ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಕರ್ನಾಟಕ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘ (ಕುಪ್ಮಾ) ವತಿಯಿಂದ ಜು. 20ರಿಂದ ಸೆ.12ರವರೆಗೆ ರಾಜ್ಯದಲ್ಲಿ ಜಿಲ್ಲಾವಾರು ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಸದಸ್ಯತ್ವ ಅಭಿಯಾನ ನಡೆಸಲಾಗುವುದು ಎಂದು ಕುಪ್ಮಾ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ತಿಳಿಸಿದ್ದಾರೆ.ಬುಧವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಕುಪ್ಮಾ ಅಡಿಯಲ್ಲಿ 205 ಸದಸ್ಯ ಶಿಕ್ಷಣ ಸಂಸ್ಥೆಗಳಿವೆ. ಕಳೆದ ಮೂರು ವರ್ಷಗಳಿಂದ ಕುಪ್ಮಾ ನಿರಂತರವಾಗಿ ಖಾಸಗಿ ಅನುದಾನರಹಿತ ಕಾಲೇಜುಗಳ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಹಲವು ಸಮಸ್ಯೆಗಳನ್ನು ಬಗೆಹರಿಸಿದೆ, ಶಿಕ್ಷಣ ವ್ಯವಸ್ಥೆಯಲ್ಲೂ ಅನೇಕ ಸುಧಾರಣೆಗಳನ್ನು ತರುವಲ್ಲಿ ಯಶಸ್ವಿಯಾಗಿದ್ದೇವೆ. ಇನ್ನೂ ಹಲವು ಜ್ವಲಂತ ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸಲು ರಾಜ್ಯವ್ಯಾಪಿ ಕುಪ್ಮಾ ಸಂಸ್ಥೆಯನ್ನು ವಿಸ್ತರಿಸುವ ಮೂಲಕ ಸಂಘಟನೆ ಬಲಗೊಳಿಸುವ ತೀರ್ಮಾನವನ್ನು ಕೈಗೊಂಡಿದ್ದೇವೆ. ಸಂಸ್ಥೆಯ ನಿಯಮಾವಳಿ ಪ್ರಕಾರ 10 ಸಾವಿರ ರು. ಪಾವತಿಸಿ ಪ್ರತಿ ಸಂಸ್ಥೆಗಳು ಸದಸ್ಯತ್ವ ಪಡೆಯುವ ಮೂಲಕ ಕುಪ್ಮಾ ಸಂಘಟನೆ ಬಲಪಡಿಸುವುದು ನಮ್ಮ ಉದ್ದೇಶ ಎಂದು ಹೇಳಿದರು.
ಸೆ.12,13ರಂದು ರಾಜ್ಯ ಸಮಾವೇಶ:ಕುಪ್ಮಾ ರಾಜ್ಯ ಕಾರ್ಯದರ್ಶಿ ಪ್ರೊ. ನರೇಂದ್ರ ನಾಯಕ್ ಮಾತನಾಡಿ, ಸೆ.12, 13ರಂದು ಕುಪ್ಮಾದ ರಾಜ್ಯ ಮಟ್ಟದ ಸಮಾವೇಶವನ್ನು ದಾವಣಗೆರೆಯಲ್ಲಿ ಆಯೋಜಿಸಲಾಗಿದೆ. ಸಂಘದ ಸದಸ್ಯತ್ವವನ್ನು ಪಡೆದಿರುವ ಎಲ್ಲ ಆಡಳಿತ ಮಂಡಳಿಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ರಾಜ್ಯದ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಈ ಸಮಾವೇಶದ ಉದ್ದೇಶ ಎಂದರು.ಸಂಘವನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸುವ ನಿರ್ಧಾರದ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾವಾರು ಸಂಯೋಜಕರನ್ನು ನೇಮಿಸಲಾಗಿದೆ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಉಡುಪಿ, ಹಾವೇರಿ, ಮೈಸೂರು ಜಿಲ್ಲೆಗಳಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸದಸ್ಯರನ್ನೊಳಗೊಂಡ ಜಿಲ್ಲಾ ಸಮಿತಿ ಪದಗ್ರಹಣಗೊಂಡು ಉತ್ತಮವಾಗಿ ಸಂಘವನ್ನು ಸಂಘಟಿಸುವಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.ಕುಪ್ಮಾ ಗೌರವಾಧ್ಯಕ್ಷ ಡಾ.ಕೆ.ಸಿ. ನಾಯ್ಕ್, ರಾಧಾಕೃಷ್ಣ ಶೆಣೈ, ಪದಾಧಿಕಾರಿಗಳಾದ ಸುಧಾಕರ ಶೆಟ್ಟಿ, ಯುವರಾಜ ಜೈನ್, ಮಂಜುನಾಥ ರೇವಣ್ಕರ್ ಇದ್ದರು.----------
ಕುಪ್ಮಾ ಕಿರುಹೊತ್ತಗೆ ಬಿಡುಗಡೆಕಳೆದ ಮೂರು ವರ್ಷಗಳಲ್ಲಿ ಕುಪ್ಮಾ ಸಮಿತಿಯಿಂದ ಕೈಗೊಂಡ ಕಾರ್ಯಕ್ರಮಗಳನ್ನು ‘ಕುಪ್ಮಾ’ ಕಿರು ಹೊತ್ತಗೆ ಮೂಲಕ ದಾಖಲಿಸಲಾಗಿದ್ದು, ಈ ಪುಸ್ತಕವನ್ನು ಡಾ.ಎಂ. ಮೋಹನ ಆಳ್ವ ಇದೇ ಸಂದರ್ಭ ಬಿಡುಗಡೆಗೊಳಿಸಿದರು. ಈ ಕಿರು ಹೊತ್ತಗೆಯಲ್ಲಿ ಕುಪ್ಮಾ ಕಾನೂನಾತ್ಮಕವಾಗಿ ಹೇಗೆ ಕಾರ್ಯ ನಿರ್ವಹಿಸಬೇಕೆಂಬ ನಿಯಮಾವಳಿಗಳಿವೆ. ಇದನ್ನು ಪ್ರತಿ ಜಿಲ್ಲೆಯ ಕುಪ್ಮಾದ ಘಟಕಗಳು ಪಾಲಿಸಬೇಕಾಗುತ್ತದೆ. ಈ ನಿಯಮಾವಳಿ ಪ್ರಕಾರ ಜಿಲ್ಲಾವಾರು ಚುನಾವಣೆ ನಡೆಸಿ ಪದಾಧಿಕಾರಿಗಳ ಆಯ್ಕೆ ಹಾಗೂ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೋಹನ್ ಆಳ್ವ ತಿಳಿಸಿದರು.