ಇಲ್ಲಿನ ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಗ್ರಾಮೀಣ ಪ್ರದೇಶದ 5 ವಾರ್ಡ್‌ಗಳನ್ನು ಕೈಬಿಡುವುದಾಗಿ ರಾಜ್ಯದ ಪೌರಾಡಳಿತ ಸಚಿವ ಎಚ್. ಸಿ. ಬಾಲಕೃಷ್ಣ ಅವರು ಘೋಷಿಸಿದ್ದು, ಈ ಬೇಡಿಕೆಯನ್ನಿಟ್ಟುಕೊಂಡು ಕಳೆದ 432 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳೀಯ ರೈತ ಸಂಘದ ಹೋರಾಟಕ್ಕೆ ತಾತ್ವಿಕ ಜಯ ಸಿಕ್ಕಿದೆ.
ಕುಂದಾಪುರ: ಇಲ್ಲಿನ ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಗ್ರಾಮೀಣ ಪ್ರದೇಶದ 5 ವಾರ್ಡ್‌ಗಳನ್ನು ಕೈಬಿಡುವುದಾಗಿ ರಾಜ್ಯದ ಪೌರಾಡಳಿತ ಸಚಿವ ಎಚ್. ಸಿ. ಬಾಲಕೃಷ್ಣ ಅವರು ಘೋಷಿಸಿದ್ದು, ಈ ಬೇಡಿಕೆಯನ್ನಿಟ್ಟುಕೊಂಡು ಕಳೆದ 432 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳೀಯ ರೈತ ಸಂಘದ ಹೋರಾಟಕ್ಕೆ ತಾತ್ವಿಕ ಜಯ ಸಿಕ್ಕಿದೆ. ಸಚಿವ ಬಾಲಕೃಷ್ಣ ಮಂಗಳವಾರ ಬೈಂದೂರು ತಾಲೂಕು ಆಡಳಿತ ಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ರೈತರಿದ್ದಲ್ಲಿ ಬಂದು ಅವರ ಬೇಡಿಕೆಗೆ ಸರ್ಕಾರ ಒಪ್ಪಿದೆ ಎಂದು ತಿಳಿಸಿ, ಧರಣಿಯನ್ನು ಕೈಬಿಡುವಂತೆ ವಿನಂತಿಸಿದರು
ಬೈಂದೂರು ಪ.ಪಂ. ರಚನೆ ಅವೈಜ್ಞಾನಿಕವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ರೈತರ ಬೇಡಿಕೆ ನ್ಯಾಯಯುತವಾಗಿದೆ. ಮುಖ್ಯಮಂತ್ರಿ ನಿರ್ದೇಶನದಂತೆ ನೂತನ ಬೈಂದೂರು ಪ.ಪಂ.ನ 20 ವಾರ್ಡ್‌ಗಳಲ್ಲಿ ಗ್ರಾಮೀಣ ಭಾಗದ 5 ವಾರ್ಡ್‌ಗಳನ್ನು ಕೈಬಿಟ್ಟು ಪಂಪಂನ್ನು ಪುನರಚನೆ ಮಾಡಲಾಗುವುದು ಎಂದರುಸಚಿವರೊಂದಿಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ರೈತರ ಬೇಡಿಕೆ ಈಡೇರಿಕೆಗೆ ವಿಳಂಬವಾದುದಕ್ಕೆ ವಿಷಾದಿಸಿದರು, ಪಕ್ಷಾತೀತವಾಗಿ ನಡೆದ ರೈತರ ಬೇಡಿಕೆಯನ್ನು ಸರ್ಕಾರ ಮನ್ನಿಸಿ ನ್ಯಾಯ ನೀಡುವ ಮೂಲಕ, ರಾಜ್ಯ ಸರ್ಕಾರ ರೈತ ಪರವಾಗಿದೆ ಎಂಬುದನ್ನು ತೋರಿಸಿದೆ ಎಂದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಬೈಂದೂರು ತಹಶೀಲ್ದಾರ್ ರವಿರಾಜ್ ದೀಕ್ಷಿತ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ ಮತ್ತಿತರರು ಇದ್ದರು.ಹೋರಾಟದ ನೇತೃತ್ವ ವಹಿಸಿದ್ದ ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೈತ ಮುಖಂಡರಾದ ಅರುಣ್ ಕುಮಾರ್ ನಿರೂಪಿಸಿದರು. ವೀರಭದ್ರ ಗಾಣಿಗ ವಂದಿಸಿದರು.ಆಗದಿದ್ದರೆ ರಾಜೀನಾಮೆ ನೀಡುತ್ತೇನೆ: ನಾನು ಕೇವಲ ರೈತರನ್ನು ಸಮಾಧಾನ ಮಾಡಿ, ಧರಣಿ ಕೈಬಿಡುವಂತೆ ಮಾಡಲು ಬಂದಿಲ್ಲ, ಗ್ರಾಪಂಗಳನ್ನು ಪಪಂಗೆ ಸೇರಿಸಿದರೇ ಸಮಸ್ಯೆಯಾಗುತ್ತದೆ ಎಂಬ ನಿಮ್ಮ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಆದ್ದರಿಂದ ಸ್ವತಃ ಮುಖ್ಯಮಂತ್ರಿ ಅವರ ಸೂಚನೆಯಂತೆ, ಅವರ ಪರವಾಗಿ ನಾನು ಘೋಷಣೆ ಮಾಡುತ್ತಿದ್ದೇನೆ. ಅಧಿಕೃತ ಆದೇಶವನ್ನು ಒಂದೆರಡು ದಿನಗಳಲ್ಲಿ ಜಿಲ್ಲಾಡಳಿತದ ಕೈಸೇರುತ್ತದೆ. ಆದೇಶ ಅನುಷ್ಠಾನಕ್ಕೆ ಒಂದೆರಡು ತಿಂಗಳು ಬೇಕಾಗುತ್ತದೆ. ಆದರೇ ನಾನು ಮಾಡಿದ ಘೋಷಣೆ ಈಡೇರಿಸಲು ಸಾಧ್ಯವಾಗದಿದ್ದರೆ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದರು.