ಸಾರಾಂಶ
ಚೇರ್ಕಾಡಿ ಸೂರೆಬೆಟ್ಟು ಮನೆಯ ಪ್ರಾಂಗಣದಲ್ಲಿ ಕುರುಡುಂಜೆ ಜಲಜಮ್ಮ ಹೆಗ್ಡೆ ಅವರ ಶತಮಾನೋತ್ಸವ ಸಂಭ್ರಮದಿಂದ ನಡೆಯಿತು. ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಇಲ್ಲಿ ಚೇರ್ಕಾಡಿ ಸೂರೆಬೆಟ್ಟು ಮನೆಯ ಪ್ರಾಂಗಣದಲ್ಲಿ ಕುರುಡುಂಜೆ ಜಲಜಮ್ಮ ಹೆಗ್ಡೆ ಅವರ ಶತಮಾನೋತ್ಸವ ಸಂಭ್ರಮದಿಂದ ನಡೆಯಿತು. ಸಂಭ್ರಮದ ಪ್ರಯುಕ್ತ ಖ್ಯಾತ ಭಜನಾ ತಂಡಗಳ ಮಹಾ ಸಮ್ಮಿಲನ ‘ಭಕ್ತ ಭಾವಧಾರೆ’, ಶ್ರೀ ಕೋದಂಡರಾಮ ಕೃಪಾಷೋಷಿತ ಹನುಮಗಿರಿ ಮೇಳದವರಿಂದ ‘ಗರುಡೋದ್ಭವ ಪುರುಷಮೃಗ’ ಯಕ್ಷಗಾನ ಹಾಗೂ ಕಲ್ಕುಡ, ಪಂಜುರ್ಲಿ, ವಡ್ತೆ, ಅಣ್ಣಪ್ಪ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನೆರವೇರಿತು. ಈ ಸಂದರ್ಭ 100 ಸಂವತ್ಸರಗಳನ್ನು ಪೂರೈಸಿದ ಕುರುಡುಂಜೆ ಜಲಜಮ್ಮ ಹೆಗ್ಡೆ ಅವರನ್ನು ಬಾರ್ಕೂರು ಬಂಟರ ಮಹಾ ಸಂಸ್ಥಾನದ ಡಾ. ವಿದ್ಯಾವಾಚಸ್ಪತಿ ವಿಶ್ವ ಸಂತೋಷ ಭಾರತಿ ಶ್ರೀಪಾದರು ಶಾಲು, ಪೇಟ, ಹಾರ, ಸನ್ಮಾನ ಪತ್ರ ಹಾಗೂ ಶತಮಾನದ ಮಾತೆ ಎಂಬ ಬಿರುದಿನೊಂದಿಗೆ ಗೌರವಿಸಿದರು.ಬಳಿಕ ಮಾತನಾಡಿದ ಗುರೂಜಿ ಅವರು, ಮರಿಮಕ್ಕಳನ್ನ ನೋಡಿದ ಜಲಜಮ್ಮನವರಿಗೆ ಶತಮಾನದ ಮಾತೆ ಬಿರುದು ಕೊಟ್ಟಿದ್ದೇವೆ. ಅವರನ್ನು ಅವರ ಮಕ್ಕಳು, ಮೊಮ್ಮಕ್ಕಳನ್ನು ನೋಡಿ ಹಿರಿಯರ ಸೇವೆಯ ಬಗ್ಗೆ ಎಲ್ಲರೂ ಕಲಿಯಬೇಕು ಎಂದರಲ್ಲದೆ ತಮ್ಮ ಸಂಸ್ಥಾನದಲ್ಲಿ 50 ಹಿರಿಜೀವಗಳು ಕೊನೆಗಾಲವನ್ನು ನೋವನ್ನು ಮರೆತು, ನಮ್ಮಂತಹ ಸಾಧುಸಂತರ ಜೊತೆಯಲ್ಲಿ ಕಳೆಯುವುದಕ್ಕೆ ಅವಕಾಶವಾಗುವಂತಹ ಆಶ್ರಮ ನಿರ್ಮಿಸುವ ಸಂಕಲ್ಪ ಮಾಡಿದ್ದೇವೆ ಎಂದರು.ನಿವೃತ್ತ ಡಿಜಿಪಿ ಕಮಲ್ ಪಂತ್, ಖ್ಯಾತ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಉದ್ಯಮಿ ಎಚ್.ಎಸ್.ಶೆಟ್ಟಿ, ಅಂಕೋಲದ ಪ್ರಖ್ಯಾತ ನ್ಯಾಯವಾದಿ ನಾಗರಾಜ್ ನಾಯಕ್, ಜಲಜಮ್ಮ ಹೆಗ್ಡೆ ಅವರ ಪುತ್ರ ಮಂಜುನಾಥ್ ಹೆಗ್ಡೆ, ಕಿಶೋರ್ ಹೆಗ್ಡೆ, ಪುತ್ರಿ ಸರಸ್ವತಿ ಹೆಗ್ಡೆ ಉಪಸ್ಥಿತರಿದ್ದರು. ರಘುರಾಮ್ ಅವರು ಕಾರ್ಯಕ್ರಮ ನಿರೂಪಿಸಿದರು.