ಕುಣಿಗಲ್‌: ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ

| Published : Mar 01 2024, 02:15 AM IST

ಸಾರಾಂಶ

ಪಟ್ಟಣದ ಜಿಕೆಬಿಎಮ್ಎಸ್ ಮೈದಾನದಲ್ಲಿ ಸಾವಿರಾರು ಕೋಟಿಗಳ ಅನುದಾನದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಗುದ್ದಲಿ ಪೂಜೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೆರವೇರಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಕುಣಿಗಲ್

ಪಟ್ಟಣದ ಜಿಕೆಬಿಎಮ್ಎಸ್ ಮೈದಾನದಲ್ಲಿ ಸಾವಿರಾರು ಕೋಟಿಗಳ ಅನುದಾನದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಗುದ್ದಲಿ ಪೂಜೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೆರವೇರಿಸಲಿದ್ದಾರೆ.

ಮೈದಾನದಲ್ಲಿ ಏರ್ಪಡಿಸಿರುವ ಬೃಹತ್ ವೇದಿಕೆಯಲ್ಲಿ ಜಲಸಂಪನ್ಮೂಲ ಇಲಾಖೆ ವತಿಯಿಂದ ತುಮಕೂರು ಶಾಖ ನಾಲೆ ಸರಪಳಿ 70 ಕಿಲೋ ಮೀಟರ್‌ನಿಂದ ಕುಣಿಗಲ್ ಕೆರೆಗೆ ನೀರು ಸರಬರಾಜು ಮಾಡುವ ಯೋಜನೆಯ ಅಂದಾಜು ವೆಚ್ಚ 986 ಕೋಟಿ ಹಾಗೂ ಕೆಪಿಟಿಸಿಎಲ್ ವತಿಯಿಂದ ಹುಲಿಯೂರ್‌ದುರ್ಗದಲ್ಲಿ ವಿದ್ಯುತ್ ಉಪ ಕೇಂದ್ರ ಮತ್ತು ವಿದ್ಯುತ್ ಉತ್ಪಾದನಾ ಘಟಕಗಳನ್ನು 130 ಕೋಟಿ ರು. ಅಂದಾಜು ವೆಚ್ಚದಲ್ಲಿ ಮತ್ತು ಪುರಸಭಾ ವ್ಯಾಪ್ತಿಯ ಒಳಚರಂಡಿ ಯೋಜನೆಯ ಎರಡನೇ ಹಂತದ ಕಾಮಗಾರಿಯನ್ನು 35 ಕೋಟಿ ರು. ಹಾಗೂ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಅಭಿವೃದ್ಧಿ ಮತ್ತು ವಾಣಿಜ್ಯ ಸಂಕೀರ್ಣಕ್ಕೆ 9.5 ಕೋಟಿ ರು., ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆ ಅಡಿ ತಾಲೂಕಿನ ಕುಡಿಯುವ ನೀರಿನ ಕಾಮಗಾರಿಗಳಿಗೆ 35.14 ಕೋಟಿ ಹಾಗೂ ನರೇಗಾ ಯೋಜನೆ ಅಡಿ 10 ಕೋಟಿ, ಕುಣಿಗಲ್ ತಾಲೂಕು ಆಡಳಿತದ ತಾಲೂಕು ಸೌಧ ಉದ್ಘಾಟನೆ, ಹುಲಿಯೂರ್‌ದುರ್ಗದ ನಾಡಕಚೇರಿ ಹಾಗೂ ಅಗ್ನಿಶಾಮಕ ಕಚೇರಿ ಉದ್ಘಾಟನೆ ಮತ್ತು ಅನುಮೋದನೆಗೊಂಡ ರಸ್ತೆಗಳ ಶಂಕುಸ್ಥಾಪನೆ ಕಾರ್ಯಕ್ರಮ ಮಾರ್ಚ್ 1ರ ಶುಕ್ರವಾರ ನಡೆಯಲಿದೆ,

ಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್‌, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್, ಸ್ಥಳೀಯ ಶಾಸಕ ಡಾಕ್ಟರ್‌ ರಂಗನಾಥ್ ಸೇರಿದಂತೆ ಹಲವರು ಸಚಿವರು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ,

ಜಿಕೆಬಿಎಮ್ಎಸ್ ಮೈದಾನದಲ್ಲಿ ಸುಮಾರು 5000 ಜನಕ್ಕೆ ಕುರ್ಚಿ ಸೇರಿದಂತೆ ಬೃಹತಾಾಕಾರದ ವೇದಿಕೆ ಮತ್ತು ಆಸನದ ವ್ಯವಸ್ಥೆ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ,

ಕುಣಿಗಲ್ ತಾಲೂಕು ಸೇರಿದಂತೆ ವಿವಿಧಡೆಗಳಿಂದ ಸುಮಾರು 300ಕ್ಕಿಂತ ಹೆಚ್ಚು ಬಸ್ ಗಳಲ್ಲಿ ಹಾಗೂ ಹಲವಾರು ಖಾಸಗಿ ವಾಹನಗಳಲ್ಲಿ ಸಾರ್ವಜನಿಕರು ಹಾಗೂ ವಿವಿಧ ಯೋಜನೆಯ ಫಲಾನುಭವಿಗಳು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಬೆಂಗಳೂರು ಕಡೆಯಿಂದ ಬರುವ ವಾಹನಗಳಿಗೆ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ಯಡಿಯೂರು ಕಡೆಯಿಂದ ಬರುವ ವಾಹನಗಳಿಗೆ ಮುಳ್ಕಟ್ಟಮ್ಮ ದೇವಾಲಯದ ಮೈದಾನ ಸೇರಿದಂತೆ ವಿವಿಧ ಭಾಗಗಳಲ್ಲಿ ವಾಹನ ನಿಲ್ದಾಣಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕಾರ್ಯಕ್ರಮದ ನಿಮಿತ್ತ ಪೊಲೀಸರು ಕುಣಿಗಲ್ ಪಟ್ಟಣದಲ್ಲಿ ಸಂಚಾರಿ ದಟ್ಟಣೆಯನ್ನು ತಗ್ಗಿಸಲು ವಿಶೇಷ ಸಂಚಾರಿ ಪೊಲೀಸರನ್ನು ನೇಮಕ ಮಾಡಲಾಗಿದ್ದು, ತುಮಕೂರು ಜಿಲ್ಲೆ ಸೇರಿದಂತೆ ಇತರಡೆಗಳಿಂದ ನೂರಾರು ಪೊಲೀಸರನ್ನು ವಿಶೇಷ ಕರ್ತವ್ಯ ನಿಮಿತ್ತ ನೇಮಕ ಮಾಡಲಾಗಿದೆ

ಕಾರ್ಯಕ್ರಮ ನಿಮಿತ್ತ ಜಿಲ್ಲಾಧಿಕಾರಿ ಸೇರಿದಂತೆ ಹಲವಾರು ಜಿಲ್ಲಾ ಮತ್ತು ರಾಜ್ಯಮಟ್ಟದ ಅಧಿಕಾರಿಗಳು ಕಳೆದ ಒಂದು ದಿನಗಳಿಂದ ಬೀಡು ಬಿಟ್ಟಿದ್ದು ಕುಣಿಗಲ್ ಶಾಸಕ ಡಾಕ್ಟರ್‌ ರಂಗನಾಥ್ ನೇತೃತ್ವದಲ್ಲಿ ವೇದಿಕೆ ಸೇರಿದಂತೆ ಸಂಪೂರ್ಣ ಕಾರ್ಯಕ್ರಮದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ.

ಹಲವಾರು ಇಲಾಖೆಗಳಿಂದ ರೈತರಿಗೆ ಮತ್ತು ಫಲಾನುಭವಿಗಳಿಗೆ ನೀಡುವಂತಹ ವಿವಿಧ ಸವಲತ್ತುಗಳನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಂದಲೇ ಕೊಡಿಸಬೇಕೆಂಬ ಸ್ಥಳೀಯ ಶಾಸಕರ ಸೂಚನೆಯಂತೆ ಹಲವರು ಅಧಿಕಾರಿಗಳು ವಿವಿಧ ಯಂತ್ರಗಳು ಸೇರಿದಂತೆ ಫಲಾನುಭವಿಗಳ ಚೆಕ್ ಮತ್ತು ಇತರ ಸೌಲತ್ತುಗಳನ್ನು ನೀಡುವ ಕಾರ್ಯಕ್ರಮ ನಡೆಯಲಿದೆ.