ಕುಂದಾಪುರ: ಐಎಂಜೆ ಶಿಕ್ಷಣ ಸಂಸ್ಥೆಯಲ್ಲಿ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ

| Published : Oct 06 2024, 01:21 AM IST

ಕುಂದಾಪುರ: ಐಎಂಜೆ ಶಿಕ್ಷಣ ಸಂಸ್ಥೆಯಲ್ಲಿ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಂದಾಪುರ ಮೂಡ್ಲಕಟ್ಟೆ ಐ.ಎಂ.ಜೆ. ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಇತ್ತೀಚೆಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಇಲ್ಲಿನ ಮೂಡ್ಲಕಟ್ಟೆ ಐ.ಎಂ.ಜೆ. ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಇತ್ತೀಚೆಗೆ ನಡೆಯಿತು.

ಏಷ್ಯನ್‌ ಪವರ್ ಲಿಫ್ಟರ್‌ ನಾಗಶ್ರೀ ಕ್ರೀಡಾ ತಂಡಗಳ ಲಾಂಛನ ಉದ್ಘಾಟಿಸಿ, ಕ್ರೀಡಾ ಚಟುವಟಿಕೆಗಳು ವ್ಯಕ್ತಿಯನ್ನು ಕ್ರಿಯಾಶೀಲರನ್ನಾಗಿ ಮಾಡುತ್ತದೆ. ದೇಹದಲ್ಲಿ ಸದೃಢವಾದಂತಹ ಮನಸ್ಸನ್ನು ತುಂಬುವ ಕಾರ್ಯವನ್ನು ಕ್ರೀಡೆ ಮಾಡುತ್ತದೆ, ಅದಕ್ಕೆ ತಾನೇ ಸಾಕ್ಷಿ. ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿದಾಗ ಯಶಸ್ಸು ಸಾಧ್ಯ ಎಂದರು.

ಸೃಷ್ಟಿ ಇನ್ಫೋಟೆಕ್ ಕುಂದಾಪುರ ಇದರ ಮುಖ್ಯಸ್ಥ ಹರ್ಷವರ್ಧನ್ ಶೆಟ್ಟಿ ಟ್ರೋಫಿಗಳನ್ನು ಅನಾವರಣ ಮಾಡಿ, ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯುವುದರೊಂದಿಗೆ ಭಾವನಾತ್ಮಕವಾಗಿ ವ್ಯವಹರಿಸುವುದಕ್ಕೆ ಕ್ರೀಡೆ ಉತ್ತಮ ಮಾಧ್ಯಮ ಎಂದು ತಿಳಿಸಿದರು.

ನಾಗಶ್ರೀ ಹಾಗೂ ಹರ್ಷವರ್ಧನ್ ಶೆಟ್ಟಿ ಅವರ ಸಾಧನೆಯನ್ನು ಗುರುತಿಸಿ ಗೌರವಿಸಲಾಯಿತು.

ನಂತರ ವಿವಿಧ ತಂಡಗಳ ಜೆರ್ಸಿ ಮತ್ತು ಅವರ ಲೋಗೋಗಳನ್ನು ಪ್ರತಿ ತಂಡದ ನಾಯಕರಿಗೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಐಎಂಜೆ ಬ್ರ್ಯಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ. ರಾಮಕೃಷ್ಣ ಹೆಗ್ಡೆ ಮಾತನಾಡಿದರು.

ಸಂಸ್ಥೆಯ ಪ್ರಾಂಶುಪಾಲ ಡಾ. ಪ್ರತಿಭಾ ಎಂ. ಪಟೇಲ್ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಮೂಡ್ಲಕಟ್ಟೆ ಕ್ಯಾಂಪಸ್‌ನಲ್ಲಿ ಪ್ರಪ್ರಥಮ ಬಾರಿಗೆ ಕುಂದಾಪುರದ ಹೆಸರಾಂತ ಮದ್ದುಗುಡ್ಡೆ ಟೈಗರ್ಸ್ ತಂಡದಿಂದ ಹುಲಿವೇಷ ಕುಣಿತ ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಹುಲಿ ತಂಡದೊಂದಿಗೆ ಹೆಜ್ಜೆ ಹಾಕಿದರು.

ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಜಯಶೀಲ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಖಾರ್ವಿ ಉಪಸ್ಥಿತರಿದ್ದರು.ತೃತೀಯ ಬಿಸಿಎ ವಿದ್ಯಾರ್ಥಿ ತರಾನಾ ಸ್ವಾಗತಿಸಿದರು. ತೃತೀಯ ಬಿಸಿಎನ ವಿದ್ಯಾರ್ಥಿ ರಿಯಾನ್ ವಂದಿಸಿದರು. ದ್ವಿತೀಯ ಬಿಸಿಎ ವಿದ್ಯಾರ್ಥಿನಿ ರಶಿತಾ ನಿರೂಪಿಸಿದರು.