ಬೆನಗಲ್‌ ವಿಶ್ವ ಭಾರತಿ ಕರ್ನಾಟಕ ಪ್ರತಿಷ್ಠಾನ ಪ್ರಾಯೋಜಕತ್ವದಲ್ಲಿ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ನೀಡುವ ಕವಿ ಕುರಾಡಿ ಸೀತಾರಾಮ ಅಡಿಗ ನೆನಪಿನ ಕಾವ್ಯ ಪ್ರಶಸ್ತಿ ಬೆಂಗಳೂರಿನ ಕವಿ ಡಾ. ಲಕ್ಷ್ಮಣ್ ವಿ. ಎ. ಅವರ ಪರಿಮಳದ ಬಾಕಿ ಮೊತ್ತ ಕವನ ಸಂಕಲನ ಆಯ್ಕೆಯಾಗಿದೆ.

ಉಡುಪಿ: ಬೆನಗಲ್‌ ವಿಶ್ವ ಭಾರತಿ ಕರ್ನಾಟಕ ಪ್ರತಿಷ್ಠಾನ ಪ್ರಾಯೋಜಕತ್ವದಲ್ಲಿ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ನೀಡುವ ಕವಿ ಕುರಾಡಿ ಸೀತಾರಾಮ ಅಡಿಗ ನೆನಪಿನ ಕಾವ್ಯ ಪ್ರಶಸ್ತಿ–2026ಕ್ಕೆ ಬೆಂಗಳೂರಿನ ಕವಿ ಡಾ. ಲಕ್ಷ್ಮಣ್ ವಿ. ಎ. ಅವರ ಪರಿಮಳದ ಬಾಕಿ ಮೊತ್ತ ಕವನ ಸಂಕಲನ ಆಯ್ಕೆಯಾಗಿದೆ. ಈ ಪ್ರಶಸ್ತಿಗೆ 2025ರಲ್ಲಿ ಪ್ರಕಟಗೊಂಡ ಕವನ ಸಂಕಲನಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 71 ಕವನ ಸಂಕಲನಗಳು ಸ್ಪರ್ಧೆಗೆ ಬಂದಿದ್ದವು.

ಕನ್ನಡ ಸಾಹಿತ್ಯ ಲೋಕದ ಹಿರಿಯ ವಿಮರ್ಶಕ ಹಾಗೂ ಸಂಸ್ಕೃತಿ ಚಿಂತಕ ಪ್ರೊ. ಎಚ್. ದಂಡಪ್ಪ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿ, ಪರಿಮಳದ ಬಾಕಿ ಮೊತ್ತ ಕವನ ಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಪ್ರಶಸ್ತಿಯು 10,000 ರು. ನಗದು ಗೌರವಧನ, ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್‌ನಲ್ಲಿ ನಡೆಯಲಿದೆ ಎಂದು ಪ್ರಶಸ್ತಿ ಸಮಿತಿಯ ಸಂಚಾಲಕಿ ಪೂರ್ಣಿಮಾ ಜನಾರ್ದನ್ ತಿಳಿಸಿದ್ದಾರೆ.ಡಾ. ಲಕ್ಷ್ಮಣ್ ವಿ. ಎ. - ಪರಿಚಯ: ಮೂಲತಃ ಬೆಳಗಾವಿ ಜಿಲ್ಲೆಯವರಾದ ಡಾ. ಲಕ್ಷ್ಮಣ್ ವಿಠೋಬ ಅಟಪಟಕರ ಅವರು ಆಯುರ್ವೇದ ವೈದ್ಯರಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕವಿ, ಕಥೆಗಾರ ಹಾಗೂ ಅಂಕಣಕಾರರಾಗಿ ಕನ್ನಡ ಸಾಹಿತ್ಯದಲ್ಲಿ ಗುರುತಿಸಿಕೊಂಡಿದ್ದಾರೆ ಮತ್ತು ಜನಪ್ರಿಯ ವೈದ್ಯ ವಿಸ್ಮಯ ಅಂಕಣದ ಲೇಖಕರಾಗಿದ್ದಾರೆ. ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ, ಅಪ್ಪನ ಅಂಗಿ, ಕಾಯಿನ್ ಬೂತ್, ಪರಿಮಳದ ಬಾಕಿ ಮೊತ್ತ, ಪಿ.ಎಚ್.ಸಿ. ಕವಲುಗುಡ್ಡ ಸೇರಿದಂತೆ ಒಟ್ಟು ಅವರ 11 ಕೃತಿಗಳು ಪ್ರಕಟಗೊಂಡಿವೆ.

ಅವರ ‘ಕಾಯಿನ್ ಬೂತ್’ಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪರಿಮಳದ ಬಾಕಿ ಮೊತ್ತಕ್ಕೆ ಈ ಹೊತ್ತಿಗೆ ಕಾವ್ಯ ಪುರಸ್ಕಾರಗಳು, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಗಳು ದೊರೆತಿವೆ. ಅವರ ಎರಡು ಕಥೆಗಳು ರಾಣಿ ಚೆನ್ನಮ್ಮ ವಿವಿ ಪಠ್ಯಕ್ರಮದಲ್ಲಿ ಸೇರಿಸಲ್ಪಟ್ಟಿವೆ.