ಉಡುಪಿ: ಜಿಲ್ಲೆಯಲ್ಲಿ ಮತ್ತೆ ಧಾರಾಕಾರ ಮಳೆ : ಭಾರಿ ಮಳೆಗೆ 200 ವರ್ಷದ ಅರಳಿಮರ ಧರಶಾಹಿ!

| Published : Jul 19 2024, 12:56 AM IST / Updated: Jul 19 2024, 11:49 AM IST

ಉಡುಪಿ: ಜಿಲ್ಲೆಯಲ್ಲಿ ಮತ್ತೆ ಧಾರಾಕಾರ ಮಳೆ : ಭಾರಿ ಮಳೆಗೆ 200 ವರ್ಷದ ಅರಳಿಮರ ಧರಶಾಹಿ!
Share this Article
  • FB
  • TW
  • Linkdin
  • Email

ಸಾರಾಂಶ

ಬೃಹತ್‌ ಗಾತ್ರದ ಅರಳಿಮರ ಪಕ್ಕದ ಹಳೇಕೋಟೆ ಮನೆಯ ಕಂಪೌಂಡ್‌ ಒಳಗೆ ಬಿದ್ದಿದ್ದು, ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ ಸೇರಿದಂತೆ 4-5 ವಿದ್ಯುತ್ ಕಂಬಗಳು ತುಂಡಾಗಿವೆ.

 ಕುಂದಾಪುರ : ನಗರದ ಚಿಕ್ಕಮ್ಮನ ಸಾಲು ರಸ್ತೆಯ ಅಮ್ಮರಸನ ಮನೆ ಬಳಿಯಿರುವ ಅಂದಾಜು 200ರಿಂದ 250 ವರ್ಷದ ಅರಳಿ ಮರ ಗುರುವಾರ ಬೆಳಗ್ಗೆ ಸುರಿದ ಭಾರಿ ಮಳೆಗೆ ಧರಶಾಹಿಯಾಗಿದೆ.ಬೃಹತ್‌ ಗಾತ್ರದ ಅರಳಿಮರ ಪಕ್ಕದ ಹಳೇಕೋಟೆ ಮನೆಯ ಕಂಪೌಂಡ್‌ ಒಳಗೆ ಬಿದ್ದಿದ್ದು, ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ ಸೇರಿದಂತೆ 4-5 ವಿದ್ಯುತ್ ಕಂಬಗಳು ತುಂಡಾಗಿವೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಮೆಸ್ಕಾಂ ಸಿಬ್ಬಂದಿ ಆಗಮಿಸಿದ್ದು, ಅರಳಿಮರವನ್ನು ತೆರವುಗೊಳಿಸುವ ಹಾಗೂ ವಿದ್ಯುತ್ ವ್ಯವಸ್ಥೆ ಸರಿಪಡಿಸುವ ಕಾರ್ಯದಲ್ಲಿ ತೊಡಗಿದರು.ಬುಡ ಸಹಿತ ಅರಳಿ ಮರದ ಉರುಳಿ ಬಿದ್ದ ಪರಿಣಾಮ ಅರಳಿ ಕಟ್ಟೆಯ ಬುಡದಲ್ಲಿ ಪ್ರತಿಷ್ಠಾಪಿಸಿದ್ದ ನಾಗ ದೇವರ ಕಲ್ಲುಗಳು ಕೂಡ ಕಿತ್ತು ಬಂದು ಜಖಂಗೊಂಡಿದೆ.

ಉಡುಪಿ: ಜಿಲ್ಲೆಯಲ್ಲಿ ಮತ್ತೆ ಧಾರಾಕಾರ ಮಳೆ

ಉಡುಪಿ ಜಿಲ್ಲೆಯಲ್ಲಿ ಗಾಳಿಮಳೆಗೆ 7 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. ಒಂದು ಶಾಲೆಯ ಮಾಡು, ಗೋಡೆಗಳು ಕುಸಿದಿವೆ, ಮನೆಯೊಂದರ ಮೇಲೆ ಮರ ಉರುಳಿ ಇಬ್ಬರಿಗೆ ಗಾಯಗಳಾಗಿವೆ.ಜಿಲ್ಲೆಯಲ್ಲಿ ಮುಖ್ಯವಾಗಿ ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗಿದೆ. ಮಳೆಗೆ ಜಿಲ್ಲೆಯಲ್ಲಿ ಒಟ್ಟು 33 ಮನೆಗಳಿಗೆ ಹಾನಿಯಾಗಿದ್ದು, ಸುಮಾರು 20 ಲಕ್ಷ ರು.ಗೂ ಅಧಿಕ ನಷ್ಟವಾಗಿದೆ.ಬುಧವಾರ ರಾತ್ರಿಯ ಧಾರಾಕಾರ ಮಳೆಗೆ ಮತ್ತೆ ಜಿಲ್ಲೆಯ ನದಿಗಳಲ್ಲಿ ಮತ್ತು ಅಕ್ಕಪಕ್ಕದ ತಗ್ಗುಪ್ರದೇಶಗಳಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಗುರುವಾರ ಬೆಳಗ್ಗೆ ಮಳೆ ಸ್ವಲ್ಪ ಕಡಿಮೆಯಾಗಿ, ಪ್ರವಾಹ ಇಳಿಮುಖವಾಗಿತ್ತು. ಸಂಜೆ ಮತ್ತೆ ಆರಂಭವಾದ ಜಡಿ ಮಳೆ ತಗ್ಗುಪ್ರದೇಶಗಳು ಜಲಾವೃತವಾಗುವ ಆತಂಕಕ್ಕೆ ಕಾರಣವಾಗಿವೆ.

ಕುಂದಾಪುರ ತಾಲೂಕಿನ ಖಾರ್ವಿಕೇರಿ ಈಸ್ಟ್ ಬ್ಲಾಕ್ ವಾರ್ಡಿನ ಬಸವ್ ನಾಯ್ಕ್ ಅವರ ಮನೆ ಮೇಲೆ ಮರ ಬಿದ್ದು ಮನೆಗೆ ಭಾಗಶಃ ಹಾನಿಯಾಗಿದೆ. ಜೊತೆಗೆ ಮನೆಯಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ.ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದ ಕೊಳ್ಕೆರೆ ಎಂಬಲ್ಲಿ ಸರ್ಕಾರಿ ಶಾಲೆ ಮೇಲೆ ಮರ ಬಿದ್ದು ಮಾಡು ಮತ್ತು ಗೋಡೆಗೆ ಹಾನಿಯಾಗಿದೆ. ರಾತ್ರಿ ಈ ಘಟನೆ ಸಂಭವಿಸಿದ್ದರಿಂದ ಯಾರಿಗೂ ಅಪಾಯ ಉಂಟಾಗಿಲ್ಲ.

ಕಾಪು ತಾಲೂಕಿನ ಹೆಜಮಾಡಿ ಸೇತುರಾಮ ರಾವ್ ಅವರ ಮನೆ ಗಾಳಿಮಳೆ ಸಂಪೂರ್ಣ ಹಾನಿಗೊಂಡು 1,00,000 ರು., ಕೋಟೆ ಗ್ರಾಮದ ರಾಧಾ ಸೀತಾರಾಮ ಅವರ ಮನೆಯ ಗೋಡೆ ಕುಸಿದು 2,00,000 ರು., ಉಡುಪಿ ತಾಲೂಕಿನ ಕುತ್ಪಾಡಿ ಗ್ರಾಮದ ಶಾರದಾ ಪೂಜಾರಿ ಅವರ ಮನೆಗೆ ಸಂಪೂರ್ಣ ಹಾನಿಯಾಗಿ 1,50,000 ರು., ಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಗ್ರಾಮದ ತಿಮ್ಮಪ್ಪ ಅವರ ವಾಸ್ತವ್ಯದ ಮನೆಗೆ 1,50,000 ರು., ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮಗ ಗಿರಿಜಾ ಪೂಜಾರಿ ಅವರ ಮನೆಗೆ 2,00,000, ಚಿತ್ರಪಾಡಿ ಗ್ರಾಮದ ಲಚ್ಚ ಅವರ ಮನೆಗೆ 3,00,000 ರು. ಮತ್ತು ಬೈಂದೂರು ತಾಲೂಕಿನ ನಾಡ ಗ್ರಾಮದ ನರಸಿಂಹ ಆಚಾರ್ಯ ಅವರ ಮನೆಗೆ 2,00,000 ರು.ಗಳಷ್ಟು ಭಾರಿ ನಷ್ಟವಾಗಿದೆ.ಕುಂದಾಪುರ ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು, ಆಸ್ತಿಪಾಸ್ತಿಗೂ ಹೆಚ್ಚು ಹಾನಿಯಾಗಿದೆ. ಇಲ್ಲಿ ಬುಧವಾರವೊಂದೇ ದಿನದಲ್ಲಿ 13 ಮನೆಗಳಿಗೆ ಹಾನಿಯಾಗಿದ್ದು, ಸುಮಾರು 4.75 ಲಕ್ಷ ರು.ಗೂ ಅಧಿಕ ನಷ್ಟ ಸಂಭವಿಸಿದೆ.

ಉಳಿದಂತೆ ಬ್ರಹ್ಮಾವರ ತಾಲೂಕಿನಲ್ಲಿ 10 ಮನೆಗಳಿಗೆ ಹಾನಿಯಾಗಿ 8.60 ಲಕ್ಷ ರು. ನಷ್ಟವಾಗಿದೆ. ಕಾಪು ತಾಲೂಕಿನ 7 ಮನೆಗಳಿಗೆ 4.40 ಲಕ್ಷ ರು. ನಷ್ಟ ಸಂಭವಿಸಿದೆ. ಕಾರ್ಕಳ ತಾಲೂಕಿನ 3 ಮನೆಗಳಿಗೆ 1.30 ಲಕ್ಷ ರು., ಬೈಂದೂರು ತಾಲೂಕಿನ 1 ಮನೆಗೆ 2 ಲಕ್ಷ ರು., ಉಡುಪಿ ತಾಲೂಕಿನಲ್ಲಿ 1 ಮನೆಗೆ 1.50 ಲಕ್ಷ ರು. ನಷ್ಟವಾಗಿದೆ.ಕುಂದಾಪುರ ತಾಲೂಕಿನ ಹರ್ಕೂರು ಗ್ರಾಮದ ಸಂತೋಷ್ ಶೆಟ್ಟಿ ಅವರ ತೋಟಗಾರಿಕೆ ಬೆಳೆಗೆ ಗಾಳಿ ಮಳೆಯಿಂದ 6,000 ರು., ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ವಿನೋದ ಎಸ್. ಶೆಟ್ಟಿ ಅವರ ತೋಟಗಾರಿಕೆ ಬೆಳೆಗೆ 30,000 ರು. ಗ‍ಳಷ್ಟು ಹಾನಿಯಾಗಿದೆ.

ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ ದಿವ್ಯಮತಿ ಪ್ರಕಾಶ್ ಶೆಟ್ಟಿ ಅವರ ಜಾನುವಾರು ಕೊಟ್ಟಿಗೆ ಮಳೆಯಿಂದ ಹಾನಿಯಾಗಿ 40,000 ರು. ಮತ್ತು ಹೊಸಂಗಡಿ ಗ್ರಾಮದ ಸಾಕು ಸುಬ್ರಾಯ ಭಂಡಾರಿ ಅವರ ಕೊಟ್ಟಿಗೆಗೆ ಮಳೆಯಿಂದ 20,000 ರು.ನಷ್ಟು ಹಾನಿಯಾಗಿದೆ.ಗುರುವಾರ ಮುಂಜಾನೆ ವರೆಗೆ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 86.80 ಮಿ.ಮೀ. ಮಳೆಯಾಗಿದೆ. ಇದರಲ್ಲಿ ಬೈಂದೂರು ತಾಲೂಕಿನಲ್ಲಿ ಅತೀ ಹೆಚ್ಚು 125.40 ಮಿ.ಮೀ. ಮಳೆಯಾಗಿದೆ. ಉಳಿದಂತೆ ಕಾರ್ಕಳ 97.20, ಕುಂದಾಪುರ 83.80, ಉಡುಪಿ 52.70, ಬೈಂದೂರು 125.40, ಬ್ರಹ್ಮಾವರ 63.60, ಕಾಪು 74.80, ಹೆಬ್ರಿ 76.80 ಮಿ.ಮೀ. ಮಳೆ ದಾಖಲಾಗಿದೆ.