ಸಾರಾಂಶ
ಸಮಾವೇಶದಲ್ಲಿ ಕೃಷಿ ಸಾಲ ನೀತಿ ಬದಲಾಗಲಿ, ಭೂಮಿ ಮೌಲ್ಯಕ್ಕೆ ಅನುಗುಣವಾಗಿ ಸಾಲ ನೀಡುವಂತಾಗಬೇಕು,
ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕ ರಾಜ್ಯ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಡಿ. 23 ರಂದು ವಿಶಿಷ್ಟ ರೀತಿಯಲ್ಲಿ ರೈತರ ಹಬ್ಬದ ವಿಶ್ವ ರೈತ ದಿನಾಚರಣೆ ಆಯೋಜಿಸಲು ರೈತ ಸಂಘಟನೆಗಳ ಒಕ್ಕೂಟ ತೀರ್ಮಾನಿಸಿದೆ.2024ರ ವಿಶ್ವ ರೈತ ದಿನಾಚರಣೆ, ರೈತ ಹಬ್ಬ, ರಾಜ್ಯ ಮಟ್ಟದ ರೈತ ಸಮಾವೇಶ ಆಯೋಜಿಸಲಾಗುತ್ತಿದೆ. ಎಂದು ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.ಈ ಸಮಾವೇಶದಲ್ಲಿ ಕೃಷಿ ಸಾಲ ನೀತಿ ಬದಲಾಗಲಿ, ಭೂಮಿ ಮೌಲ್ಯಕ್ಕೆ ಅನುಗುಣವಾಗಿ ಸಾಲ ನೀಡುವಂತಾಗಬೇಕು, ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್, ಸರ್ಪ್ರೈಸಿ ಕಾಯ್ದೆ ರದ್ದಾಗಬೇಕು, 2 ಕೃಷಿ ಪಂಪ್ ಸೆಟ್ ಗಳಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ನೀಡಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಬೇಕು ಎಂದರು.ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಆಗಬೇಕು, ಕೃಷಿ ಉಪಕರಣ ರಸಗೊಬ್ಬರ ಕೀಟನಾಶಕ. ಮೊಸರು ಮಜ್ಜಿಗೆ ಇತರೆ ಉತ್ಪನ್ನಗಳ ಮೇಲೆ ವಿಧಿಸಿರುವ ಜಿ.ಎಸ್.ಟಿ ಸುಂಕ ರದ್ದಾಗಬೇಕು. ಮಹಿಳಾ ಸಂಘಗಳಿಗೆ ಸಾಲ ನೀಡುವ ಮೈಕ್ರೋ ಫೈನಾನ್ಸ್ ಕಿರುಕುಳ ನಿಲ್ಲಿಸಲು ಕಠಿಣ ಕಾನೂನು ಜಾರಿಯಾಗಬೇಕು, ಕೃಷಿ ಮೇಳಗಳ ಬದಲು ರೈತರ ನೆನಪಿನ ಹಬ್ಬದ ದಿನಾಚರಣೆಗಳಾಗಲಿ ಎಂದು ಅವರು ಹೇಳಿದರು.ಕೃಷಿ ಭೂಮಿ, ನೀರು, ಅರಣ್ಯ, ಪರಿಸರ ರಕ್ಷಿಸಲು ಜಲಾಶಯಗಳ, ಕೆರೆ ಕಟ್ಟೆಗಳ ಹೂಳು ತೆಗೆಸಲು ಕಾರ್ಯ ಯೋಜನೆ ಜಾರಿಯಾಗಲಿ. ಪರಿಸರ ಸಂರಕ್ಷಿಸಲು ಸಾವಿರಾರು ಮರ ಬೆಳೆಸಿದ ಕಂಪನಿ, ಸಂಸ್ಥೆಗಳಿಗೆ ಶೇ. 25 ತೆರಿಗೆ ವಿನಾಯಿತಿ ನೀಡುವಂತಾಗಬೇಕು, ಕಬ್ಬಿನ ಎಫ್.ಆರ್.ಪಿ. ದರ ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡುವ ಮಾನದಂಡ ಜಾರಿಯಾಗಲಿ ಎಂದು ಅವರು ತಿಳಿಸಿದರು.ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಕಡಿಮೆ ತೋರಿಸುವ ಸಕ್ಕರೆ ಕಾರ್ಖಾನೆಗಳ ಮೋಸ ತಪ್ಪಿಸಲು ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ಬರಲಿ, ಫಸಲ್ ಭೀಮಾ ಬೆಳೆ ವಿಮಾ ಪದ್ಧತಿ ನೀತಿ ಬದಲಾಗಲಿ ಪ್ರತಿ ರೈತನ ಹೊಲದ ಬೆಳೆ ವಿಮೆ ನಷ್ಟ ಪರಿಹಾರ ಸಿಗುವಂತಾಗಲಿ, ಎಪಿಎಂಸಿ ಗಳಲ್ಲಿ ದಲ್ಲಾಳಿಗಳು ರೈತರಿಂದ ಶೇ. 10ರಷ್ಟು ಕಮಿಷನ್ ವಸೂಲಿ ನಿಲ್ಲಿಸಲು ಕಠಿಣ ಕಾನೂನು ಕ್ರಮ ಕೈಗೊಳ್ಳಲಿ ಎಂದು ಅವರು ಹೇಳಿದರು.ಎನ್.ಡಿ.ಆರ್.ಎಫ್ಮಾನದಂಡ ಬದಲಾಗಲಿ, ಅತಿವೃಷ್ಟಿ ಮಳೆಹಾನಿ, ಬರ ಪರಿಹಾರ, ಪ್ರಕೃತಿ ವಿಕೋಪ ಪರಿಹಾರ ಮಾನದಂಡ ಬದಲಾಯಿಸಿ ಸಂಪೂರ್ಣ ನಷ್ಟ ಪರಿಹಾರ ನೀಡಲಿ, ರೈತರ ಮಗನ ಮದುವೆ ಆಗುವ ಹೆಣ್ಣು ಮಕ್ಕಳಿಗೆ ಸರ್ಕಾರಿ ಕೆಲಸದಲ್ಲಿ ಶೇ. 20ರಷ್ಟು ಮೀಸಲಾತಿ ನೀಡುವ ನೀತಿ ಜಾರಿಗೆ ಬರಲಿ, ತೆಲಂಗಾಣ ಮಾದರಿಯಲ್ಲಿ 60 ವರ್ಷ ತುಂಬಿದ ರೈತರಿಗೆ 10,000 (ಹತ್ತು ಸಾವಿರ ) ಪಿಂಚಣಿ ನೀಡುವ ಯೋಜನೆ ಜಾರಿಗೆ ತರಲಿ ಎಂದು ಅವರು ಒತ್ತಾಯಿಸಿದರು.ರಾಜ್ಯದಲ್ಲಿ 10 ಲಕ್ಷ ರೈತರು ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದಾರೆ. ಕೂಡಲೇ ಬೇಸರತ್ತಾಗಿ ಸಾಗುವಳಿ ಪತ್ರ ನೀಡಬೇಕು, ಯುವಕರ ಭವಿಷ್ಯ ಹಾಳು ಮಾಡುತ್ತಿರುವ ಆನ್ಲೈನ್ ಗೇಮ್, ಜೂಜು ರಾಜ್ಯದಲ್ಲಿ ನಿಷೇಧಿಸಬೇಕು ಎಂಬ ಬೇಡಿಕೆಗಳನ್ನು ರೈತರ ಹಬ್ಬದ ದಿನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನಸೆಳೆಯಲು ನಿರ್ಣಯ ಕೈಗೊಳ್ಳಲಾಗುತ್ತಿದೆ ರೈತರು ಸ್ವಾಭಿಮಾನಿಗಳಾಗಿ ಸ್ವಯಂ ಪ್ರೇರಿತರಾಗಿ ರೈತರ ಹಬ್ಬ ಆಚರಿಸಲು ಮೈಸೂರಿಗೆ ಬನ್ನಿ ರೈತರ ಕೂಗು ಸರ್ಕಾರಕ್ಕೆ ಮುಟ್ಟಿಸೋಣ ಎಂದು ಅವರು ಕರೆ ನೀಡಿದರು.ಈ ವೇಳೆ ಎಂ.ಬಿ. ಚೇತನ್, ನಿವೃತ್ತ ಪ್ರಾಂಶುಪಾಲ ಮಹದೇವಯ್ಯ. ಶುಂಠಿ ಬೆಳೆಗಾರರ ಸಂಘದ ಅಧ್ಯಕ್ಷ ಮಹಿ ಮಹೇಶ್, ವಸಂತಕುಮಾರ್, ಅತ್ತಳ್ಳಿ ದೇವರಾಜ್, ನಾಗಾರ್ಜುನ, ಕಿರಗಸೂರ್ ಶಂಕರ, ಬರಡನಪುರ ನಾಗರಾಜ್, ನೀಲಕಂಠಪ್ಪ, ರೇವಣ್ಣ, ಮಹದೇವಸ್ವಾಮಿ, ಸಿದ್ದೇಶ್, ವೆಂಕಟೇಶ್, ವಿಜಯೇಂದ್ರ. ರಾಜೇಶ್ ಪರಶಿವಮೂರ್ತಿ, ಮಂಜುನಾಥ್, ಸುನಿಲ್ ಮೊದಲಾದವರು ಇದ್ದರು.