ಸಾರಾಂಶ
ಜನಪ್ರತಿನಿಧಿಗಳ ಕುಟುಂಬಸ್ಥರಿಗೆ ನಿವೇಶನ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಉಪಾಧ್ಯಕ್ಷ ಮಂಜುನಾಥ ಹಿರೇಮಠ ಪತ್ನಿ ಲಕ್ಷ್ಮೀ ಹಾಗೂ ಸದಸ್ಯ ಹನುಮಂತಪ್ಪ ಮೇಲಿನಮನಿ ಪತ್ನಿ ಕಮಲವ್ವ ನಿವೇಶನ ಪಡೆದಿದ್ದಾರೆ. ಇದು ಹೇಗೆ ಸಾಧ್ಯವಾಯಿತು ಎಂದು ಸದಸ್ಯ ಗಣೇಶ ಕೋಕಾಟೆ ಪ್ರಶ್ನಿಸಿದ್ದಾರೆ.
ಕುಂದಗೋಳ:
ಪಟ್ಟಣ ಪಂಚಾಯಿತಿ ಆಶ್ರಯ ಯೋಜನೆಯಡಿ ಫಲಾನುಭವಿಗಳ ಆಯ್ಕೆಯಲ್ಲಿ ಉಪಾಧ್ಯಕ್ಷ ಮತ್ತು ಸದಸ್ಯರ ಪತ್ನಿಗೆ ಕಾನೂನು ಬಾಹಿರವಾಗಿ ನಿವೇಶನ ನೀಡಲಾಗಿದೆ ಎಂದು ಗುರುವಾರ ಅಧ್ಯಕ್ಷ ಶ್ಯಾಮಸುಂದರ ದೇಸಾಯಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಗಣೇಶ ಕೋಕಾಟೆ ಗಂಭೀರ ಆರೋಪ ಮಾಡಿದರು. ಇದರಿಂದ ಸಭೆಯಲ್ಲಿ ಭಾರಿ ಗದ್ದಲ ಉಂಟಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.ಜನಪ್ರತಿನಿಧಿಗಳ ಕುಟುಂಬಸ್ಥರಿಗೆ ನಿವೇಶನ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಉಪಾಧ್ಯಕ್ಷ ಮಂಜುನಾಥ ಹಿರೇಮಠ ಪತ್ನಿ ಲಕ್ಷ್ಮೀ ಹಾಗೂ ಸದಸ್ಯ ಹನುಮಂತಪ್ಪ ಮೇಲಿನಮನಿ ಪತ್ನಿ ಕಮಲವ್ವ ನಿವೇಶನ ಪಡೆದಿದ್ದಾರೆ. ಇದು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದ ಕೋಕಾಟೆ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇವರ ಆರೋಪಕ್ಕೆ ಇತರ ಮಹಿಳಾ ಸದಸ್ಯರೂ ಧ್ವನಿಗೂಡಿಸಿದರು. ಆರೋಪಗಳಿಗೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಶಾಸಕರ ನೇತೃತ್ವದ ಆಶ್ರಯ ಸಮಿತಿಯಲ್ಲಿ ಅನುಮೋದನೆಯಾಗಿದೆ. ಇದರಲ್ಲಿ ನಮ್ಮ ಪಾತ್ರ ಸೀಮಿತ ಎಂದರು.
ಸದಸ್ಯ ಮಲ್ಲಿಕಾರ್ಜುನ ಕಿರೆಸೂರ, ಪಂಚಾಯಿತಿ ಕಾಮಗಾರಿಗಳ ಬಿಲ್ ಕುರಿತು ಪ್ರಮುಖ ವಿಷಯ ಪ್ರಸ್ತಾಪಿಸಿದರು. ಟಿವಿಎಸ್ ಶೋರೂಂ ಎದುರು ಪೈಪ್‌ಲೈನ್ ದುರಸ್ತಿಗಾಗಿ ಲಕ್ಷಾಂತರ ರೂಪಾಯಿಗಳ ಬಿಲ್ ತೆಗೆಯಲಾಗಿದೆ. ಇದಕ್ಕೆ ಯಾವುದೇ ನಿಯಮಗಳಿಲ್ಲವೇ? ಇದು ಮುಖ್ಯಾಧಿಕಾರಿಗಳ ಗಮನಕ್ಕೆ ಬಂದು ಸಹಿ ಸಹ ಆಗಿದೆ. ಇದನ್ನು ತಾವು ಪರಿಶೀಲಿಸಿಲ್ಲವೇ ಎಂದು ಮುಖ್ಯಾಧಿಕಾರಿ ಪ್ರಶ್ನಿಸಿದರು. ಆಗ ಮುಖ್ಯಾಧಿಕಾರಿ, ಸಿಬ್ಬಂದಿ ಮಂಜುನಾಥ ಎನ್ನುವವರು ರಜೆಯಲ್ಲಿದ್ದಾರೆ. ಅವರು ಬಂದ ಮೇಲೆ ವಿಚಾರಿಸಿ ಲೋಪದೋಷ ಕಂಡುಬಂದರೆ ಅವರನ್ನು ವಜಾ ಮಾಡುತ್ತೇನೆ ಎಂದು ಭರವಸೆ ನೀಡಿದರು. ಇದೇ ವೇಳೆ, ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ನಿವೇಶನ ತೆರವುಗೊಳಿಸಲು 15 ದಿನಗಳ ಗಡುವು ನೀಡಲಾಯಿತು.ಸದಸ್ಯ ವಾಗೀಶ ಗಂಗಾಯಿ ಮಾತನಾಡಿ, ಪಟ್ಟಣದಲ್ಲಿ ಸಾಕಷ್ಟು ಅತಿಕ್ರಮಣ ಕಟ್ಟಡಗಳಿದ್ದು ಅವುಗಳನ್ನು ತೆರವುಗೊಳಿಸಲು ಆಗ್ರಹಿಸಿದರು. ಸದಸ್ಯ ಪ್ರವೀಣ ಬಡ್ನಿ, ಅಧ್ಯಕ್ಷ ಶ್ಯಾಮಸುಂದರ ದೇಸಾಯಿ ಮಾತನಾಡಿದರು.
ಸಭೆಯಲ್ಲಿ ಉಪಾಧ್ಯಕ್ಷ ಮಂಜುನಾಥ ಹಿರೇಮಠ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಸಾಬ್, ಶಿರೂರ, ಸದಸ್ಯರಾದ ದಿಲೀಪ್ ಕಲಾಲ, ಹನುಮಂತಪ್ಪ ಮೇಲಿನಮನಿ, ಹನುಮಂತಪ್ಪ ರಣತೂರ, ಬಸವರಾಜ ತಳವಾರ, ಸುನೀತಾ ಪಾಟೀಲ, ಭುವನೇಶ್ವರಿ ಕೌಲಗೇರಿ, ನೀಲಮ್ಮ ಕುಂದಗೋಳ. ಕಮಲಾಕ್ಷಿ ಕಾಲವಾಡ, ಬಸಮ್ಮ ಕಟಗಿ, ಸರತಾಜಬೇಗಂ ಮುಲ್ಲಾ ಇದ್ದರು.