ವಾಲ್ಮೀಕಿ ಮೀಸಲಾತಿಯಲ್ಲಿ ಕುರುಬರು ಪಾಲು ಪಡೆಯಲ್ಲ: ನಿರಂಜನಾನಂದಪುರಿ ಸ್ವಾಮೀಜಿ

| Published : Oct 09 2025, 02:01 AM IST

ವಾಲ್ಮೀಕಿ ಮೀಸಲಾತಿಯಲ್ಲಿ ಕುರುಬರು ಪಾಲು ಪಡೆಯಲ್ಲ: ನಿರಂಜನಾನಂದಪುರಿ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ನಾವು ಈಗಾಗಲೇ 2ಎ ಮೀಸಲಾತಿಯಲ್ಲಿನ ಕುರುಬರ ಜನಸಂಖ್ಯಾಗನುಣವಾಗಿ ಮೀಸಲಾತಿ ಪ್ರಮಾಣ ಪಡೆದುಕೊಂಡು ಎಸ್‌ಟಿ ಮೀಸಲಾತಿ ಪಡೆಯುತ್ತೇವೆ ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ತಿಳಿಸಿದ್ದಾರೆ.

ಹಾವೇರಿ: ಲೋಕೂರು ಸಮಿತಿಯ ಮಾನದಂಡದಂತೆ ಇರುವ ಕುರುಬ ಸಮುದಾಯದ ಲಕ್ಷಣಗಳನ್ನು ಆಧರಿಸಿ ಕೇಂದ್ರ ಸರ್ಕಾರ ನಮಗೆ ಎಸ್‌ಟಿ ಮೀಸಲಾತಿ ನೀಡಿದರೆ ವಾಲ್ಮೀಕಿ ಬಂಧುಗಳ ಶೇ. 7ರಷ್ಟಿರುವ ಮೀಸಲಾತಿಯಲ್ಲಿ ನಾವು ಪಾಲನ್ನು ಪಡೆಯುವುದಿಲ್ಲ. ನಾವು ಈಗಾಗಲೇ 2ಎ ಮೀಸಲಾತಿಯಲ್ಲಿನ ಕುರುಬರ ಜನಸಂಖ್ಯಾಗನುಣವಾಗಿ ಮೀಸಲಾತಿ ಪ್ರಮಾಣ ಪಡೆದುಕೊಂಡು ಎಸ್‌ಟಿ ಮೀಸಲಾತಿ ಪಡೆಯುತ್ತೇವೆ ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ವಾಲ್ಮೀಕಿ ಬಂಧುಗಳು ಯಾವುದೇ ಉಹಾಪೋಹ, ಗೊಂದಲಗಳಿಗೆ ಕಿವಿಗೊಡದೇ ಸಂವಿಧಾನಬದ್ಧವಾಗಿ `ನಮ್ಮ ಹಕ್ಕುಗಳನ್ನು ನಾವು ಪಡೆಯುತ್ತೇವೆ''''. ಸಮಾಜದಲ್ಲಿ ಯಾವತ್ತೂ ಸಹೋದರ ಸಮಾಜಗಳಂತಿರುವ ನಾವು-ನೀವು ಸಾಂವಿಧಾನಿಕ ಹಕ್ಕುಗಳನ್ನು ಪಡೆದುಕೊಳ್ಳಲು ಸಾಮರಸ್ಯ, ಸೌಹಾರ್ದತೆಯಿಂದ ಇದ್ದು ಸಮಾಜದ ಸ್ವಾಸ್ಥ್ಯ ಕಾಪಾಡಿಕೊಳ್ಳೋಣ ಎಂದು ಮನವಿ ಮಾಡಿದ್ದಾರೆ.

2021ರಲ್ಲಿ ಕಾಗಿನೆಲೆ ಕನಕ ಗುರುಪೀಠ ಮತ್ತು ರಾಜ್ಯ ಕುರುಬರ ಎಸ್‌ಟಿ ಹೋರಾಟ ಸಮಿತಿಯ ಕೆ. ವಿರೂಪಾಕ್ಷಪ್ಪ, ಕೆ.ಎಸ್. ಈಶ್ವರಪ್ಪ, ಎಚ್. ವಿಶ್ವನಾಥ, ಎಚ್.ಎಂ. ರೇವಣ್ಣ, ಬಂಡೆಪ್ಪ ಕಾಶಂಪುರ, ಹಾಲುಮತ ಮಹಾಸಭಾದ ರುದ್ರಣ್ಣ ಗುಳಗುಳಿ, ಕುರುಬ ಸಮಾಜದ ಎಲ್ಲ ಸಂಘಟನೆಗಳ ಆಶ್ರಯದಲ್ಲಿ ಕುರುಬರಿಗೆ ಎಸ್‌ಟಿ ಮೀಸಲಾತಿ ಹೋರಾಟದ ಪಾದಯಾತ್ರೆಯು 2021 ಜ. 15ರಂದು ಕಾಗಿನೆಲೆಯಿಂದ ಬೆಂಗಳೂರಿನ ವರೆಗೆ 360 ಕಿಮೀ ಕ್ರಮಿಸಿ, 2021 ಫೆ. 7ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ತದನಂತರ ನಿರಂತರ ಪ್ರಯತ್ನ ಹಾಗೂ ಒತ್ತಾಯದಿಂದ ಅಂದಿನ ಬಿಜೆಪಿ ನೇತೃತ್ವದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿ, 2023 ಮಾ. 28ರಂದು ಆದೇಶ ಮಾಡಿತು. ಆನಂತರದ ಕಾಂಗ್ರೆಸ್ ಸರ್ಕಾರ 2023 ಜು. 20ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ ಕಳುಹಿಸಿ ಕೊಟ್ಟಿತು. ಪ್ರಸ್ತುತ ಕುರುಬರ ಎಸ್‌ಟಿ ಮೀಸಲಾತಿಯ ಕುರಿತು ಕೇಂದ್ರ ಸರ್ಕಾರವು ಹಲವು ಮಾಹಿತಿ ಕೇಳಿದ್ದು, ಅದನ್ನು ರಾಜ್ಯ ಸರ್ಕಾರವು ನೀಡುತ್ತಿದೆ ಎಂದಿದ್ದಾರೆ.

ನಮ್ಮೆಲ್ಲರ ಹೋರಾಟದ ಫಲಕ್ಕೆ ಸಂವಿಧಾನಾತ್ಮಕವಾಗಿ ನ್ಯಾಯಸಿಗುವ ನಿರೀಕ್ಷೆ ನಮ್ಮದಾಗಿದ್ದು, ಇದರ ಮಧ್ಯೆ ಸಹೋದರ ಸಮಾಜವಾದ ಈಗಾಗಲೇ ಎಸ್‌ಟಿ ಮೀಸಲಾತಿ ಸೌಲಭ್ಯ ಪಡೆಯುತ್ತಿರುವ ವಾಲ್ಮೀಕಿ ಬಂಧುಗಳು ಕುರುಬರಿಗೆ ಎಸ್‌ಟಿ ಮೀಸಲಾತಿ ಕೊಡಬಾರದು, ನಮಗೆ ಅನ್ಯಾಯವಾಗುತ್ತದೆ, ನಾವು ಉಗ್ರ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಮನವಿ ನೀಡುವ ಮೂಲಕ, ಹಲವು ಬಹಿರಂಗ ವೇದಿಕೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನೆಯ ಮಾತುಗಳನ್ನಾಡಿ ಖಂಡಿಸುತ್ತಿರುವುದನ್ನು ಗಮನಿಸಿ, ಶ್ರೀಕನಕ ಗುರುಪೀಠವು ವಾಲ್ಮೀಕಿ ಬಂಧುಗಳಿಗೆ ಕುರುಬ ಸಮುದಾಯದ ಗುರಿ, ಉದ್ದೇಶವನ್ನು ಮನದಟ್ಟು ಮಾಡಿಕೊಡಲು ಬಯಸುತ್ತದೆ ಎಂದು ತಿಳಿಸಿದ್ದಾರೆ.