ಕಡಲನಗರಿ ಕಾರವಾರದಲ್ಲಿ ಅಪರೂಪದ ಹಾಗೂ ವಿಶೇಷವಾದ ದ್ವೀಪ ಜಾತ್ರೆ ಎಂದೇ ಪ್ರಸಿದ್ಧವಾದ ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆ ವಿಜೃಂಭಣೆಯಿಂದ ನೆರವೇರಿದೆ.

ವಿಜೃಂಭಣೆಯಿಂದ ಜರುಗಿದ ಕೂರ್ಮಗಡ ನರಸಿಂಹ ದೇವರ ಜಾತ್ರೆ

ಕನ್ನಡಪ್ರಭ ವಾರ್ತೆ ಕಾರವಾರ

ಕಡಲನಗರಿ ಕಾರವಾರದಲ್ಲಿ ಅಪರೂಪದ ಹಾಗೂ ವಿಶೇಷವಾದ ದ್ವೀಪ ಜಾತ್ರೆ ಎಂದೇ ಪ್ರಸಿದ್ಧವಾದ ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆ ವಿಜೃಂಭಣೆಯಿಂದ ನೆರವೇರಿದೆ. ಅರಬ್ಬೀ ಸಮುದ್ರದ ನಡುವೆ ಇರುವ ಕೂರ್ಮಗಡ ದ್ವೀಪದಲ್ಲಿ ನೆಲೆಸಿರುವ ನರಸಿಂಹ ದೇವರ ಜಾತ್ರಾ ಮಹೋತ್ಸವಕ್ಕೆ ನೂರಾರು ಭಕ್ತರು ದೋಣಿಗಳ ಮೂಲಕ ತೆರಳಿ ದರ್ಶನ ಪಡೆಯುವ ಮೂಲಕ ಪುನೀತರಾದರು.

ನಗರದ ಬೈತಕೋಲ ಬಂದರಿನಲ್ಲಿ ಹೂವಿನ ಹಾರ, ತಳಿರು ತೋರಣಗಳಿಂದ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ಬೋಟುಗಳು ಬೆಳಗ್ಗೆಯಿಂದಲೇ ಭಕ್ತರನ್ನು ದ್ವೀಪಕ್ಕೆ ಕರೆದೊಯ್ಯಲು ಸಜ್ಜಾಗಿದ್ದವು. ಕಾರವಾರದಿಂದ ಸುಮಾರು 10-15 ಕಿಮೀ ದೂರದಲ್ಲಿರುವ ಈ ದ್ವೀಪಕ್ಕೆ ತೆರಳಲು ಮೀನುಗಾರರು ಬೋಟುಗಳ ಮೂಲಕ ಉಚಿತ ಸೇವೆ ಒದಗಿಸುವುದು ಇಲ್ಲಿನ ವಿಶೇಷ. ಬೋಟಿನಲ್ಲಿ ಕುಳಿತು ಸಮುದ್ರಯಾನ ಮಾಡುತ್ತಾ, ಕಡಲ ಸೌಂದರ್ಯವನ್ನು ಸವಿಯುತ್ತಾ ಜಾತ್ರೆಗೆ ಹೋಗುವುದು ಭಕ್ತರಿಗೆ ದೈವದರ್ಶನದ ಜೊತೆಗೆ ಪ್ರವಾಸದ ಅನುಭವವನ್ನೂ ನೀಡುತ್ತದೆ.

ನರಸಿಂಹ ದೇವರನ್ನು ಮೀನುಗಾರರು ತಮ್ಮ ಆರಾಧ್ಯ ದೈವವೆಂದು ನಂಬಿದ್ದಾರೆ. ಕಾಳಿ ನದಿ ಮತ್ತು ಅರಬ್ಬೀ ಸಮುದ್ರದ ಸಂಗಮದಲ್ಲಿ ಸಾಲಿಗ್ರಾಮ ರೂಪದಲ್ಲಿ ಈ ದೇವರು ದೊರೆತಿದ್ದು ಎನ್ನುವ ಹಿನ್ನೆಲೆಯಿದ್ದು, ಪ್ರತಿವರ್ಷ ಶಾಖಾಂಬರಿ ಹುಣ್ಣಿಮೆಯಂದು ಇಲ್ಲಿ ಜಾತ್ರೆ ನಡೆಯುತ್ತದೆ. ಈ ವಿಶೇಷ ದಿನಗಳಲ್ಲಿ ಮೀನುಗಾರರು ಕಡಲಿಗಿಳಿಯದೆ, ಮೀನುಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಕಡವಾಡದ ದೇವಸ್ಥಾನದಿಂದ ದೇವರನ್ನು ಬೋಟಿನಲ್ಲಿ ದ್ವೀಪಕ್ಕೆ ಕರೆತಂದು ಪೂಜೆ ಸಲ್ಲಿಸಲಾಗುತ್ತದೆ. ಭಕ್ತರು ದೇವರಿಗೆ ಬಾಳೆಗೊನೆಯನ್ನು ಹರಕೆಯಾಗಿ ನೀಡುತ್ತಾರೆ. ಅಲ್ಲದೇ ಭಕ್ತರು ತಮ್ಮ ಇಷ್ಟಾರ್ಥ ಈಡೇರಿಸುವಂತೆ ದೇವರ ಬಳಿ ಹರಕೆ ಸಹ ಕಟ್ಟಿಕೊಳ್ಳುತ್ತಾರೆ.

ಕೂರ್ಮಗಡ ಜಾತ್ರೆ ಧಾರ್ಮಿಕವಾಗಿ ಹಾಗೂ ಪ್ರವಾಸದ ರೀತಿಯಿಂದಲೂ ಪ್ರಸಿದ್ಧವಾಗಿರುವುದರಿಂದ ಕಾರವಾರ ಮಾತ್ರವಲ್ಲದೆ ಗೋವಾ, ಮಹಾರಾಷ್ಟ್ರ ಭಾಗಗಳಿಂದಲೂ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಈ ವಿಶಿಷ್ಟ ದ್ವೀಪ ಜಾತ್ರೆಯ ಸಂಭ್ರಮದಲ್ಲಿ ಮಿಂದೆದ್ದರು. ಕಳೆದ ಆರು ವರ್ಷಗಳ ಹಿಂದೆ ಪ್ರವಾಸಿಗರ ಬೋಟೊಂದು ಮುಳುಗಿ 16 ಮಂದಿ ಸಾವನ್ನಪ್ಪಿದ ದುರಂತದ ಬಳಿಕ ಜಾತ್ರೆಗೆ ಆಗಮಿಸುವ ಭಕ್ತರ ಸಂಖ್ಯೆ ಕೊಂಚ ಕಡಿಮೆಯಾಗುವಂತಾಗಿತ್ತು. ಅದಾದ ಬಳಿಕ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕೈಗೊಳ್ಳುತ್ತಿರುವ ಮುಂಜಾಗ್ರತಾ ಕ್ರಮಗಳಿಂದಾಗಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಆಗಮಿಸಿದ್ದು ಕಂಡುಬಂತು.

ಸಾವಿರಾರು ಸಂಖ್ಯೆಯಲ್ಲಿ ಜನರು ಬೋಟುಗಳಲ್ಲಿ ಪ್ರಯಾಣಿಸುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಭಕ್ತರನ್ನು ಕರೆದೊಯ್ಯಲು ಬೈತಕೋಲ ಬಂದರಿನಿಂದ 26 ಪರ್ಸಿನ್ ಬೋಟುಗಳಿಗೆ ಮಾತ್ರ ಅನುಮತಿ ನೀಡಲಾಗಿತ್ತು. ಉಳಿದಂತೆ ಯಾವುದೇ ಬಂದರಿನಿಂದ ಜನರು ತೆರಳಲು ಅವಕಾಶ ಇಲ್ಲವಾಗಿದ್ದು, ದ್ವೀಪದ ಬಳಿ ಜನರ ಸುರಕ್ಷತೆಯ ದೃಷ್ಟಿಯಿಂದ ಕರಾವಳಿ ಕಾವಲು ಪಡೆಯ ಮೂರು ಬೋಟುಗಳನ್ನು ಪೆಟ್ರೋಲಿಂಗ್‌ಗೆ ನಿಯೋಜಿಸಲಾಗಿತ್ತು. ನಿಗದಿತ ಸಂಖ್ಯೆಯ ಪ್ರಯಾಣಿಕರನ್ನು ಮಾತ್ರ ಬೋಟುಗಳಿಗೆ ಹತ್ತಿಸುವ ಮೂಲಕ ಸುರಕ್ಷತೆಗೆ ಆದ್ಯತೆ ನೀಡಲಾಯಿತು. ಜೊತೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಬಂದರಿನಲ್ಲಿ ಆರೋಗ್ಯ ಸಿಬ್ಬಂದಿ, ಅಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ವಾಹನವನ್ನೂ ನಿಯೋಜಿಸಲಾಗಿತ್ತು.ದೇವರ ದರ್ಶನ ಪಡೆದ ಎಸ್ಪಿ ದೀಪನ್

ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಕುಟುಂಬಸ್ಥರೊಂದಿಗೆ ಕೂರ್ಮಗಡ ದ್ವೀಪಕ್ಕೆ ತೆರಳಿ ನರಸಿಂಹ ದೇವರ ದರ್ಶನ ಪಡೆದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಜನರು ಜಾತ್ರೆಗೆ ಸುರಕ್ಷಿತವಾಗಿ ಬಂದು ಹೋಗುವ ನಿಟ್ಟಿನಲ್ಲಿ ಸಕಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು. ಭಕ್ತರು ಹೊರಡುವ ಬೈತಕೋಲ ಬಂದರು ಹಾಗೂ ದ್ವೀಪ ಪ್ರವೇಶಿಸುವ ಜಾಗದಲ್ಲಿ ಬಂದು ಹೋದವರ ಮಾಹಿತಿ ಪಡೆದುಕೊಳ್ಳಲಾಗಿದ್ದು, ಜಾತ್ರೆಗೆ ಬಂದವರು ಸುರಕ್ಷಿತವಾಗಿ ವಾಪಸ್ಸಾಗುವಂತೆ ಮೀನುಗಾರರು ಹಾಗೂ ಇಲಾಖೆಗಳ ಸಹಯೋಗದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.