ಸಾರಾಂಶ
ಕನ್ನಡಪ್ರಭ ವಾರ್ತೆ ಕುಂದಾಪುರಇಲ್ಲಿನ ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಪ್ರಥಮ ವರ್ಷದ ನೂತನ ಪದವಿ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ - ದೀಕ್ಷಾರಂಭ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಪ್ರತಿ ವಿದ್ಯಾರ್ಥಿಗಳಿಗೆ ಹಣತೆ ನೀಡಿ ದೀಪ ಬೆಳಗಿಸಲು ಹೇಳುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಚಿಂತನಾ ರಾಜೇಶ್ ಮಾತನಾಡಿ, ಜೀವನದ ಹೊಸ ಹಂತದಲ್ಲಿರುವ ನೀವು, ಹೊಸ ವಿಚಾರಗಳನ್ನು ಕಲಿತು ನಿಮ್ಮ ಮುಂದಿನ ಮೂರು ವರ್ಷದ ಪದವಿ ಜೀವನವು ಸುವರ್ಣಾಕ್ಷರದಲ್ಲಿ ಬರೆದಿಡುವಂತಾಗಲಿ. ದಿ.ಐ.ಎಂ.ಜಯರಾಮ್ ಶೆಟ್ಟಿ ಅವರ ಸಾಧನೆ, ಆಶಯ, ಹುರುಪು ಸದಾ ನಿಮಗೆ ಪ್ರೇರಣೆಯಾಗಲಿ. ನೀವು ಸರಿಯಾದ ಶಿಕ್ಷಣ ಸಂಸ್ಥೆ ಆಯ್ಕೆ ಮಾಡಿಕೊಂಡಿದ್ದೀರಿ. ಅದರ ಸದುಪಯೋಗವನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಿಮ್ಮ ಪ್ರತಿಭೆ ಇಲ್ಲಿ ಮುಕ್ತವಾಗಿ ಅನಾವರಣಗೊಳ್ಳಲಿ ಎಂದು ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರತಿಭಾ ಎಂ ಪಟೇಲ್, ದೀಕ್ಷಾರಂಭ ನಿಮ್ಮ ಮುಂದಿನ ಜೀವನದ ಆರಂಭದ ಹೆಜ್ಜೆಯಾಗಿದೆ. ನಿಮ್ಮನ್ನು ನೀವು ಅರಿತು ಕಲಿಕೆಯಲ್ಲಿ ತೊಡಗಿಸಿಕೊಳ್ಳಿ. ಪೋಷಕರು ಮತ್ತು ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕೊಳ್ಳಿ. ನೀವು ಹಚ್ಚಿದ ದೀಪ ನಂದಾದೀಪವಾಗಿ ನಿಮ್ಮ ಬಾಳನ್ನು ಸದಾ ಬೆಳಗಲಿ ಎಂದು ಶುಭ ಹಾರೈಸಿದರು.ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಮತ್ತು ವಾಣಿಜ್ಯ ಉಪನ್ಯಾಸಕಿ ಮಾಲತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲ ಜಯಶೀಲ್ ಕುಮಾರ್ ಸ್ವಾಗತಿಸಿದರು. ಗಣಕಶಾಸ್ತ್ರದ ಮುಖ್ಯಸ್ಥೆ ಸ್ವರ್ಣ ರಾಣಿ ವಂದಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಅರ್ಚನಾ ಗದ್ದೆ ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ವಾಣಿಜ್ಯ ಉಪನ್ಯಾಸಕಿ ದೀಕ್ಷಾ ಹರೀಶ್ ಜೆಪ್ಪು ನಿರೂಪಿಸಿದರು.