ಕುಂದಾಪುರ: ಶ್ರೀ ಸೀತಾರಾಮಚಂದ್ರ ದೇವಳದ ದ್ವಾರಮಂಟಪ, ರಜತ ಗರ್ಭಗುಡಿ ಅರ್ಪಣೆ

| Published : Jan 17 2025, 12:48 AM IST

ಕುಂದಾಪುರ: ಶ್ರೀ ಸೀತಾರಾಮಚಂದ್ರ ದೇವಳದ ದ್ವಾರಮಂಟಪ, ರಜತ ಗರ್ಭಗುಡಿ ಅರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಸೀತಾರಾಮಚಂದ್ರ ದೇವಸ್ಥಾನದ ನವೀಕೃತ ಶಿಲಾಮಯ ದ್ವಾರಮಂಟಪ ಹಾಗೂ ಶ್ರೀ ದೇವರ ಗರ್ಭಗುಡಿಯ ರಜತ ಕವಚವನ್ನು ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಶ್ರೀಮದ್ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಕುಂದಾಪುರ

ಧರ್ಮದ ಮತ್ತು ಧಾರ್ಮಿಕ ಜೀವನದ ಪ್ರಾಮುಖ್ಯತೆಯನ್ನು ಭಗವಂತನು ಶ್ರೀರಾಮನ ಅವತಾರದಲ್ಲಿ ಉಪದೇಶ ಮಾಡಿದ್ದಾನೆ. ಭಗವಂತನ ಒಂದೊಂದು ಅವತಾರಕ್ಕೂ ತನ್ನದೇ ಆದ ವೈಶಿಷ್ಟ್ಯತೆ ಇದೆ. ಈ ಎಲ್ಲ ಅವತಾರಗಳ ಮೂಲ ಉದ್ದೇಶ ಧರ್ಮೋದ್ಧಾರ ಹಾಗೂ ಧರ್ಮದ ರಕ್ಷಣೆ. ಪ್ರತಿಯೊಂದು ಯುಗದಲ್ಲೂ ಧರ್ಮ ಸಂಸ್ಥಾಪನೆಗೆ ಭಗವಂತನು ವಿಶೇಷ ಅವತಾರ ತಾಳಿ ಧರ್ಮ ಸಂರಕ್ಷಣೆ ಮಾಡಿದ್ದಾನೆ ಎಂದು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಶ್ರೀಮದ್ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಹೇಳಿದರು‌.ಅವರು ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ನವೀಕೃತ ಶಿಲಾಮಯ ದ್ವಾರಮಂಟಪ ಹಾಗೂ ಶ್ರೀ ದೇವರ ಗರ್ಭಗುಡಿಯ ರಜತ ಕವಚ ಉದ್ಘಾಟಿಸಿ, ಆಶೀರ್ವಚನ ನೀಡಿದರು.

ನಮ್ಮ ಹಿಂದು ಧರ್ಮವು ದೃಢವಾಗಿ ಸ್ಥಾಪನೆ, ಸಂಸ್ಥಾಪನೆಯಾಗಿದ್ದರೆ, ಅದಕ್ಕೆ ಕಾರಣ ಜಗದ್ಗುರು ಆದಿ ಶಂಕರಾಚಾರ್ಯರು. ೧೨೦೦ ವರ್ಷಗಳ ಹಿಂದೆ ಪವಿತ್ರವಾದ ಭಾರತ ದೇಶದಲ್ಲಿ ಅವತಾರ ಮಾಡಿದ್ದ ಅವರು, ಧರ್ಮ ಮಾರ್ಗವನ್ನು ಉಪದೇಶ ಮಾಡಿ ಹಿಂದು ಧರ್ಮವನ್ನು ಉದ್ಧಾರ ಮಾಡಿ, ದೀರ್ಘವಾದ ದೃಷ್ಟಿಯಿಂದ ಧರ್ಮವನ್ನು ಸಂಸ್ಥಾಪನೆ ಮಾಡಿದ್ದರು. ಸನಾತನ ಧರ್ಮದ ಅನುಯಾಯಿಗಳಲ್ಲಿ ಐಕಮತ್ಯ ಬರಬೇಕಾದರೆ ಶಂಕರಾಚಾರ್ಯರು ತೋರಿಸಿದ ಮಾರ್ಗದಲ್ಲಿ ನಡೆಯಬೇಕು. ಅವರ ಅವತಾರವಾಗಿ ೧೨೦೦ ವರ್ಷಗಳಾದರೂ ಸಹ ಅದೆಷ್ಟೋ ಜನರು ಈ ಧರ್ಮವನ್ನು ನಾಶ ಮಾಡಬೇಕೆಂದು ಎಷ್ಟು ಪ್ರಯತ್ನ ಮಾಡಿದರೂ ಸಹ ಈವತ್ತಿಗೂ ಈ ಧರ್ಮ ಇಷ್ಟು ದೃಢವಾಗಿದೆ ಎಂದರು.ಕುಂದಾಪುರ ರಾಮಕ್ಷತ್ರಿಯ ಸಂಘ ಅಧ್ಯಕ್ಷ ಕೆ. ಲಕ್ಷ್ಮೀಶ ಹವಾಲ್ದಾರ್ ದಂಪತಿ, ಶ್ರೀಗಳ ಪಾದಪೂಜೆ ನೆರವೇರಿಸಿದರು. ಶೃಂಗೇರಿ ಶ್ರೀ ಶಾರದಾ ಪೀಠಂನ ಪ್ರಾಂತೀಯ ಧರ್ಮಾಧಿಕಾರಿ ಲೋಕೇಶ ಅಡಿಗ, ವಿಶ್ವರಾಮಕ್ಷತ್ರಿಯ ಸಂಘದ ಅಧ್ಯಕ್ಷ ಎಚ್.ಆರ್. ಶಶಿಧರ ನಾಯ್ಕ್, ಉದ್ಯಮಿ ದತ್ತಾನಂದ, ಉಪಾಧ್ಯಕ್ಷ ದೇವರಾಯ ಬಾಣ, ನಾಗಭೂಷಣ ಎಸ್., ದೇವಕಿ ಪಿ. ಸಣ್ಣಯ್ಯ, ರಾಧಾಕೃಷ್ಣ ಯು., ಶಂಕರ ಶೇರೆಗಾರ್, ಕೆ.ನಾಗರಾಜ ತಲ್ಲೂರು, ಕೆ. ಚಂದ್ರಶೇಖರ ನಾಯ್ಕ್, ಆನಂದ ರಾವ್ ಕೆರಾಡಿ ಅತಿಥಿಗಳಾಗಿ ಭಾಗವಹಿಸಿದ್ದರು.ಸಂಘ ಸದಸ್ಯರು, ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ರಾಮಕ್ಷತ್ರಿಯ ಸಮಾಜದ ಹಿರಿಯರಾದ ಬಿಜೂರು ರಾಮಕೃಷ್ಣ ಶೇರುಗಾರ್‌, ಕೆ.ಆರ್‌. ಉಮೇಶ್‌ ರಾವ್‌, ಚಂದ್ರಶೇಖರ್‌ ನಾಯ್ಕ್‌, ಸತೀಶ್‌ ಕಾವೇರಿ, ಚಂದ್ರಶೇಖರ್‌ ಕಾವೇರಿ, ಡಿ.ಕೆ. ಪ್ರಭಾಕರ್ ಉಪಸ್ಥಿತರಿದ್ದರು. ಕೋಶಾಧಿಕಾರಿ ಡಿ. ಸತೀಶ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ನಾಗರಾಜ ನಾಯ್ಕ್ ವಂದಿಸಿದರು.