ಕುಂದಾಪುರ: ಸರ್ಕಾರಿ ಬಸ್‌ಗಾಗಿ ನಾಡ, ಆಲೂರು ಹಕ್ಲಾಡಿ ಗ್ರಾಮಸ್ಥರಿಂದ ಧರಣಿ

| Published : Feb 09 2025, 01:32 AM IST

ಸಾರಾಂಶ

ಸರ್ಕಾರಿ ಬಸ್‌ಗಳು ಇಲ್ಲದ ಕುಂದಾಪುರ ಆಲೂರು, ಹೊಯ್ಯಾಣ ಕ್ರಾಸ್, ತಾರಿಬೇರು, ಅಕ್ಷಾಲಿಬೆಟ್ಟು ಕೋಣ್ಕಿ, ನಾಡ, ಮೊವಾಡಿ ಮಾರ್ಗವಾಗಿ ಕುಂದಾಪುರಕ್ಕೆ ಪರ್ಮಿಟ್ ನೀಡಬೇಕು ಎಂದು ಆಗ್ರಹಿಸಿ ಮಣಿಪಾಲದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಚೇರಿ ಎದುರು ಗ್ರಾಮಸ್ಥರು ಧರಣಿ ನಡೆಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಸರ್ಕಾರಿ ಬಸ್‌ಗಳು ಇಲ್ಲದ ಕುಂದಾಪುರ ಆಲೂರು, ಹೊಯ್ಯಾಣ ಕ್ರಾಸ್, ತಾರಿಬೇರು, ಅಕ್ಷಾಲಿಬೆಟ್ಟು ಕೋಣ್ಕಿ, ನಾಡ, ಮೊವಾಡಿ ಮಾರ್ಗವಾಗಿ ಕುಂದಾಪುರಕ್ಕೆ ಪರ್ಮಿಟ್ ನೀಡಬೇಕು ಎಂದು ಆಗ್ರಹಿಸಿ ಮಣಿಪಾಲದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಚೇರಿ ಎದುರು ಗ್ರಾಮಸ್ಥರು ಧರಣಿ ನಡೆಸಿದರು.ಸ್ಥಳೀಯ ಮುಖಂಡರಾದ ರಾಜೀವ ಪಡುಕೋಣೆ ಮಾತನಾಡಿ, ನಾವು ಕೇಳುತ್ತಿರುವ ಮಾರ್ಗದಲ್ಲಿ ಯಾವುದೇ ಬಸ್‌ಗಳು ಓಡಾಡುತ್ತಿಲ್ಲ. ಇಲ್ಲಿನ ಗ್ರಾಮೀಣ ಪ್ರದೇಶದ ಜನರು ಹಲವಾರು ವರ್ಷಗಳಿಂದ ಬಸ್ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಮಕ್ಕಳು ಶಿಕ್ಷಣಕ್ಕಾಗಿ, ಉದ್ಯೋಗ ಖಾತ್ರಿ ಕೂಲಿಕಾರರು ಪ್ರಯಾಣಕ್ಕೆ ದುಬಾರಿ ವೆಚ್ಚ ನೀಡಿ ಆದಾಯ ಕಳೆದುಕೊಳ್ಳುತ್ತಿದ್ದಾರೆ. ಪ್ರಾಧಿಕಾರ ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಅರಿತು ಬಸ್ ಸೌಲಭ್ಯ ನೀಡಬೇಕು, ಇಲ್ಲವಾದಲ್ಲಿ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಕೃಷಿಕೂಲಿಕಾರರ ಸಂಘಟನೆಯ ನಾಗರತ್ನ ನಾಡ ಮಾತನಾಡಿ, ಆಲೂರು, ನಾಡ, ಹಕ್ಲಾಡಿ ಗ್ರಾಮದ ಮಹಿಳೆಯರಿಗೆ ಶಕ್ತಿ ಯೋಜನೆಯನ್ನು ಕೊಡಿಸುವಲ್ಲಿ ಸಾರಿಗೆ ಪ್ರಾಧಿಕಾರ ಅನ್ಯಾಯ ಮಾಡಿದೆ. ಕೂಡಲೇ ಸರ್ಕಾರಿ ಬಸ್ ಆರಂಭಿಸುವುದರ ಮೂಲಕ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.ಧರಣಿಯನ್ನುದ್ದೇಶಿಸಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿದರು.ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಎಚ್.ನರಸಿಂಹ, ಪ್ರಮುಖರಾದ ಚಂದ್ರಶೇಖರ ವಿ., ಕವಿರಾಜ್ ಎಸ್. ಕಾಂಚನ್, ರಘುರಾಮ ಆಚಾರ್ಯ ಆಲೂರು, ಶೀಲಾವತಿ ಹಡವು, ನಾಗರತ್ನ ಪಡುವರಿ, ನಿಸರ್ಗ, ಬಲ್ಕೀಸ್, ನಳಿನಿ ಉಮೇಶ್ ಕುಂದರ್ ಮೊದಲಾದವರಿದ್ದರು. ಡಿವೈಎಫ್ಐ ಮುಖಂಡ ರಾಜೇಶ್ ಪಡುಕೋಣೆ ಸ್ವಾಗತಿಸಿದರು. ನಾಡ ಗ್ರಾಮ ಪಂಚಾಯತ್ ಸದಸ್ಯೆ ಶೋಭಾ ಕೆರೆಮನೆ ವಂದಿಸಿದರು.