ಸಾರಾಂಶ
ಕುಣಿಗಲ್: ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾ ಗಣಪತಿಯ ವಿಸರ್ಜನಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಮಧ್ಯಾಹ್ನ 12 ಗಂಟೆಗೆ ಹೊರಟ ಮೆರವಣಿಗೆ ಪಟ್ಟಣದ ಹುಚ್ಚಮಾಸ್ತಿ ಗೌಡ ವೃತ್ತ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಮುಖಾಂತರ ನ್ಯಾಯಾಲಯದ ಮುಂಭಾಗದಿಂದ ಪುನಃ ಹುಚ್ಚಮಾಸ್ತಿ ಗೌಡ ವೃತ್ತಕ್ಕೆ ಬಂದು ನಂತರ ಕುಣಿಗಲ್ ಕೆಆರ್ ಎಸ್ ಅಗ್ರಹಾರಕ್ಕೆ ತೆರಳಿ ಸಂಪನ್ನಗೊಂಡಿತು. ಕಾರ್ಯಕ್ರಮದಲ್ಲಿ ಕುಣಿಗಲ್ ಭಾಗದ ಹಲವಾರು ಹಳ್ಳಿಗಳಿಂದ ಸಾವಿರಾರು ಹಿಂದೂ ಯುವಕರು ಸೇರಿದಂತೆ ಹಲವಾರು ಗಣೇಶನ ಅಭಿಮಾನಿಗಳು ಮತ್ತು ಭಕ್ತರು ಭಾಗವಹಿಸಿದ್ದರು. ಭಾಗವಹಿಸಿದ್ದ ಭಕ್ತರಿಗೆ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ವತಿಯಿಂದ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು,
ಹುಚ್ಚ ಮಾಸ್ತಿ ಗೌಡ ವೃತ್ತದ ಬಳಿ ಇರುವಂತಹ ದರ್ಗಾ ಬಳಿ ಗಣೇಶನ ಉತ್ಸವ ಬರುತ್ತಿದ್ದಂತೆ ಅಲ್ಲಿದ್ದ ಹಲವಾರು ಮುಸಲ್ಮಾನರು ಹಾಗೂ ಸ್ವಾಮೀಜಿ ಹಿಂದೂ ಕಾರ್ಯಕರ್ತರಿಗೆ ತಂಪು ಪಾನೀಯಗಳನ್ನು ಹಂಚುವ ಮುಖಾಂತರ ಸೌಹಾರ್ದತೆ ತೋರಿದರು. ಹಲವಾರು ಕಲಾತಂಡಗಳು ಹಾಗೂ ವಾದ್ಯ ಘೋಷಗಳ ನಡುವೆ ವಿಜೃಂಭಣೆಯ ಮೆರವಣಿಗೆ ನಡೆಯಿತು.ಗಣೇಶ ಉತ್ಸವದ ಮೆರವಣಿಗೆ ವೇಳೆ ಕಾಂಗ್ರೆಸ್ ಪಕ್ಷದ ಶಾಸಕ ಡಾ.ರಂಗನಾಥ್, ಜೆಡಿಎಸ್ ಮುಖಂಡ ಡಾ.ರವಿ ಡಿ ನಾಗರಾಜಯ್ಯ, ಬಿಜೆಪಿ ಮುಖಂಡ ಡಿ. ಕೃಷ್ಣಕುಮಾರ್, ರಾಜೇಶ್ ಗೌಡ ಸಿದ್ದರಾಮ ಚೈತನ್ಯ ಸ್ವಾಮೀಜಿ ನೇತೃತ್ವದಲ್ಲಿ ಒಂದಾಗಿ ಗಣಪತಿ ಪೂಜೆ ಸಲ್ಲಿಸಿದರು.
ಅರೇ ಶಂಕರ ಮಠದ ಸಿದ್ದರಾಮಯ್ಯ ಸ್ವಾಮೀಜಿ, ಕುಣಿಗಲ್ ಶಾಸಕ ಡಾ.ರಂಗನಾಥ, ಬಿಜೆಪಿ ಮುಖಂಡ ರಾಜೇಶ್ ಗೌಡ ಸೇರಿದಂತೆ ಅನೇಕರಿದ್ದರು.