ಕುಂಟಿಕಾನಮಠದ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನವರಾತ್ರಿಯ ಮಹಾಪರ್ವದ ಅಂಗವಾಗಿ ಆಯೋಜಿಸಲಾಗಿದ್ದ ವಿಶೇಷ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಾನುವಾರ ವಿಜೃಂಭಣೆಯಿಂದ ನೆರವೇರಿದವು.

ಕಾಸರಗೋಡು: ಕುಂಟಿಕಾನಮಠದ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನವರಾತ್ರಿಯ ಮಹಾಪರ್ವದ ಅಂಗವಾಗಿ ಆಯೋಜಿಸಲಾಗಿದ್ದ ವಿಶೇಷ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಾನುವಾರ ವಿಜೃಂಭಣೆಯಿಂದ ನೆರವೇರಿದವು.

ಬೆಳಗ್ಗೆ ಗಣಪತಿ ಹವನದೊಂದಿಗೆ ಶುಭಾರಂಭಗೊಂಡ ಧಾರ್ಮಿಕ ವಿಧಿವಿಧಾನಗಳ ಬಳಿಕ, ವೇದಮೂರ್ತಿ ನಡುಮನೆ ಕಿಳಿಂಗಾರು ಗೋಪಾಲಕೃಷ್ಣ ಭಟ್ ಅವರ ಪೌರೋಹಿತ್ಯದಲ್ಲಿ ‘ಚಂಡಿಕಾ ಯಾಗ’ ಹಾಗೂ ‘ರುದ್ರಾಭಿಷೇಕ’ ಸೇವೆಗಳು ಜರುಗಿದವು. ಮಧ್ಯಾಹ್ನ 12:30ಕ್ಕೆ ಶ್ರೀ ಶಂಕರನಾರಾಯಣ ದೇವರು ಮತ್ತು ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವರಿಗೆ ಮಹಾಪೂಜೆ, ಅನ್ನ ಸಂತರ್ಪಣೆ, ಮಹಾಪ್ರಸಾದ ವಿತರಣೆ ನಡೆಯಿತು.ಸಂಜೆ 6ಗಂಟೆಗೆ ಶ್ರೀ ರಾಮಕಥಾಮಂಜರಿ ಹಾಗೂ ಶ್ರೀ ಕೃಷ್ಣಕಥಾಮಂಜರಿ ಗ್ರಂಥಗಳ ವಿಶೇಷ ಪುಸ್ತಕ ಅಭಿಯಾನ ನಡೆಯಿತು. ವೇ.ಮೂ. ಪಾಂಡೇಲು ಕಿಲಿಂಗಾರು ಕುಮಾರ ಭಟ್ ಅವರ ನೇತೃತ್ವದಲ್ಲಿ ‘ದುರ್ಗಾ ಪೂಜೆ’ ಹಾಗೂ ರಾತ್ರಿ 8:30ರ ಮಹಾ ಮಂಗಳಾರತಿ ನಡೆಯಿತು. ರಾತ್ರಿಯ ಪ್ರಸಾದ ಭೋಜನದ ನಂತರ, ಶ್ರೀ ಕೃಷ್ಣ ಭಟ್ ಉಂಡೆಮನೆ ಮತ್ತು ತಂಡದವರಿಂದ ಯಕ್ಷಗಾನ ಕಲಾಪ್ರದರ್ಶನ ನಡೆಯಿತು.. ಕುಂಟಿಕಾನಮಠ ಬಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲ್ಪಟ್ಟ ಧಾರ್ಮಿಕ ಮಹೋತ್ಸವವು ಸಾಂಗವಾಗಿ ಸಂಪನ್ನಗೊಂಡಿತು.