ಕುಂದಾಪುರ: 71ನೇ ಅ.ಭಾ. ಸಹಕಾರಿ ಸಪ್ತಾಹಕ್ಕೆ ಚಾಲನೆ

| Published : Nov 15 2024, 12:34 AM IST

ಸಾರಾಂಶ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಮತ್ತು ಜಿಲ್ಲಾ ಸಹಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಂದಾರ್ತಿಯಲ್ಲಿ ಆಯೋಜಿಸಲಾದ 71ನೇ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಮತ್ತು ಜಿಲ್ಲಾ ಸಹಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಂದಾರ್ತಿಯಲ್ಲಿ ಆಯೋಜಿಸಲಾದ 71ನೇ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಎಚ್. ಧನಂಜಯ ಶೆಟ್ಟಿ ಸಪ್ತಾಹವನ್ನು ಉದ್ಘಾಟಿಸಿದರು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಕೆ.ಆರ್. ಲಾವಣ್ಯ ಶುಭ ಹಾರೈಸಿದರು.

ಈ ಸಂದರ್ಭ ಸಹಕಾರ ಸಚಿವಾಲಯ ನೂತನ ಪ್ರಯತ್ನಗಳ ಮೂಲಕ ಸಹಕಾರ ಚಳುವಳಿಯನ್ನು ಬಲಪಡಿಸುವುದು ಎಂಬ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದ ನಿವೃತ್ತ ಪ್ರಾಧ್ಯಾಪಕ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ವಿಕಸಿತ ಭಾರತದಲ್ಲಿ ಬಡತನ, ನಿರುದ್ಯೋಗ ತೊಡೆಯುವ ಸುಂದರ ಪರಿಕಲ್ಪನೆಯನ್ನು ಸಾಧಿಸಬೇಕಾದರೆ ನಮ್ಮ ಮೊದಲ ಆದ್ಯತಾ ವಲಯವಾಗಿ ಸಹಕಾರ ಕ್ಷೇತ್ರವನ್ನು ಒಪ್ಪಿಕೊಂಡು ನಡೆಯಬೇಕಾದ ಅನಿವಾರ್ಯತೆ ಇದೆ. ಬರೀ ಕೈಗಾರಿಕೆ, ಉದ್ಯಮವನ್ನೆ ಬೆಳೆಸುವುದರ ಮೂಲಕ ವಿಕಸಿತ ಭಾರತದಲ್ಲಿ ಹಸಿವು, ನಿರುದ್ಯೋಗ ತೊಡೆದು ಹಾಕಲು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ತಲಾ ಆದಾಯ ಹೆಚ್ಚಿಸುವಲ್ಲಿ ಈ ಸಹಕಾರ ವ್ಯವಸ್ಥೆಯನ್ನು ಗ್ರಾಮೀಣ ಮಟ್ಟದಿಂದ ಇನ್ನಷ್ಟು ವಿಸ್ತರಣೆ ಮಾಡಬೇಕಾದ ಅಗತ್ಯ ಇದೆ ಎಂದರು.

ನಂತರ ಸಹಕಾರ ಸಂಸ್ಥೆಯಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು. ಆತಿಥೇಯ ಮಂದಾರ್ತಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಚ್.ಗಂಗಾಧರ ಶೆಟ್ಟಿ ಪ್ರಸ್ತಾವನೆಗೈದರು. ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೂಷಾ ಕೇೂಟ್ಯಾನ್ ಸ್ವಾಗತಿಸಿದರು. ಮಂದಾರ್ತಿ ಸೇ.ಸ.ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಮಕೃಷ್ಣ ಶೆಟ್ಟಿ ವಂದಿಸಿದರು.