ಸಾರಾಂಶ
ತಾಲೂಕಿನಲ್ಲಿ ಈಚೆಗೆ ಸುರಿದ ಮಳೆಯಿಂದ ಬೆಳೆ ಹಾನಿಯಾಗಿರುವುದನ್ನು ಕುಂದಗೋಳ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಅಬ್ದುಲ್ ಖಾದರ ಹಾಗೂ ಕಿರಿಯ ನ್ಯಾಯಾಧೀಶೆ ಗಾಯತ್ರಿ ಶನಿವಾರ ವೀಕ್ಷಿಸಿದರು.
ಕುಂದಗೋಳ: ತಾಲೂಕಿನಲ್ಲಿ ಈಚೆಗೆ ಸುರಿದ ಮಳೆಯಿಂದ ಬೆಣ್ಣಿ ಹಳ್ಳದ ಪ್ರವಾಹದಿಂದ ತೊಂದರೆಗೀಡಾದ ಮುಳ್ಳೊಳ್ಳಿ ಗ್ರಾಮದ ಸೇತುವೆ ಹಾಗೂ ಹಿರೇನೆರ್ತಿ ಗ್ರಾಮದ ಸೇತುವೆ ಹಾಗೂ ರೈತರ ಜಮೀನಿಗೆ ತೆರಳಿ ಹತ್ತಿ ಬೆಳೆ ಹಾನಿಯಾಗಿರುವುದನ್ನು ಕುಂದಗೋಳ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಅಬ್ದುಲ್ ಖಾದರ ಹಾಗೂ ಕಿರಿಯ ನ್ಯಾಯಾಧೀಶೆ ಗಾಯತ್ರಿ ಶನಿವಾರ ವೀಕ್ಷಿಸಿದರು.
ಈ ವೇಳೆ ನ್ಯಾಯಾಧೀಶರಿಗೆ ಗ್ರಾಮದ ಚಂದ್ರು ಯಕ್ಕಣ್ಣವರ ಮನವಿ ಸಲ್ಲಿಸಿ ಮಾತನಾಡಿ, ಬೆಣ್ಣಿ ಹಳ್ಳಪ್ರವಾಹ ಬಂದು ತುಂಬಾ ತೊಂದರೆಯಾಗಿದೆ. ಪ್ರತಿ ವರ್ಷವೂ ಮಳೆಗಾಲದಲ್ಲಿ ಇದೇ ಸಮಸ್ಯೆ ಅನುಭವಿಸುತ್ತಿದ್ದೇವೆ. ಆದಷ್ಟು ಬೇಗನೆ ಈ ಹಳ್ಳದ ಅಗಲೀಕರಣ, ತಡೆಗೋಡೆ ನಿರ್ಮಾಣವಾಗಬೇಕು. ಬಿತ್ತನೆ ಮಾಡಿದ್ದ ಎಲ್ಲ ಬೆಳೆಗಳೂ ಹಾಳಾಗಿದ್ದು, ಸರ್ಕಾರ ಆದಷ್ಟು ಬೇಗ ಸೂಕ್ತ ಪರಿಹಾರ ನೀಡುವ ಕಾರ್ಯವಾಗಬೇಕು ಎಂದು ಅಳಲು ತೋಡಿಕೊಂಡರು.ತಕ್ಷಣ ಹಿರಿಯ ನ್ಯಾಯಾಧೀಶ ಅಬ್ದುಲ್ ಖಾದರ ಅವರು ಕಂದಾಯ ನಿರೀಕ್ಷಕ ಅಶೋಕ ಮಲ್ಲೂರಗೆ ಸೂಚಿಸಿ, ಸರ್ಕಾರಿಂದ ಪರಿಹಾರ ಕೊಡುವ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಹಿರೇನೆರ್ತಿ ಗ್ರಾಮಸ್ಥರು ಹಾಗೂ ಕರವೇ ತಾಲೂಕು ಅಧ್ಯಕ್ಷ ಕಲ್ಲಪ್ಪ ಹರಕುಣಿ ಮಾತನಾಡಿ, ಈಚೆಗೆ ಸುರಿದ ಮಳೆಯಿಂದ ಬೆಣ್ಣಿ ಹಳ್ಳದ ಪ್ರವಾಹದಿಂದ ಸಾಕಷ್ಟು ಹಾನಿ ಸಂಭವಿಸಿ ರೈತರ ಜಮೀನು ಹಾಗೂ ಕೆಲ ಮನೆಗಳು ಕುಸಿದು ಹೋಗಿವೆ. ಹೊಲಗಳಲ್ಲಿ ಬಿತ್ತಿದ್ದ ಕಡಲೆ, ಗೋಧಿ, ಕುಸುಬೆ ಬೆಳೆಗಳು ಹಾಳಾಗಿವೆ. ಹೀಗಾಗಿ, ರೈತರಿಗೆ ಉಚಿತ ಮರು ಬೀಜ ವಿತರಣೆಯ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಹಾನಿಯಾದ ಪ್ರದೇಶದಲ್ಲಿ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ನೀಡಬೇಕು ಎಂದರು.ಈ ವೇಳೆ ವಕೀಲರ ಸಂಘಧ ಅಧ್ಯಕ್ಷ ಬಿ.ಪಿ. ಪಾಟೀಲ, ಅಶೋಕ ಕ್ಯಾರಕಟ್ಟಿ, ವೈ.ಎಂ. ತಹಶೀಲ್ದಾರ್, ಜಿ.ಬಿ. ಸೊರಟೂರ, ರಘುನಾಥಗೌಡ ಕತ್ತಿ, ಖಾಜಾಹುಸೇನ ಲಾಠಿ, ಚಂದ್ರು ಯಕ್ಕಣ್ಣವರ, ಚಂದ್ರವ್ವ ಬೆಂತೂರ, ರಾಘವೇಂದ್ರ ಕುರಿ ಸೇರಿದಂತೆ ಹಲವರಿದ್ದರು.