ಕುರುಗೋಡು ಪುರಸಭೆ: ₹೩೬.೯೪ ಲಕ್ಷ ಉಳಿತಾಯ ಬಜೆಟ್

| Published : Apr 01 2025, 12:45 AM IST

ಸಾರಾಂಶ

ಇಲ್ಲಿನ ಪುರಸಭೆಯಲ್ಲಿ ಶನಿವಾರ ೨೦೨೫-೨೬ನೇ ಸಾಲಿನ ₹೩೬.೯೪ ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಯಿತು.

ಅನುದಾನ ಹಂಚಿಕೆಯಲ್ಲಿ ಶಾಸಕರ ತಾರತಮ್ಯ: ಕೆಲ ಸದಸ್ಯರ ಆರೋಪಕನ್ನಡಪ್ರಭ ವಾರ್ತೆ ಕುರುಗೋಡು

ಇಲ್ಲಿನ ಪುರಸಭೆಯಲ್ಲಿ ಶನಿವಾರ ೨೦೨೫-೨೬ನೇ ಸಾಲಿನ ₹೩೬.೯೪ ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಯಿತು.

ಎಲ್ಲ ಮೂಲಗಳಿಂದ ₹೨೩.೫೮ ಕೋಟಿ ಆದಾಯ ನಿರೀಕ್ಷಿಸಲಾಗಿದೆ. ₹೨೩.೨೧ ಕೋಟಿ ವೆಚ್ಚ ಮಾಡಲು ಉದ್ದೇಶಿಸಿದೆ.

ಆದಾಯ:ಸ್ವಯಂ ಘೋಷಿತ ಆಸ್ತಿ ತೆರಿಗೆಯಿಂದ ₹೧.೧೫ ಕೋಟಿ, ಖಾತಾ ಬದಲಾವಣೆ, ನಕಲು ಪ್ರತಿ ಶುಲ್ಕದಿಂದ ₹೨೪.೨೦ ಲಕ್ಷ, ನಳ ಸಂಪರ್ಕ ಉಳ್ಳವರಿಂದ ನೀರಿನ ಶುಲ್ಕ ₹೩೪.೧೦ ಲಕ್ಷ, ಟ್ರೇಡ್ ಪರವಾನಿಗೆ ಯಿಂದ ₹೬ ಲಕ್ಷ, ಕಟ್ಟಡ ಪರವಾನಿಗೆಯಿಂದ ₹೧೪.೫೨ ಲಕ್ಷ, ಅಭಿವೃದ್ಧಿ ಶುಲ್ಕಗಳಿಂದ ₹೫೦ ಲಕ್ಷ, ಎಸ್.ಎಫ್.ಸಿ. ಅನುದಾನ ದಿಂದ ₹೪೭ ಲಕ್ಷ, ವೇತನ ಅನುದಾನ ₹೨ ಕೋಟಿ, ವಿದ್ಯುತ್ ಅನುದಾನ ₹೫೯ ಲಕ್ಷ, ೧೫ನೇ ಹಣಕಾಸು ₹೨.೭೯ ಕೋಟಿ, ಎಸ್.ಎಫ್.ಸಿ. ವಿಶೇಷ ಅನುದಾನ ₹೨.೭೫, ಕೋಟಿ, ಸ್ವಚ್ಛ ಭಾರತ ಮಿಷನ್ ಯೋಜನೆ ₹೮೫ ಲಕ್ಷ, ಮಾರುಕಟ್ಟೆ ಮತ್ತು ಮಳಿಗೆ ಬಾಡಿಗೆ ₹೧೩.೨೦ ಲಕ್ಷ, ಜಾಹಿರಾತು ಶುಲ್ಕ ₹೨೨ ಸಾವಿರ, ಆಸ್ತಿ ತೆರಿಗೆ ಮೇಲೆ ವಸೂಲಿಯಲ್ಲಿ ಸೆಸ್ಸೆ ಮೊತ್ತ ₹೨೩.೭೩, ಲಕ್ಷ, ಸಿ.ಎಂ.ಎಸ್.ಎಂ.ಟಿ.ಡಿ.ಪಿ./ನಗರೋತ್ಥಾನ ₹೧೧ ಕೋಟಿ, ಪ್ರಕೃತಿ ವಿಕೋಪ ಪರಿಹಾರ ನಿಧಿ ₹೧೫ ಲಕ್ಷ, ಇತರೇ ಮೂಲಗಳಿಂದ ₹೧೭.೬೩ ಲಕ್ಷ ಸೇರಿ ಒಟ್ಟಾರೆ ₹೨೩,೫೮,೬೦ ಕೋಟಿ ಆದಾಯ ನಿರೀಕ್ಷಿಸಲಾಗಿದೆ.

ವೆಚ್ಚ:

ಮಿನಿ ಬಸ್ ನಿಲ್ದಾಣ, ತರಕರಿ ಮಾರುಕಟ್ಟೆ ನಿರ್ಮಣ, ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ, ವಾಹನ ಖರೀದಿ, ಅಂಗವಿಕಲರ ಯೋಜನೆ, ನಗರೋತ್ಥಾನ ಯೋಜನೆ ಅನುಷ್ಠಾನ, ಕಚೇರಿ ಉಪಕರಣ ಮತ್ತು ಪೀಠೋಪಕರಣ, ದೊಡ್ಡಬಸವೇಶ್ವರ ಜಾತ್ರೆ, ೧೫ನೇ ಹಣಕಾಸು ಯೋಜನೆ ಅನುದಾನ ಬಳಕೆ ಮತ್ತು ಇತರೇ ವೆಚ್ಚಸೇರಿ ಒಟ್ಟು ₹೨೩,೨೧,೭೦ ಕೋಟಿ ವೆಚ್ಚಮಾಡಲು ವಿವಿಧ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ.

ನೀರಸ ಚರ್ಚೆ:

ಬಜೆಟ್ ಮಂಡನೆಗಾಗಿ ಕರೆದಿದ್ದ ವಿಶೇಷ ಸಭೆಯಲ್ಲಿ ಯಾವುದೇ ಪರಿಣಾಮಕಾರಿ ಚರ್ಚೆ ನಡೆಯಲಿಲ್ಲ. ಬಹುತೇಕ ಸದಸ್ಯರು ಅಧಿಕಾರಿಗಳು ನೀಡಿದ ಬಜೆಟ್ ಪ್ರತಿಗಳನ್ನು ನೋಡುತ್ತಾ ಕುಳಿತರು.

ಪ್ರಮುಖವಾಗಿ ಚರ್ಚಿಸಬೇಕಾದ ವಿಷಯ ಬಿಟ್ಟು ಅಭಿವೃದ್ಧಿ ಅನುದಾನ ಹಂಚಿಕೆಯಲ್ಲಿ ಕಾಂಗ್ರೆಸ್, ಬಿಜೆಪಿ ಸದಸ್ಯರು ಎನ್ನುವ ತಾರತಮ್ಯವನ್ನು ಶಾಸಕ ಗಣೇಶ್ ಮತ್ತು ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ೧೯ನೇ ವಾರ್ಡ್ ಸದಸ್ಯೆ ಜಯಶ್ರೀ ಮತ್ತು ೧೫ನೇ ವಾರ್ಡ್ ಸದಸ್ಯ ವಿ.ವೀರೇಶ್ ಆರೋಪಿಸಿದರು.

ಬಿಡಾಡಿ ದನಗಳ ಹಾವಳಿ ಜಾಸ್ತಿಯಾಗಿದೆ. ರಸ್ತೆಯ ಬದಿಯಲ್ಲಿಯೇ ಮುಚ್ಚುಮರೆ ಇಲ್ಲದೆ ಮಾಂಸ ಮಾರಾಟ ಮಾಡುತ್ತಿರುವುದರಿಂದ ಬೀದಿ ನಾಯಿಗಳ ಆವಳಿ ಹೆಚ್ಚಾಗಿದೆ. ಕೋತಿಗಳ ಉಪಟಳವೂ ಹೆಚ್ಚಾಗಿದೆ. ಇದನ್ನು ಕೂಡಲೇ ನಿಯಂತ್ರಿಸುವಂತೆ ಕೆಲವು ಸದಸ್ಯರು ಒತ್ತಾಯಿಸಿದರು.

ಮಟನ್ ಮಾರುಕಟ್ಟೆ ಸ್ಥಳಾಂತರ ಕುರಿತು ಚರ್ಚೆ ಜರುಗಿತು. ಪುರಸಭೆಗೆ ಸೇರಿದ ಹಳೇ ಕಟ್ಟಡದಲ್ಲಿ ಹಲವಾರು ವರ್ಷಗಳಿಂದ ಬಾಡಿಗೆಯಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್‌ನ್ನು ತೆರುವುಗೊಳಿಸಲಾಗುವುದು. ಅದೇ ಸ್ಥಳದಲ್ಲಿ ಹೊಸಕಟ್ಟಡ ನಿರ್ಮಾಣ ಮಾಡುವ ಮತ್ತು ಸಾರ್ವಜನಿಕ ರುದ್ರಭೂಮಿ ಅಭಿವೃದ್ಧಿ, ಹಸರೀಕರಣ ಕೈಗೊಳ್ಳುವ ಕುರಿತು ಚರ್ಚೆ ನಡೆಯಿತು. ದಿನದ ಮಾರುಕಟ್ಟೆ ಮತ್ತು ಮಿನಿ ಬಸ್ ನಿಲ್ದಾಣ ಶೀಘ್ರ ನಿರ್ಮಾಣಕ್ಕೆ ಮುಂದಾಗುವಂತೆ ಕೆಲವು ಸದಸ್ಯರು ಒತ್ತಾಯಿಸಿದರು.

ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಮುಖ್ಯಾಧಿಕಾರಿ ಹರ್ಷವರ್ಧನ ರೆಡ್ಡಿ, ಲೆಕ್ಕಾಧಿಕಾರಿ ರಾಜಶೇಖರ್ ಮತ್ತು ಸದಸ್ಯರು, ಸಿಬ್ಬಂದಿ ಇದ್ದರು.