ಕುರುಬ ಜನಾಂಗ ಎಸ್ಟಿ ಸೇರ್ಪಡೆಗೆ ಮತ್ತೆ ಕೇಂದ್ರಕ್ಕೆ ಶಿಫಾರಸು: ಸಿಎಂ

| Published : Sep 18 2025, 02:00 AM IST

ಕುರುಬ ಜನಾಂಗ ಎಸ್ಟಿ ಸೇರ್ಪಡೆಗೆ ಮತ್ತೆ ಕೇಂದ್ರಕ್ಕೆ ಶಿಫಾರಸು: ಸಿಎಂ
Share this Article
  • FB
  • TW
  • Linkdin
  • Email

ಸಾರಾಂಶ

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ(ಎಸ್ಟಿ) ಸೇರಿಸಲು ಮತ್ತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದು, ‘ಎಸ್ಟಿಗೆ ಸೇರ್ಪಡೆ ಮಾಡುವ ಸಂಬಂಧ ಕೇಂದ್ರ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರ ಕೇವಲ ಶಿಫಾರಸು ಮಾಡಬಹುದು’ ಎಂದು ಸ್ಪಷ್ಟಪಡಿಸಿದ್ದಾರೆ.

- ಶಿಫಾರಸು ಮಾಡಲಷ್ಟೇ ನಮಗೆ ಅಧಿಕಾರ । ನಿರ್ಣಯ ಕೇಂದ್ರದ್ದು

----

ಸಿಎಂ ಹೇಳಿದ್ದು

- ಕುರುಬರಿಗೆ ಎಸ್ಟಿ ಮಾನ್ಯತೆಗೆ ಹಿಂದಿನ ಸರ್ಕಾರ ಶಿಫಾರಸು ಮಾಡಿತ್ತು

- ಸ್ಪಷ್ಟನೆ ಬಯಸಿ ಕೇಂದ್ರ ಈ ಹಿಂದಿನ ನಿರ್ಣಯ ವಾಪಸು ಕಳಿಸಿತ್ತು

- ಸ್ಪಷ್ಟನೆಗಳನ್ನು ನೀಡಿ ಕೇಂದ್ರಕ್ಕೆ ಶೀಘ್ರ ಶಿಫಾರಸು ಕಳಿಸಲಿದ್ದೇವೆ

- ಇದಕ್ಕೆ ಅನ್ಯ ಜಾತಿಗಳ ವಿರೋಧ ಬೇಡ. ಇದು ಇಂದಿನ ನಿರ್ಣಯವಲ್ಲ

- ಸಮಾಜಕ್ಕೆ ಸವಲತ್ತು ಸಿಗಲು ಗಣತಿಯಲ್ಲಿ ಕುರುಬ ಎಂದೇ ಬರೆಸಿ

---ಕನ್ನಡಪ್ರಭ ವಾರ್ತೆ ಕಲಬುರಗಿ

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ(ಎಸ್ಟಿ) ಸೇರಿಸಲು ಮತ್ತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದು, ‘ಎಸ್ಟಿಗೆ ಸೇರ್ಪಡೆ ಮಾಡುವ ಸಂಬಂಧ ಕೇಂದ್ರ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರ ಕೇವಲ ಶಿಫಾರಸು ಮಾಡಬಹುದು’ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ ‘ಸೆ.22ರಿಂದ ಅ.7ರವರೆಗೆ ನಡೆವ ಜಾತಿ ಸಮೀಕ್ಷೆ ವೇಳೆ ಕುರುಬ ಅಂತಲೇ ಜಾತಿ ಕಾಲಂನಲ್ಲಿ ಬರೆಯಿಸಿ’ ಎಂದ ತಮ್ಮ ಕುರುಬ ಸಮಾಜ ಬಾಂಧವರಿಗೆ ಕರೆ ನೀಡಿದ್ದಾರೆ.

ಕಲಬುರಗಿಯಲ್ಲಿ ಬುಧವಾರ ಕರ್ನಾಟಕ ರಾಜ್ಯ ಕುರುಬಗೊಂಡ ಸಂಘ ಮತ್ತು ಸಂಗೊಳ್ಳಿ ರಾಯಣ್ಣ ಯುವಕ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಯಣ್ಣ ಅವರ ಮೂರ್ತಿ ಅನಾವರಣಗೊಳಿಸಿದ ಸಿಎಂ, ನಗರ ಸಿಟಿ ಬಸ್ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣರ ಹೆಸರು ನಾಮಕರಣ ಮಾಡಿ ಮಾತನಾಡಿದರು.

‘ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಹಿಂದೆಯೇ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಇದನ್ನು ಕೇಂದ್ರ ಸರ್ಕಾರ ವಾಪಸ್ ಕಳುಹಿಸಿದೆ. ಹೀಗಾಗಿ ಮತ್ತೆ ಹೆಚ್ಚುವರಿ ಅಂಕಿ ಅಂಶಗಳು ಮತ್ತು ದಾಖಲೆಗಳ ಸಮೇತ ಕೇಂದ್ರಕ್ಕೆ ಮತ್ತೆ ಶಿಫಾರಸು ಕಳುಹಿಸಲಾಗುವುದು. ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಬೇಕು’ ಎಂದು ಸಿಎಂ ಹೇಳಿದರು.

ವಿರೋಧ ಬೇಡ:

ಕುರುಬ ಸಮುದಾಯ ಎಸ್ಟಿ ಸೇರ್ಪಡೆಗೆ ವಾಲ್ಮೀಕಿ ಸಮಾಜದ ವಿರೋಧಕ್ಕೆ ಪ್ರತಿಕ್ರಿಯಿಸಿದ ಅವರು, ‘ವಿರೋಧ ಮಾಡುವ ಅಗತ್ಯವಿಲ್ಲ. ಈ ಹಿಂದಿನ ಸರ್ಕಾರದ ಅವಧಿಯಲ್ಲಿಯೇ ಕೇಂದ್ರಕ್ಕೆ ಶಿಫಾರಸು ಹೋಗಿದೆ. ಕುರುಬ ಸಮುದಾಯ ಅರ್ಹತೆ ಹೊಂದಿದ್ದರೆ ಎಸ್ಟಿಗೆ ಸೇರ್ಪಡೆ ಆಗಲಿದೆ’ ಎಂದು ವಿವರಿಸಿದರು.

‘ರಾಜ್ಯದ ಎಲ್ಲಾ ಜಾತಿ ಸಮುದಾಯಗಳ ಸ್ಪಷ್ಟ ಸ್ಥಿತಿ ಅರಿಯಲು ಸಮೀಕ್ಷೆ ನಡೆಸಲಾಗುತ್ತಿದೆ. ಜಾತಿ ಕಾಲಂನಲ್ಲಿ ಕುರುಬ ಎಂದೇ ಬಸಿದರೆ ಮಾತ್ರ ಸಮಾಜದ ಸ್ಥಿತಿ ಗತಿಯ ಸ್ಪಷ್ಟ ಚಿತ್ರಣ ದೊರಕುತ್ತದೆ, ಸಾಮಾಜಿಕ‌ ಅನುಕೂಲಗಳು ಸಿಗುತ್ತವೆ’ ಎಂದರು.