ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಶುರು: ಉತ್ತಮ ಪ್ರತಿಕ್ರಿಯೆ

| Published : Mar 10 2024, 01:30 AM IST / Updated: Mar 10 2024, 01:03 PM IST

ಸಾರಾಂಶ

ಬಾಂಬ್‌ ಸ್ಫೋಟದಿಂದ ಹಾನಿಗೆ ಒಳಗಾಗಿದ್ದ ಕುಂದಲಹಳ್ಳಿ ರಾಮೇಶ್ವರಂ ಕೆಫೆ ಶಿವರಾತ್ರಿ ಹಬ್ಬದ ದಿನದಂದು ಆರಂಭವಾಗಿದೆ. ಜನರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಾಂಬ್‌ ಸ್ಫೋಟದಿಂದ ದೇಶಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಕುಂದಲಹಳ್ಳಿಯ ‘ದಿ ರಾಮೇಶ್ವರಂ ಕೆಫೆ’ ಶನಿವಾರದಿಂದ ಪುನರಾರಂಭವಾಗಿದೆ.

ಮಾರ್ಚ್‌ 1ರಂದು ನಡೆದ ಬಾಂಬ್‌ ಸ್ಫೋಟದಿಂದ ಹಾನಿಯಾಗಿದ್ದ ಹೋಟೆಲನ್ನು ದುರಸ್ತಿ ಮಾಡಲಾಗಿದೆ. ಶುಕ್ರವಾರ ಶಿವರಾತ್ರಿ ಹಬ್ಬದ ದಿನ ಹೋಟೆಲ್‌ನಲ್ಲಿ ಹೋಮ-ಹವನ, ಪೂಜೆ-ಪುನಸ್ಕಾರ ನೆರವೇರಿಸಲಾಗಿತ್ತು. ಶನಿವಾರ ಬೆಳಗ್ಗೆಯಿಂದಲೇ ಸಾರ್ವಜನಿಕ ಸೇವೆಗೆ ಹೋಟೆಲ್ ಮುಕ್ತಗೊಳಿಸಲಾಯಿತು.

ಮೆಟಲ್‌ ಡಿಟೆಕ್ಟರ್‌ ಅಳವಡಿಕೆ: ಬಾಂಬ್‌ ಸ್ಫೋಟದಂತಹ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಪೊಲೀಸರ ಸೂಚನೆ ಮೇರೆಗೆ ಹೋಟೆಲ್‌ನ ಪ್ರವೇಶ ಸ್ಥಳದಲ್ಲಿ ಎರಡು ಲೋಹ ಶೋಧಕ ದ್ವಾರ (ಮೆಟಲ್‌ ಡಿಟೆಕ್ಟರ್‌) ಅಳವಡಿಸಲಾಗಿದೆ. 

ಈ ಲೋಹ ಶೋಧಕ ದ್ವಾರದ ಮೂಲಕ ಹೋಟೆಲ್‌ ಪ್ರವೇಶಿಸಿದ ಗ್ರಾಹಕರನ್ನು ಸೆಕ್ಯೂಟಿರಿ ಗಾರ್ಡ್‌ಗಳು ಬ್ಯಾಗ್‌ಗಳನ್ನು ಪರಿಶೀಲಿಸಿ ಬಳಿಕ ಒಳಗೆ ಪ್ರವೇಶ ಕಲ್ಪಿಸಿದರು.

ಬೆಳಗ್ಗೆಯಿಂದಲೇ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಹೋಟೆಲ್‌ಗೆ ಭೇಟಿ ನೀಡಿದರು. ಎಂಟು ದಿನದ ಹಿಂದೆ ಈ ಹೋಟೆಲ್‌ನಲ್ಲಿ ನಡೆದ ಬಾಂಬ್ ಸ್ಫೋಟದ ಬಗ್ಗೆ ಗ್ರಾಹಕರಲ್ಲಿ ಅಂತಹ ಆತಂಕವೇನು ಕಂಡು ಬರಲಿಲ್ಲ. ಬೆಳಗ್ಗೆಯಿಂದ ರಾತ್ರಿವರೆಗೆ ಗ್ರಾಹಕರ ಸಂಖ್ಯೆ ಏರುಮುಖವಾಗಿತ್ತು.

ಜನ ಸ್ಪಂದನೆ: ರಾವ್‌

ಸುದ್ದಿಗಾರರೊಂದಿಗೆ ಮಾತನಾಡಿದ ರಾಮೇಶ್ವರಂ ಕೆಫೆ ಮಾಲೀಕ ರಾಘವೇಂದ್ರ ರಾವ್‌, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಯಾವುದೇ ಆತಂಕ ಇಲ್ಲದೆ ಜನರ ಹೋಟೆಲ್‌ಗೆ ಬರುತ್ತಿದ್ದಾರೆ. 

ಹೊಸದಾಗಿ ಸುರಕ್ಷತಾ ಕ್ರಮಗಳನ್ನು ತೆಗದುಕೊಂಡಿದ್ದೇವೆ. ಇದಕ್ಕೆ ನುರಿತ ಸಿಬ್ಬಂದಿಯನ್ನು ಕೆಲಸಕ್ಕೆ ನಿಯೋಜಿಸಿದ್ದೇವೆ ಎಂದು ಹೇಳಿದರು.

ಬಾಂಬ್‌ ಸ್ಫೋಟ ಪ್ರಕರಣ ಸಂಬಂಧ ಘಟನೆಯ ಹಿಂದಿನ 20 ದಿನಗಳ ಸಿಸಿಟಿವಿ ದೃಶ್ಯಾವಳಿಗಳನ್ನು ತನಿಖಾಧಿಕಾರಿಗಳಿಗೆ ನೀಡಿದ್ದೇವೆ. ನಮ್ಮ ಎಲ್ಲ ಶಾಖೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಲಾಗಿದೆ ಎಂದರು.