ಸಾರಾಂಶ
ಎಮ್ಮೆಮಾಡು ಗ್ರಾಮಕ್ಕೆ ಸಂಪರ್ಕಿಸುವ ಕೂರುಳಿ-ಎಮ್ಮೆಮಾಡು ರಸ್ತೆ ಎಮ್ಮೆಮಾಡು ದರ್ಗಾದ ಬಳಿ ಹೊಂಡಗಳಿಂದ ನಿತ್ಯ ಸಂಚಾರಿಗಳಿಗೆ ಸಮಸ್ಯೆ ತಂದೊಡ್ಡಿದೆ. ರಸ್ತೆ ಹೊಂಡಗಳಾಗಿರುವುದಲ್ಲದೇ ಕೆಸರು ತುಂಬಿಕೊಂಡು ವಾಹನ ಚಾಲನೆಗೆ ಹರಸಾಹಸ ಪಡಬೇಕಿದೆ. ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತದೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಎಮ್ಮೆಮಾಡು ಗ್ರಾಮಕ್ಕೆ ಸಂಪರ್ಕಿಸುವ ಕೂರುಳಿ-ಎಮ್ಮೆಮಾಡು ರಸ್ತೆ ಎಮ್ಮೆಮಾಡು ದರ್ಗಾದ ಬಳಿ ಹೊಂಡಗಳಿಂದ ನಿತ್ಯ ಸಂಚಾರಿಗಳಿಗೆ ಸಮಸ್ಯೆ ತಂದೊಡ್ಡಿದೆ.ರಸ್ತೆ ಹೊಂಡಗಳಾಗಿರುವುದಲ್ಲದೇ ಕೆಸರು ತುಂಬಿಕೊಂಡು ವಾಹನ ಚಾಲನೆಗೆ ಹರಸಾಹಸ ಪಡಬೇಕಿದೆ. ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತದೆ. ಗದ್ದೆಗೆ ಸಮಾನಾಂತರವಾಗಿ ರಸ್ತೆಯೂ ಇರುವುದರಿಂದ ರಸ್ತೆಯುದ್ದಕ್ಕೂ ನೀರು ಹರಿದು ಹೊಂಡಗಳ ರಸ್ತೆಯಲ್ಲಿ ಚಾಲಕರು ಚಾಲನೆ ಮಾಡಬೇಕಿದೆ.ದ್ವಿಚಕ್ರ ವಾಹನಗಳಂತೂ ಇಲ್ಲಿ ಎದ್ದುಬಿದ್ದು ಸಾಗುವಂತಾಗಿದೆ. ರಸ್ತೆಯ ಎರಡೂ ಬದಿ ಚರಂಡಿಗಳಿಲ್ಲದೇ ಸಮಸ್ಯೆ ಮತ್ತಷ್ಟೂ ಬಿಗಡಾಯಿಸಿದೆ. ತುರ್ತಾಗಿ ಸುಮಾರು ಅರ್ಧ
ಕಿ.ಮೀ ದೂರದ ರಸ್ತೆ ದುರಸ್ತಿ ಪಡಿಸುವಂತೆ ಸ್ಥಳೀಯ ನಿವಾಸಿ ಅಶ್ರಫ್ ಆಗ್ರಹಿಸಿದ್ದಾರೆ.ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಹಲವು ಬಸ್‌ಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಈ ರಸ್ತೆಯಲ್ಲಿ ಸಾಗುವ ಪಾದಚಾರಿಗಳೂ ಪರದಾಡುವಂತಾಗಿದೆ.
ಖಾಸಗಿ ಶಾಲಾ ಬಸ್ ವಾಹನದ ಚಾಲಕ ಮೊಯಿದು ಪ್ರತಿಕ್ರಿಯಿಸಿ, ಎದುರಿನಿಂದ ಬರುವ ವಾಹನಗಳಿಗೆ ಸ್ಥಳಾವಕಾಶ ಕೊಡಲು ಆಗುತ್ತಿಲ್ಲ. ರಸ್ತೆ ಹೊಂಡ ತೀವ್ರ ಸಮಸ್ಯೆ ತಂದಿದೆ.ಕೂಡಲೇ ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಕೊಡಬೇಕು ಎಂದು ಒತ್ತಾಯಿಸಿದರು.