ಕುಂದಾಪುರ: ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಆಚರಣೆ

| Published : Jun 28 2024, 12:45 AM IST

ಸಾರಾಂಶ

ಕುಂದಾಪುರ ಸರ್ಕಾರಿ ಕಿರಿಯ ಕಾಲೇಜಿನ ರೋಟರಿ ಶ್ರೀ ಲಕ್ಷ್ಮೀ ನರಸಿಂಹ ಕಲಾಮಂದಿರಲ್ಲಿ ಗುರುವಾರ ತಾಲೂಕು ಆಡಳಿತ ಹಾಗೂ ಕನ್ನಡ‌ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಬೆಂಗಳೂರು‌ ನಿರ್ಮಾಣದ ಹೊತ್ತಲ್ಲಿ ಕುಲ ಕಸುಬುಗಳನ್ನು ಸೃಷ್ಟಿಸಿದ್ದು, ಹೊರೆಗಲ್ಲುಗಳನ್ನು ನಿರ್ಮಿಸಿರುವುದು, ನಾಡಪ್ರಭು ಕೆಂಪೇಗೌಡರ ಜನಪರ ಕಾಳಜಿಯನ್ನು ಬಿಂಬಿಸುತ್ತದೆ ಎಂದು ಉಪವಿಭಾಗಾಧಿಕಾರಿ ರಶ್ಮೀ ಎಸ್.ಆರ್. ಹೇಳಿದರು.

ಇಲ್ಲಿನ ಸರ್ಕಾರಿ ಕಿರಿಯ ಕಾಲೇಜಿನ ರೋಟರಿ ಶ್ರೀ ಲಕ್ಷ್ಮೀ ನರಸಿಂಹ ಕಲಾಮಂದಿರಲ್ಲಿ ಗುರುವಾರ ತಾಲೂಕು ಆಡಳಿತ ಹಾಗೂ ಕನ್ನಡ‌ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಾವಿರುವ ವಾತಾವರಣ ನಮ್ಮದು ಎಂಬ ರಕ್ಷಣೆಯ ಚಿಂತನೆ ಮೂಡಿದಾಗಲೇ ಸುಂದರ ವಾತಾವರಣ ನಿರ್ಮಾಣ ಸಾಧ್ಯ. ಜಯಂತಿಗಳ ಆಚರಣೆ ಮೂಲಕ ಸಾಧಕರ ಜೀವನ‌ ಚಿತ್ರಣಗಳು ಮತ್ತೆ ಮತ್ತೆ ಅನಾವರಣಗೊಳ್ಳುತ್ತದೆ. ಕೆಂಪೇಗೌಡರ ದೂರಗಾಮಿ ಚಿಂತನೆಗಳು ನಾಡಿನ ಇಂದಿನ ಅಭಿವೃದ್ಧಿಗೆ ಪೂರಕವಾಗಿದ್ದವು ಎಂದರು.

ಉಪನ್ಯಾಸ ನೀಡಿದ ಕೋಟೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕಿ ಶರಾವತಿ, ಬಾಲ್ಯದಿಂದಲೇ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿದ್ದ ಕೆಂಪೇಗೌಡರು ಕಂಡ ಕನಸಿನ ಬೆಂಗಳೂರು ನಿರ್ಮಾಣಕ್ಕೆ ಇಂದಿನ ರಾಜಾ ಸರ್ಕಲ್‌ನಲ್ಲಿ 1514 ಜ.14ರಂದು ಗುದ್ದಲಿ ಪೂಜೆ ನಡೆದಿತ್ತು. ಅಂದಿನಿಂದ ಇಂದಿನ ವರೆಗೆ ಬೆಂಗಳೂರು ನಗರ ವಿಸ್ತಾರವಾಗಿ ಬೆಳೆದು ಜಗದಗಲದೆತ್ತರಕ್ಕೆ‌ ಕೀರ್ತಿ ವಿಸ್ತರಿಸಿದೆ. ನಾಡ ದೊರೆಯ ಕ್ಷೇಮಕ್ಕೆ ಪ್ರಜೆಗಳು ಹರಕೆ ಹೊತ್ತ ಶಾಸನವಿರುವುದು ಕೆಂಪೇಗೌಡರದ್ದು ಮಾತ್ರ. ದುಡಿಯುವ ಕನಸು ಹೊತ್ತವರನ್ನು ಬೆಂಗಳೂರು ಕೈಬಿಡುವುದಿಲ್ಲ. ರೈತರಿಗೆ, ವ್ಯಾಪಾರಿಗಳು‌ ಸೇರಿದಂತೆ ಸಾಮಾನ್ಯರಿಗೆ ಕೆಂಪೇಗೌಡರು ನೀಡಿದ ಸಹಕಾರ ಸ್ಮರಣೀಯವಾದುದು. ನ್ಯಾಯ ಪ್ರವೃತ್ತಿಯ ಬೆಂಗಳೂರು ನಿರ್ಮಾತೃ ಜನಾನುರಾಗಿ ವ್ಯಕ್ತಿತ್ವದ ಕೆಂಪೇಗೌಡರ ಇತಿಹಾಸವೇ ರೋಚಕ ಹಾಗೂ ಆದರ್ಶಪ್ರಾಯವಾದುದು. ಕುಂದಾಪುರ ಸೇರಿದಂತೆ ನಾಡಿನ ಅಸಂಖ್ಯಾತ ಹಳ್ಳಿಗಳಿಂದ ಬರುವ ಜನರಿಗೆ ಬದುಕು ಕಟ್ಟಿಕೊಟ್ಟಿರುವುದು ಕೂಡ ಕೆಂಪೇಗೌಡರ ಬೆಂಗಳೂರೇ ಎಂದರು.ತಹಸೀಲ್ದಾರ್ ಎಚ್.ಎಸ್.ಶೋಭಾಲಕ್ಷ್ಮೀ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು., ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಆರ್., ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ., ಉಪಪ್ರಾಂಶುಪಾಲ ಕಿರಣ ಹೆಗ್ಡೆ ಇದ್ದರು.ಉಪ ತಹಸೀಲ್ದಾರ್ ವಿನಯ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಶೋಭಾ ಶೆಟ್ಟಿ ವಂದಿಸಿದರು.