ಸಾರಾಂಶ
ಬಿಜೂರು ಹೋಸ್ಕೋಟೆಯ ಉತ್ಕೃಷ್ಟ ಸಭಾಭವನದಲ್ಲಿ ಆತ್ಮ ಯೋಜನೆಯಡಿ ಡ್ರೋನ್ ಮೂಲಕ ಗೊಬ್ಬರ ಸಿಂಪರಣೆ ಪ್ರಾತ್ಯಕ್ಷಿಕೆ ಮತ್ತು ಕಿಸಾನ್ ಗೋಷ್ಠಿ ಕಾರ್ಯಕ್ರಮ ನಡೆಯಿತು.
ಕುಂದಾಪುರ: ಕುಂದಾಪುರ ತಾಲೂಕು ಕೃಷಿ ಇಲಾಖೆ ಹಾಗೂ ಬೈಂದೂರಿನ ರೈತ ಸಂಪರ್ಕ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಬಿಜೂರು ಹೋಸ್ಕೋಟೆಯ ಉತ್ಕೃಷ್ಟ ಸಭಾಭವನದಲ್ಲಿ ಆತ್ಮ ಯೋಜನೆಯಡಿ ಡ್ರೋನ್ ಮೂಲಕ ಗೊಬ್ಬರ ಸಿಂಪರಣೆ ಪ್ರಾತ್ಯಕ್ಷಿಕೆ ಮತ್ತು ಕಿಸಾನ್ ಗೋಷ್ಠಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಉಪಯೋಜನಾ ನಿರ್ದೇಶಕ (ಆತ್ಮ) ಡಾ. ರಾಜೇಶ್ ಡಿ.ಪಿ. ಮಾತನಾಡಿ, ಹರಳು ರೂಪದ ಯೂರಿಯಾಗೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಬಳಕೆ ಮಾಡುವುದರಿಂದ ರೈತರಿಗೆ ಖರ್ಚು ಕಡಿಮೆಯಾಗಲಿದೆ. ರೈತರು ಕಡಿಮೆ ದರದಲ್ಲಿ ದೊರೆಯುವ ಪರಿಸರ ಸ್ನೇಹಿ ನ್ಯಾನೋ ಯೂರಿಯಾ ಬಳಕೆ ಮಾಡುವುದರಿಂದ ಮಣ್ಣಿನ ಆರೋಗ್ಯ ಫಲವತ್ತತೆಯನ್ನು ಕಾಪಾಡಬಹುದು ಎಂದರು.ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ತಜ್ಞ ಡಾ. ನವೀನ್ ನ್ಯಾನೋ ಯೂರಿಯಾ ಉಪಯೋಗಗಳ ಬಗ್ಗೆ, ಸಸ್ಯಗಳಲ್ಲಿ ಅದು ಕಾರ್ಯನಿರ್ವಹಿಸುವ ಬಗ್ಗೆ ಹಾಗೂ ಯೂರಿಯಾ ಬಳಸುವ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಬಿಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೆನ್ನಮ್ಮ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಂಜಿತ್ ಪೂಜಾರಿ, ಬೈಂದೂರು ಕೃಷಿಕ ಸಮಾಜ ಅಧ್ಯಕ್ಷ ವೆಂಕಟೇಶ ಎಚ್., ಜಯರಾಮ್ ಶೆಟ್ಟಿ, ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ. ನಾಗರಾಜ್ ನಾಯಕ್, ಶ್ರೀಧರ್ ಬಿಲ್ಲವ, ಗಾಯತ್ರಿ ದೇವಿ, ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ದೀಕ್ಷಿತಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.