ಸಾರಾಂಶ
ಬಿ.ಎಚ್.ಎಂ. ಅಮರನಾಥಶಾಸ್ತ್ರಿ
ಕನ್ನಡಪ್ರಭ ವಾರ್ತೆ ಕಂಪ್ಲಿಕುರುಗೋಡು ಪುರಸಭೆಗೆ ಸಂಬಂಧಿಸಿದ ಫಾರಂ ನಂ. 3 ಹಾಗೂ ಮ್ಯುಟೇಶನ್ ಕಾರ್ಯಗಳು ಸದ್ದಿಲ್ಲದೇ ಕಂಪ್ಲಿ ಪಟ್ಟಣದ ಖಾಸಗಿ ಆನ್‌ಲೈನ್ ಸೆಂಟರ್‌ವೊಂದರಲ್ಲಿ ಜರುಗುತ್ತಿದ್ದು, ಸರ್ಕಾರಿ ಕಚೇರಿಯ ದಾಖಲೆಗಳು ಆನ್‌ಲೈನ್ ಸೆಂಟರ್‌ಗೆ ಹೋಗಿದ್ದೇಗೆ?, ಪುರಸಭೆಯಲ್ಲಿ ಗೋಲ್‌ಮಾಲ್ ನಡೆಯುತ್ತಿದೆಯಾ ಎಂಬ ಪ್ರಶ್ನೆಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.
ಸರ್ಕಾರಿ ಕಚೇರಿಗಳ ಯಾವುದೇ ಕೆಲಸ, ಕಾರ್ಯಗಳಗಲಿ ಸರ್ಕಾರಿ ಕಚೇರಿಗಳಲ್ಲಿಯೇ ನಡೆಯಬೇಕು. ಅಲ್ಲದೇ ಸಾರ್ವಜನಿಕರಿಗೆ ಸಂಬಂಧಿಸಿದ ಯಾವುದೇ ದಾಖಲೆಗಳಾಗಲಿ ಹೊರಗಡೆ ಹೋಗಬಾರದು ಎನ್ನುವ ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳಿದ್ದರೂ ಕುರುಗೋಡು ಪುರಸಭೆಗೆ ಸಂಬಂಧಿಸಿದ ಫಾರಂ ನಂ. 3 ಹಾಗೂ ಮುಟೇಷನ್ ಕಾರ್ಯಗಳಿಗೆ ಬೇಕಾಗುವ ದಾಖಲೆಗಳು ಕುರುಗೋಡಿನಿಂದ 25 ಕಿಮೀ ದೂರದ ಕಂಪ್ಲಿಯ ಖಾಸಗಿ ಆನ್‌ಲೈನ್ ಸೆಂಟರ್‌ವೊಂದರಲ್ಲಿ ದೊರೆಯುತ್ತಿವೆ. ಹಣದ ಆಸೆಗಾಗಿ ಅಧಿಕಾರಿಗಳು ಅಕ್ರಮವಾಗಿ ಫಾರಂ ನಂ. 3 ಹಾಗೂ ಮುಟೇಷನ್‌ಗಳನ್ನು ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಮುಖ್ಯಾಧಿಕಾರಿಗಳಿಂದ ಅಕ್ರಮ ಆರೋಪ:
ಪುರಸಭೆಗೆ ಸಂಬಂಧಿಸಿದ ಯಾವುದೇ ಕಾರ್ಯಗಳು ಪೂರ್ಣಗೊಳ್ಳಬೇಕಾದಲ್ಲಿ ಅದಕ್ಕೆ ಆಯಾ ಕಚೇರಿಗೆ ಸಂಬಂಧಿಸಿದ ಮುಖ್ಯಾಧಿಕಾರಿಗಳ ಲಾಗಿನ್(ಥಂಬ್) ನೀಡಬೇಕಾಗುತ್ತದೆ. ಅವರ ಒಪ್ಪಿಗೆ ಇಲ್ಲದೆ ಯಾವ ಕಾರ್ಯಗಳು ಜರುಗಲು ಸಾಧ್ಯವಿಲ್ಲ. ಅಲ್ಲದೇ ಲಂಚವನ್ನು ಕೊಟ್ಟೇ ಫಾರಂ ನಂ. 3 ಮಾಡಿಸಿಕೊಳ್ಳುವ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಕಂಪ್ಯೂಟರ್ ಆಪರೇಟರ್ ಇಲ್ಲವೆಂದು ನೆಪ:
ಕುರುಗೋಡು ಪುರಸಭೆಗೆ ಸಂಬಂಧಿಸಿದ ಕೆಲಸಗಳು ಕಂಪ್ಲಿಯ ಆನ್‌ಲೈನ್ ಸೆಂಟರ್‌ವೊಂದರಲ್ಲಿ ಜರುಗುತ್ತಿರುವುದು ಯಾಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರೆ, ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಇಲ್ಲದ ಕಾರಣ ಅಲ್ಲಿಗೆ ಕಳಿಸಲಾಗುತ್ತಿದೆ ಎಂದು ನೆಪ ಹೇಳುತ್ತಿದ್ದಾರೆ. ಅದೇ ನಿಜವಾಗಿದ್ದರೆ ಕುರುಗೋಡಿನಲ್ಲಿನ ಯಾವುದಾದರೂ ಆನ್‌ಲೈನ್ ಸೆಂಟರ್‌ಗೆ ಈ ಕೆಲಸವನ್ನು ವಹಿಸಬಹುದಿತ್ತಲ್ಲ. ಇಲ್ಲಿಂದ ಕಂಪ್ಲಿಗೆ ದಾಖಲೆಗಳು ಹೋಗುತ್ತಿವೆ ಎಂದರೆ ಕಳ್ಳ ವ್ಯವಹಾರಗಳು ನಡೆಯುತ್ತಿವೆ ಎಂಬ ಗುಮಾನಿ ಸಾರ್ವಜನಿಕರಲ್ಲಿ ಕಾಡುತ್ತಿದೆ.ಈ ಕುರಿತು ಅಪರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ತನಿಖೆ ನಡೆಸಿ, ಪುರಸಭೆಯಲ್ಲಿ ನಡೆಯುತ್ತಿರುವ ಗೋಲ್‌ಮಾಲ್‌ಗೆ ಕಡಿವಾಣ ಹಾಕಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಂತೆ ಕುರುಗೋಡು ಪುರಸಭೆ ಸದಸ್ಯ ಟಿ. ಶೇಖಣ್ಣ ಒತ್ತಾಯಿಸಿದ್ದಾರೆ.ಅಕ್ರಮ ಆಗಿಲ್ಲ: ಕುರುಗೋಡು ಪುರಸಭೆ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಇಲ್ಲ. ಹೀಗಾಗಿ ಅರ್ಜಿ ಸಲ್ಲಿಸಿದ ಸಾರ್ವಜನಿಕರ ದಾಖಲಾತಿಗಳನ್ನು ಖಾಸಗಿ ಆನ್‌ಲೈನ್ ಸೆಂಟರ್ ಮೂಲಕ ನಮ್ಮ ಪುರಸಭೆಯ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿಸಲಾಗಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ಜರುಗಿಲ್ಲ ಕುರುಗೋಡು ಪುರಸಭೆ ಮುಖ್ಯಾಧಿಕಾರಿ ಎಂದರು ವಿಜಯಲಕ್ಷ್ಮಿ.
ತನಿಖೆ ನಡೆಸಿ:ಕುರುಗೋಡು ಪುರಸಭೆಗೆ ಸಂಬಂಧಿಸಿದ ಫಾರಂ ನಂ. 3 ಹಾಗೂ ಮುಟೇಷನ್ ಕೆಲಸಗಳು ಕಂಪ್ಲಿಯ ಆನ್‌ಲೈನ್ ಸೆಂಟರ್‌ನಲ್ಲಿ ಜರುಗುತ್ತಿವೆ. ಈ ಕುರಿತು ಹಿರಿಯ ಅಧಿಕಾರಿಗಳು ಎಚ್ಚೆತ್ತು ಸೂಕ್ತ ತನಿಖೆ ನಡೆಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸುವ ಜತೆಗೆ ಉತ್ತಮ ಸೇವೆ ನೀಡಬೇಕು ಎಂದು ಕುರುಗೋಡು ಪುರಸಭೆ ಸದಸ್ಯ ಟಿ. ಶೇಖಣ್ಣ ಆಗ್ರಹಿಸಿದರು.