ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕ ಪ್ರತಿಭಟನೆ

| Published : Feb 17 2024, 01:17 AM IST

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರದ ಬಿಜೆಪಿ ಸರ್ಕಾರ ರೈತ ದಮನಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದಿಂದ ಪ್ರತಿಭಟನೆ ನಡೆಯಿತು. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೆಲಕಾಲ‌ ರಸ್ತೆ ತಡೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರಕೇಂದ್ರದ ಬಿಜೆಪಿ ಸರ್ಕಾರ ರೈತ ದಮನಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದಿಂದ ಪ್ರತಿಭಟನೆ ನಡೆಯಿತು.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೆಲಕಾಲ‌ ರಸ್ತೆ ತಡೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲಿಂದ ತಹಸೀಲ್ದಾರ್ ಕಚೇರಿ ವರೆಗೆ ಮೆರವಣಿಗೆ ಸಾಗಿ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಲಾಯಿತು.

ಈ ಸಂದರ್ಭ ಮಾತನಾಡಿದ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಮತ ನೀಡುವುದನ್ನು ನಿಲ್ಲಿಸಬೇಕಿದೆ. ಕೇವಲ ಸುಳ್ಳು ಭರವಸೆಗಳ ಮೂಲಕ ದೇಶದ ಜನರನ್ನು ಮರುಳು ಮಾಡುವ ನರೇಂದ್ರ ಮೋದಿಯ ಅಭಿವೃದ್ಧಿ ಶೂನ್ಯ. ನಾನಾ ರೂಪದ ತೆರಿಗೆಗಳನ್ನು ಅಪಾರ ಪ್ರಮಾಣದಲ್ಲಿ ಸಂಗ್ರಹಿಸಿದರೂ‌ ಕೂಡ ಅದರಿಂದ ದೇಶಕ್ಕೆ ಯಾವುದೇ ಅನುಕೂಲ‌ ಒದಗಿಸುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ ಎಂದರು.

ಅಂಬಾನಿ, ಅದಾನಿ ಪರವಾದ ಆಡಳಿತ, ವಿವಿಧ ಕ್ಷೇತ್ರಗಳ ಖಾಸಗೀಕರಣ ಮತ್ತಿತರ ಚಟುವಟಿಕೆಗಳಿಂದ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ ಹೊರತು ಯಾವುದೇ ರೀತಿಯ ಅಭಿವೃದ್ಧಿ ಹೊಂದಿಲ್ಲ. ರೈತರು ತಮ್ಮ ಬೇಡಿಕೆಗಳಿಗೆ ಆಗ್ರಹಿಸಿ ನಡೆಸಿದ ಐತಿಹಾಸಿಕ ಹೋರಾಟವನ್ನು ಸುಳ್ಳು ಭರವಸೆ ಮೂಲಕ ಹತ್ತಿಕ್ಕಿ‌ ಇಂದಿಗೂ ಭರವಸೆಗಳನ್ನು ಈಡೇರಿಸದೆ, ಅದಕ್ಕಾಗಿ ಧ್ವನಿ ಎತ್ತಿದ ರೈತರ ಹೋರಾಟ ಹತ್ತಿಕ್ಕುವ ವ್ಯವಸ್ಥೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದ್ದರಿಂದ ಮತದಾರರು ಈ ಬಗ್ಗೆ ಚಿಂತಿಸಿ ಮೋದಿಯ ಯುಗಾಂತ್ಯಕ್ಕೆ‌ ನಾಂದಿ ಹಾಡಬೇಕಿದೆ ಎಂದರು.

ಪ್ರತಿಭಟನೆಯಲ್ಲಿ ಕಿಸಾನ್ ಘಟಕದ ಅಧ್ಯಕ್ಷ ವಿ.ಜೆ.ನವೀನ್, ಕೆಪಿಸಿಸಿ ಸದಸ್ಯರಾದ ಮಂಜುನಾಥ್ ಗುಂಡುರಾವ್, ನಟೇಶ್ ಗೌಡ, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪ್ರಮುಖರಾದ ಜೋಸೆಫ್ ವಿಕ್ಟರ್ ಸೋನ್ಸ್, ಬಿ.ಡಿ.ಅಣ್ಣಯ್ಯ, ಕೃಷ್ಣೇಗೌಡ, ಚಂದ್ರಶೇಖರ್, ಮುಸ್ತಾಫ, ಪ್ರಕಾಶ್, ಫಿಲೋಮಿನಾ, ಅರುಣ್ ರಾವ್, ಹರೀಶ್, ಮತ್ತಿತರರು ಇದ್ದರು.