ಲಿ 33/11 ಕೆ.ವಿ ವಿದ್ಯುತ್ ಉಪಕೇಂದ್ರಕ್ಕೆ 3 ಏಕರೆ ಜಾಗ ಮಂಜೂರಾಗಿದೆ. ಈ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರದಿಂದ ಭವಿಷ್ಯದಲ್ಲಿ ಗ್ರಾಮದ ಜನರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ, ಸಾಮರ್ಥ್ಯ ಹೆಚ್ಚಿಸಬೇಕು ಎಂದರು.
ಇದಕ್ಕೆ ಉತ್ತರಿಸಿದ ಸದಸ್ಯ ಹ್ಯಾರೀಸ್, ಈಗಾಗಲೇ ಈ ಬಗ್ಗೆ ಕೆಪಿಟಿಸಿಎಲ್ ನ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ, ಶಾಸಕರ ಗಮನಕ್ಕೂ ತರಲಾಗಿದೆ. ಹೋಬಳಿ ಮಟ್ಟದ 6 ಗ್ರಾ.ಪಂ, ಪಕ್ಕದ ಹೋಬಳಿಯ 4 ಗ್ರಾ.ಪಂ ಸೇರಿ ಒಟ್ಟು 10 ಪಂಚಾಯಿತಿಯ 40,000 ಜನಸಂಖ್ಯೆಗೆ ಅನುಕೂಲವಾಗಬೇಕಾದರೆ 66/11 ಕೆವಿ ಉಪಕೇಂದ್ರದ ಅಗತ್ಯವಿದೆ ಎಂದರು.ಜಲಜೀವನ್ ಮಿಷನ್ ಯೋಜನೆ ಕುರಿತು ಚರ್ಚಿಸಿ ತಕ್ಷಣ ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಹೊಸ ಕುಡಿಯುವ ನೀರಿನ ಘಟಕಗಳಿಗೆ ವಿದ್ಯುಚ್ಛಕ್ತಿ ಒದಗಿಸಬೇಕೆಂದು ಗ್ರಾಮಸ್ಥರಾದ ಕೀರ್ತಿಕುಮಾರ್, ದಬ್ಬಡ್ಕ ಶ್ರೀಧರ್, ಮಂಗೇರಿರ ಜಗದೀಶ್, ಶರತ್, ರಘು ಒತ್ತಾಯಿಸಿದರು.
ಇದಕ್ಕೆ ಗ್ರಾ.ಪಂ ಅಧ್ಯಕ್ಷ ಪಿ.ಬಿ.ದಿನೇಶ್, ನೋಡಲ್ ಅಧಿಕಾರಿಯಾಗಿ ಉಪಸ್ಥಿತರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಕಿರಿಯ ಅಭಿಯಂತರರು ಹಾಗೂ ಸೆಸ್ಕ್ ಶಾಖಾಧಿಕಾರಿ ಒಪ್ಪಿಗೆ ಸೂಚಿಸಿದರು.ನೂತನ ಮನೆ ನಿರ್ಮಾಣಕ್ಕೆ ಇರುವ ಮಾನದಂಡಗಳ ಬಗ್ಗೆ ಪಿಡಿಓ ಯಾದವ್ ಸಭೆಗೆ ಮಾಹಿತಿ ನೀಡಿದರು. ಕೃಷಿ ಇಲಾಖೆ, ವಿದ್ಯುತ್ ಇಲಾಖೆ, ಜಿ.ಪಂ ಇಂಜಿನಿಯರಿಂಗ್ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಅಂಗನವಾಡಿ, ಆಶಾ ಮತ್ತಿತರ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮಾಹಿತಿಯನ್ನು ಸಭೆಗೆ ಒಪ್ಪಿಸಿದರು.
ಉಪಾಧ್ಯಕ್ಷ ಎಚ್.ಬೇಬಿ ಹಾಗೂ ಸದಸ್ಯರು ಗ್ರಾಮಸ್ಥರಿಗೆ ಅಗತ್ಯ ಮಾಹಿತಿ ನೀಡಿದರು. ಇದೇ ಗ್ರಾಮಸ್ಥರಿಂದ ವಿವಿಧ ಯೋಜನೆಗಳಿಗೆ ಅರ್ಜಿ ಸ್ವೀಕರಿಸಲಾಯಿತು. ಅಭಿವೃದ್ಧಿ ಅಧಿಕಾರಿ ಯಾದವ್ ಸ್ವಾಗತಿಸಿ, ವಂದಿಸಿದರು.