ಕಾರವಾರ ಸಮೀಪದ ಅರಬ್ಬೀ ಸಮುದ್ರದಲ್ಲಿನ ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆ ಶನಿವಾರ ನಡೆಯಲಿರುವ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಬೈತಕೋಲ ಬಂದರು ಪ್ರದೇಶಕ್ಕೆ ಭೇಟಿ ನೀಡಿ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು.
ಕಾರವಾರ: ಇಲ್ಲಿನ ಅರಬ್ಬೀ ಸಮುದ್ರದಲ್ಲಿನ ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆ ಶನಿವಾರ ನಡೆಯಲಿರುವ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಬೈತಕೋಲ ಬಂದರು ಪ್ರದೇಶಕ್ಕೆ ಭೇಟಿ ನೀಡಿ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು.
ಕಾರವಾರದಿಂದ ಸುಮಾರು 10 ಕಿಮೀ ದೂರದಲ್ಲಿರುವ ಕೂರ್ಮಗಡ ದ್ವೀಪದಲ್ಲಿ ಪ್ರತಿವರ್ಷ ನರಸಿಂಹ ದೇವರ ಜಾತ್ರಾ ಮಹೋತ್ಸವ ನಡೆಯುತ್ತದೆ. ಇದು ಅರಬ್ಬೀ ಸಮುದ್ರದಲ್ಲಿರುವ ನಡುಗಡ್ಡೆಯಲ್ಲಿ ನಡೆಯುವ ಜಾತ್ರೆಯಾಗಿರುವ ಹಿನ್ನೆಲೆ ದೋಣಿಗಳ ಮೂಲಕ ಮಾತ್ರ ತೆರಳಬಹುದಾಗಿದ್ದು, ಪ್ರತಿವರ್ಷ ಜಾತ್ರೆಯ ಪ್ರಯುಕ್ತ ಮೀನುಗಾರರು ಭಕ್ತರು, ಸಾರ್ವಜನಿಕರನ್ನು ತಮ್ಮ ಬೋಟ್‌ಗಳಲ್ಲಿ ಕರೆದೊಯ್ಯುವುದು ವಾಡಿಕೆಯಾಗಿದೆ.ಈ ಹಿನ್ನೆಲೆ ಬೋಟುಗಳಲ್ಲಿ ಸಾರ್ವಜನಿಕರನ್ನು ಕರೆದೊಯ್ಯುವ ವೇಳೆ ಯಾವುದೇ ಅವಘಡಗಳು ನಡೆಯದಿರಲಿ ಎನ್ನುವ ಉದ್ದೇಶದಿಂದ ಜಾತ್ರೆಯ ವೇಳೆ ನಿಗದಿಪಡಿಸಿದ ಬೋಟುಗಳಲ್ಲಿ, ನಿಗದಿತ ಪ್ರಮಾಣದ ಜನರನ್ನು ಮಾತ್ರ ಕರೆದೊಯ್ಯುವಂತೆ ತಾಲೂಕಾಡಳಿತ ನೋಡಿಕೊಳ್ಳುತ್ತಿದೆ. ಈ ನಿಟ್ಚಿನಲ್ಲಿ ಬೈತಖೋಲ ಬಂದರಿಗೆ ಭೇಟಿ ನೀಡಿದ ಎಸ್ಪಿ ದೀಪನ್ ಅವರು, ಪೊಲೀಸ್ ನಿಯೋಜನೆ, ಬೋಟುಗಳಲ್ಲಿ ತೆರಳುವವರಿಗೆ ಲೈಫ್ ಜಾಕೆಟ್ ವ್ಯವಸ್ಥೆ ಹಾಗೂ ಬೋಟು ಲಂಗರು ಹಾಕುವ ಜಟ್ಟಿ ಪ್ರದೇಶದಲ್ಲಿನ ವ್ಯವಸ್ಥೆಗಳು, ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.
ಸ್ಥಳೀಯ ಮೀನುಗಾರರ ಮುಖಂಡರಿಂದ ಮಾಹಿತಿ ಪಡೆದುಕೊಂಡ ಎಸ್ಪಿ ಅವರು, ಜನರನ್ನು ಬೋಟುಗಳಲ್ಲಿ ಕರೆದೊಯ್ಯುವ ವೇಳೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಹೆಚ್ಚುವರಿಯಾಗಿ ಜನರನ್ನು ತುಂಬದೇ, ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಕರೆತರುವಂತೆ ಸೂಚನೆ ನೀಡಿದರು.ನರಸಿಂಹ ದೇವರ ಜಾತ್ರಾ ಮಹೋತ್ಸವ:
ಕೂರ್ಮಗಡ ಶ್ರೀ ನರಸಿಂಹ ದೇವರ ವಾರ್ಷಿಕ ಜಾತ್ರಾ ಮಹೋತ್ಸವ ಜ. 3ರಂದು ಶ್ರೀ ನರಸಿಂಹ ದೇವರ ದ್ವೀಪದಲ್ಲಿ ಜರುಗಲಿದೆ. ಭಕ್ತಾಧಿಗಳ ಸುರಕ್ಷತಾ ದೃಷ್ಟಿಯಿಂದ ಪ್ರತಿ ವರ್ಷದಂತೆ 10 ವರ್ಷಕ್ಕಿಂತ ಕಡಿಮೆ ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಹಾಗೂ ಮಧ್ಯಪಾನ ಮಾಡಿದವರಿಗೆ ದ್ವೀಪಕ್ಕೆ ತೆರಳುವುದನ್ನು ನಿಷೇಧಿಸಲಾಗಿದೆ. ದ್ವೀಪಕ್ಕೆ ತೆರಳುವ ಪ್ರತಿಯೊಬ್ಬರು ಜೀವ ರಕ್ಷಾ ಕವಚ ಧರಿಸಿ ದೋಣಿ ಹತ್ತುವುದನ್ನು ಕಡ್ಡಾಯಗೊಳಿಸಲಾಗಿದ್ದು, ಇದನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಿ ಆಡಳಿತಕ್ಕೆ ಸಹಕರಿಸುವಂತೆ ಕಾರವಾರ ತಹಸೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.