ಸಾರಾಂಶ
ಶಿವಮೊಗ್ಗ/ ಶಿಕಾರಿಪುರ : ಈಶ್ವರಪ್ಪನವರಿಗೆ ಬೂತ್‌ಗಳಲ್ಲಿ ಚೀಟಿ ಹಂಚಲು ಜನ ಇಲ್ಲ, ಅವರು ಸೋಲುವುದನ್ನು ನೋಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿರುವ ಮಾಜಿ ಸಚಿವ, ಹಾಲಿ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ತಿರುಗೇಟು ನೀಡಿರುವ ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಮಂಡೂಕದಂತಿರುವ ಜ್ಞಾನೇಂದ್ರ ಅವರಿಗೆ ಹುಚ್ಚು ಹಿಡಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ್ಞಾನೇಂದ್ರ ಅವರಿಗೆ ಭ್ರಮೆ ಕವಿದಿದೆ. ತಲೆ ಕೆಟ್ಟಿದೆ. ಅವರ ಕ್ಷೇತ್ರದಲ್ಲಿ ಯುವಕರು, ಬಜರಂಗದಳದ ಕಾರ್ಯ ಕರ್ತರು, ಪರಿವಾರದ ಕಾರ್ಯಕರ್ತರು, ಮಹಿಳಾ ಮತದಾರರು ದೊಡ್ಡ ಸಂಖ್ಯೆಯಲ್ಲಿ ನನ್ನನ್ನು ಬೆಂಬಲಿಸುತ್ತಿದ್ದಾರೆ. ಇದನ್ನು ಕಂಡು ಅವರು ಕಂಗಾಲಾಗಿದ್ದಾರೆ. ನಿತ್ಯ ನನ್ನ ಬೆಂಬಲಿತ ಕಾರ್ಯಕರ್ತರ ಮನೆಗೆ ಹೋಗಿ ಓಲೈಸುವುದೇ ಅವರ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದರು.
ನಾಳೆ ನಾನು ತೀರ್ಥಹಳ್ಳಿಯಲ್ಲಿ ಎರಡು ಸಭೆ ನಡೆಸುತ್ತಿದ್ದೇನೆ. ಜ್ಞಾನೇಂದ್ರ ಅವರಿಗೆ ಧೈರ್ಯ ಇದ್ದರೆ ಅವರೇ ಬಂದು ನೋಡಲಿ, ಇಲ್ಲವೇ ಕಳ್ಳತನದಿಂದಲಾದರೂ ಅವರ ಕಡೆಯವರನ್ನು ಈ ಸಭೆಗೆ ಕಳುಹಿಸಲಿ, ನನ್ನ ಕಡೆ ಎಷ್ಟು ಜನ ಇದ್ದಾರೆ ಎಂದು ಗೊತ್ತಾಗುತ್ತದೆ ಎಂದು ಹೇಳಿದರಲ್ಲದೆ, ನಾನು ಸೋಲುವುದನ್ನು ಅವರು ನೋಡುವುದು ಬೇಡ, ಗೆಲ್ಲುವುದನ್ನು ನೋಡಲಿ ಎಂದರು.
ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾದಾಗ ರವಿಕುಮಾರ್ ಜೊತೆ ಆರಗ ಜ್ಞಾನೇಂದ್ರ ಮತ್ತು ಡಿ.ಎಸ್.ಅರುಣ್ ಆಗಮಿಸಿದ್ದರು. ನಾನು ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ವಿವರಿಸಿದಾಗ ನಿಮ್ಮ ಮಾತು, ಸಿದ್ಧಾಂತ ಎಲ್ಲವನ್ನೂ ಒಪ್ಪುತ್ತೇನೆ. ಆದರೆ ಉತ್ತರ ನೀಡಲು ಸಾಧ್ಯವಿಲ್ಲ ಎಂದು ಇದೇ ಜ್ಞಾನೇಂದ್ರ ಹೇಳಿದ್ದರು. ಅಲ್ಲಿ ಹೀಗೆ ಹೇಳಿದವರು ಯಡಿಯೂರಪ್ಪ ಪಕ್ಕ ಬಂದು ನಿಂತಾಗ ರಾಘಣ್ಣನನ್ನು ಸೋಲಿಸಲು ಸಾಧ್ಯವಿಲ್ಲ, ಈಶ್ವರಪ್ಪ ಸೋಲ್ತಾರೆ ಎಂದು ಹೇಳುತ್ತಾರಲ್ಲ, ಏನಾಗಿದೆ? ಇವರಿಗೆ ಎಂದು ಪ್ರಶ್ನಿಸಿದರು.
ಸುಳ್ಳು ಕೇಸು ಯಾಕೆ ತೆಗೆಸಲಿಲ್ಲವೇಕೆ?: ಆರಗ ಜ್ಞಾನೇಂದ್ರ ಗೃಹ ಸಚಿವರಾಗಿದ್ದರು. ಆದರೆ ಆಗ ಹಿಂದೂ ಕಾರ್ಯಕರ್ತರ ಮೇಲೆ ಇದ್ದ ಸುಳ್ಳು ಕೇಸುಗಳನ್ನು ಹಿಂಪಡೆಯಬೇಕು ಎಂದು ನಾನೂ ಸೇರಿದಂತೆ ಸಂಘ ಪರಿವಾರದವರು ಕೂಡ ಒತ್ತಾಯಿಸಿದ್ದರು. ಆದರೆ ಆ ಕೆಲಸ ಮಾಡಲಿಲ್ಲ. ಇದಕ್ಕೆ ಜ್ಞಾನೇಂದ್ರ ಉತ್ತರಿಸ ಬೇಕು ಎಂದು ಒತ್ತಾಯಿಸಿದರು.ಕಾಂಗ್ರೆಸ್ ಪಕ್ಷದವರು ಮುಸ್ಲಿಂ ಗೂಂಡಾಗಳ ವಿರುದ್ಧ ಇದ್ದ ಕೇಸುಗಳನ್ನು ಹಿಂಪಡೆದರು. ಆದರೆ ಹಿಂದೂಗಳ ಮೇಲಿನ ಸುಳ್ಳು ಕೇಸು ಹಿಂಪಡೆಯಲು ಆರಗ ಯಾಕೆ ನಿರಾಕರಿಸಿದರು? ತೀರ್ಥಹಳ್ಳಿಯಲ್ಲಿ ಗೋ ಕಳ್ಳ ಸಾಗಾಣಿಕೆ ಮಾಡುತ್ತಿದ್ದವರನ್ನು ಹಿಂದೂ ಯುವಕರನ್ನು ತಡೆದಾಗ ಅವರ ಮೇಲೆ ಹಲ್ಲೆಯಾಯಿತು. ಆಗ ಮಣಿಪಾಲ ಆಸ್ಪತ್ರೆಗೆ ಸೇರಿದ್ದ ಯುವಕರನ್ನು ನಾನು ಭೇಟಿ ಮಾಡಿ ಮುಂದಿನ ವ್ಯವಸ್ಥೆ ಮಾಡಿಸಿದೆ.
ಜ್ಞಾನೇಂದ್ರರಿಗೆ ನೆನಪಾಗಲಿಲ್ಲ ಎಂದು ವಾಗ್ದಾಳಿ ನಡೆಸಿದರು.ಈಗ ಅಖಾಡ ಸಿದ್ಧವಾಗುತ್ತಿದೆ: ಆರಂಭದಲ್ಲಿ ನಾನು ಹೈಕಮಾಂಡ್ ಗೆ ಪಕ್ಷದ ಸ್ಥಿತಿ ತಿಳಿಸುವ ಉದ್ದೇಶದಿಂದ ಸ್ಪರ್ಧೆಗೆ ಇಳಿದೆ. ಬಳಿಕ ಜನರ ಬೆಂಬಲ ನೋಡಿ ಗೆಲುವಿನ ಗೆರೆ ಹತ್ತಿರವಾಗುತ್ತಿರುವುದು ಗೊತ್ತಾಗುತ್ತಿದೆ. ಗೆಲ್ಲಲೆಂದೇ ಸ್ಪರ್ಧೆಯನ್ನು ಸವಾಲ್ ಆಗಿ ತೆಗೆದುಕೊಂಡಿದ್ದೇನೆ. ಏ.22 ರಂದು ನನಗೆ ಚಿನ್ಹೆ ಸಿಗುತ್ತಿದೆ. ಅಲ್ಲಿಗೆ ನಿಜವಾದ ಚುನಾವಣಾ ಅಖಾಡ ಸಿದ್ಧವಾದಂತಾಗುತ್ತದೆ. ನೋಡುತ್ತಿರಿ, ಹೇಗೆ ಫಲಿತಾಂಶ ಬರುತ್ತದೆ ಎಂದರು.
ಇದು ಇದು ಸೈದ್ಧಾಂತಿಕ, ವೈಚಾರಿಕ ಸಂಘರ್ಷವೇ ಹೊರತು ಅಧಿಕಾರದ ಸಂಘರ್ಷವಲ್ಲ ಎಂದು ಸವಾಲ್ ಎಸೆದರಲ್ಲದೆ, ಯುವ ಜನರ ಆಕ್ರೋಶ, ಮಹಿಳೆಯರ ಶಾಪದಿಂದ ರಾಘವೇಂದ್ರ ಅವರ ಸೋಲು ಕಟ್ಟಿಟ್ಟ ಬುತ್ತಿ ಎಂದರು.ನನ್ನನ್ನು ಬೆಂಬಲಿಸುತ್ತಿರುವ ಲಿಂಗಾಯಿತ ಸಾಧು ಸಂತರು ಮತ್ತು ಮಹಿಳೆಯರ ಮೇಲೆ ಬಿಜೆಪಿಯವರಿಂದ ಇನ್ನೂ ದೌರ್ಜನ್ಯ ಮುಂದುವರೆದಿದೆ. ಅವರನ್ನು ಹೆದರಿಸುವ ಕೆಲಸ ನಡೆದಿದೆ. ಆದರೆ ಇವರಾರೂ ಇಂತಹ ದೌರ್ಜನ್ಯಕ್ಕೆ ಹೆದರುವುದಿಲ್ಲ ಎಂದು ಎಚ್ಚರಿಸಿದರು. ಇದು ನಡೆಯಬಾರದು ಎಂದು ತಾಕೀತು ಮಾಡಿದರು.ಗೋಚ್ಠಿಯಲ್ಲಿ ಮಾಜಿ ನಗರಪಾಲಿಕೆ ಸದಸ್ಯ ವಿಶ್ವಾಸ್, ಮಾಜಿ ಮೇಯರ್ ಸುವರ್ಣ ಶಂಕರ್, ಮಹಾಲಿಂಗ ಶಾಸ್ತ್ರಿ ಮತ್ತಿತರರು ಇದ್ದರು.
ಹುಬ್ಬಳ್ಳಿ ಯುವತಿ ಕೊಲೆ ಕೇಸ್: ಸರ್ಕಾರ ಆರೋಪಿ ಪರ ನಿಂತಿದೆ
ಶಿವಮೊಗ್ಗ: ಹುಬ್ಬಳ್ಳಿಯಲ್ಲಿ ಕಾಲೇಜು ಯುವತಿಯ ಕೊಲೆ ಪ್ರಕರಣದ ವಿಚಾರದಲ್ಲಿ ರಾಜ್ಯ ಸರ್ಕಾರ ಆರೋಪಿ ಪರವಾಗಿ ಕೆಲಸ ಮಾಡುತ್ತಿದೆ ಎಂದು ಕೆ.ಎಸ್. ಈಶ್ವರಪ್ಪ ಆರೋಪಿಸಿದರು.ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಗೂಂಡಾಗಳಿಗೆ ಹೆದರಿಕೆಯೇ ಇಲ್ಲವಾಗಿದೆ. ಹಿಂದೂಗಳಿಗೆ ರಕ್ಷಣೆ ಇಲ್ಲವಾಗಿದೆ. ಇಂತಹ ಘಟನೆ ನಡೆದಾಗ ಮುಖ್ಯಮಂತ್ರಿ, ಗೃಹ ಸಚಿವರು ಗೃಹ ಸಚಿವರು ತಮ್ಮ ಸ್ವಂತ ಮಕ್ಕಳಿಗೇ ಹೀಗಾಯಿತೇನೊ ಎಂಬಂತೆ ನೋವನ್ನು ಅನುಭವಿಸಬೇಕಿತ್ತು. ಆದರೆ ಅದಾಗುತ್ತಿಲ್ಲ. ಬದಲಾಗಿ ಆರೋಪಿಗಳನ್ನು ರಕ್ಷಿಸುವುದು ಹೇಗೆ ಎಂಬ ಚಿಂತೆ ಅವರಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುಸಲ್ಮಾನ ಗೂಂಡಾಗಳ ವಿರುದ್ಧ ಕ್ರಮ ಕೈಗೊಂಡು ಹಿಂದೂಗಳ ರಕ್ಷಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಗೀತಾ ಹಣೆಗೆ ಹಚ್ಚಿದ್ದ ಕುಂಕುಮ ಅಳಿಸಿದ್ದು ಅಘಾತಕಾರಿ ನಡವಳಿಕೆ
ಶಿವಮೊಗ್ಗ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಗೀತಾ ಶಿವರಾಜ್ ಕುಮಾರ್ ಅವರು ಅಲ್ಪಸಂಖ್ಯಾತರು ಇದ್ದ ಸಭೆಯೊಂದರಲ್ಲಿ ಹಣೆಗೆ ಹಚ್ಚಿದ್ದ ಕುಂಕುಮ ಅಳಿಸಿದಂತೆ ಕಾಣುವ ವೀಡಿಯೋ ಒಂದು ವೈರಲ್ ಆಗಿದ್ದು, ಇವರ ನಡವಳಿಕೆ ಅಘಾತ ತಂದಿದೆ ಎಂದು ಈಶ್ವರಪ್ಪ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಾ.ರಾಜ್ ಕುಮಾರ್ ಅವರ ಕುಟುಂಬಕ್ಕೆ ತನ್ನದೇ ಆದ ಹೆಗ್ಗಳಿಕೆ ಇದೆ. ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತರು ಅವರು. ಅಪ್ಪಟ ಹಿಂದುಗಳಾಗಿದ್ದವು. ದೈವ ಭಕ್ತರಾಗಿದ್ದರು. ಇಂತಹ ಕುಟುಂಬದವರಾದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮತ್ತು ಅವರ ಪತಿ ಯಾರನ್ನೋ ತೃಪ್ತಿ ಪಡಿಸಲು ಹಿಂದೂ ಸಂಸ್ಕೃತಿಯ ಪ್ರತೀಕವಾಗಿರುವ ಕುಂಕುಮ ಅಳಿಸಲು ಮುಂದಾಗಿರುವುದು ಅಘಾತಕಾರಿ ವಿಷಯ. ಇದು ಆ ಕುಟುಂಬಕ್ಕೂ ಶೋಭೆ ತರುವಂತಹದ್ದಲ್ಲ ಎಂದರು.
ಲಕ್ಷಕ್ಕಿಂತ ಅಧಿಕ ಮತ ಅಂತರದ ಜಯ ನಿಶ್ಚಿತ: ಈಶ್ವರಪ್ಪ ವಿಶ್ವಾಸ
ಶಿಕಾರಿಪುರ: ಬಿಜೆಪಿಯ ಅತಿ ಹೆಚ್ಚು ಕಾರ್ಯಕರ್ತರು, ಹಿಂದೂಪರ ಹೋರಾಟಗಾರರು,ಈ ಡಿಗ,ಲಿಂಗಾಯಿತ ಸಹಿತ ಎಲ್ಲ ವರ್ಗದ ಮತದಾರರ ಬೆಂಬಲದಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಲಕ್ಷಕ್ಕಿಂತ ಅಧಿಕ ಮತಗಳ ಅಂತರದಿಂದ ಜಯಗಳಿಸುವುದು ನಿಶ್ಚಿತ ಎಂದು ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಶುಕ್ರವಾರ ಪಟ್ಟಣದ ಶಿರಾಳಕೊಪ್ಪ ರಸ್ತೆಯಲ್ಲಿನ ರಾಷ್ಟ್ರಭಕ್ತರ ನೂತನ ಕಾರ್ಯಾಲಯ ಉದ್ಘಾಟಿಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರದಲ್ಲಿ ಜಿಲ್ಲಾದ್ಯಂತ ಪ್ರವಾಸ ಕೈಗೊಂಡ ಸಂದಭದಲ್ಲಿ ಸಾಮಾನ್ಯ ಜನತೆ ಸ್ವಯಂ ಸ್ಪೂರ್ತಿಯಿಂದ ಬೆಂಬಲ ವ್ಯಕ್ತಪಡಿಸುತ್ತಿದ್ದು ನಾಮಪತ್ರ ಸಲ್ಲಿಕೆಯ ಸಂದರ್ಬದಲ್ಲಿ ವೈಯುಕ್ತಿಕವಾಗಿ ಆಹ್ವಾನಿಸಲಾಗದಿದ್ದರೂ ಅಂದಾಜು 35 ಸಾವಿರ ಅಧಿಕ ಜನತೆ ಪಾಲ್ಗೊಂಡು ದೊಡ್ಡ ಬೆಂಬಲದಿಂದ ಸ್ಪೂರ್ತಿ ಹೆಚ್ಚಾಗಿದೆ ಎಂದರು.
ಜಿಲ್ಲೆಯ ಎಲ್ಲ ಭಾಗದಲ್ಲಿ ಪ್ರವಾಸ ನಡೆಸಿದಾಗ ಸಾಮಾನ್ಯ ಜನತೆ ಹಿಂದೂತ್ವವಾದಿಗೆ ಅನ್ಯಾಯವಾಗಿದೆ ಪಕ್ಷದಲ್ಲಿ ಮೂಲೆಗುಂಪು ಮಾಡುವ ವ್ಯವಸ್ಥಿತ ಹುನ್ನಾರ ಖಂಡಿಸಿ ನಿಮ್ಮ ಜತೆ ನಿಲ್ಲುತ್ತೇವೆ ಎಂದು ಎಲ್ಲ ವರ್ಗದ ಜನತೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇಂದೇ ಚುನಾವಣೆ ನಡೆದಲ್ಲಿ ಕಾಂಗ್ರೆಸ್ ಹಾಗೂ ರಾಘವೇಂದ್ರರಿಗಿಂತ ಲಕ್ಷ ಅಧಿಕ ಮತಗಳ ಅಂತರದಿಂದ ಜಯಗಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯ ಅತಿ ಹೆಚ್ಚಿನ ಕಾರ್ಯಕರ್ತರು ಹಿಂದೂಪರ ಹೋರಾಟಗಾರರು ಮುಖಂಡರು ನನ್ನ ಬೆಂಬಲಕ್ಕಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ಜತೆ ಹೊಂದಾಣಿಕೆಯ ರಾಜಕಾರಣದಿಂದ ನಾಗರಾಜಗೌಡರಿಗೆ ಹಾಗೂ ಹಿಂದುಳಿದ ವರ್ಗದ ಮಾಲತೇಶ್ ಗೆ ವ್ಯವಸ್ಥಿತವಾಗಿ ಅನ್ಯಾಯ ಎಸೆಗಲಾಗಿದ. 60 ಸಾವಿರವಿದ್ದ ಗೆಲುವಿನ ಅಂತರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಹಣ ಖರ್ಚು ಮಾಡಿದರೂ ಕೇವಲ 10 ಸಾವಿರ ಅಂತರದಿಂದ ಜಯಸಾಧಿಸಿದ್ದಾರೆ ಎಂದು ಆರೋಪಿಸಿದರು.
ಇದೇ 22 ರಂದು ಚುನಾವಣೆ ಸ್ಪರ್ಧೆಗೆ ಅಧಿಕೃತ ಚಿಹ್ನೆ ದೊರೆಯಲಿದ್ದು, ಆ ನಂತರದಲ್ಲಿ ಇನ್ನು ಹೆಚ್ಚಿನ ಬೆಂಬಲ ಮತದಾರರಿಂದ ದೊರೆಯಲಿದೆ ಎಂದ ಅವರು ಹುಬ್ಬಳ್ಳಿಯಲ್ಲಿ ಹಿಂದೂ ಯುವತಿಯೋರ್ವಳನ್ನು ಮುಸಲ್ಮಾನ ಗೂಂಡಾ ಹತ್ಯೆಗೈದಿದ್ದು ಸರ್ಕಾರ ಮಾತ್ರ ಏನೂ ಸಂಬಂದವಿಲ್ಲದ ರೀತಿ ವರ್ತಿಸುತ್ತಿದೆ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಕೇವಲ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಗಮನಹರಿಸಿದ್ದಾರೆ ಯಾರು ಸತ್ತರೂ ಪರವಾಗಿಲ್ಲ ನಮಗೆ ಮುಸ್ಲಿಂ ರ ಮತ ದೊರೆತರೆ ಸಾಕು ಎಂಬ ಮನಸ್ಥಿತಿಯಲ್ಲಿದ್ದಾರೆ ಎಂದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್,ಗಂಗ್ಯಾನಾಯ್ಕ ರಾಗಿಕೊಪ್ಪ,ಹುಚ್ರಾಯಪ್ಪ ತಿಮ್ಲಾಪುರ,ನಗರದ ಅಶೋಕಪ್ಪ ಮತ್ತಿತರರು ಉಪಸ್ಥಿತರಿದ್ದರು