ನಿಗದಿತ ಅವಧಿಯಲ್ಲಿ ಕುಶಾಲನಗರ ಬಸ್‌ ಡಿಪೋ ಕಾಮಗಾರಿ ಪೂರ್ಣ: ರಾಮಲಿಂಗಾ ರೆಡ್ಡಿ

| Published : Sep 12 2024, 02:01 AM IST

ಸಾರಾಂಶ

ನಿಗದಿತ ಅವಧಿ ಒಳಗೆ ಕುಶಾಲನಗರ ಬಸ್ ಡಿಪೋ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ. ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಬಸವನಹಳ್ಳಿ ಬಳಿ‌ ನಿರ್ಮಾಣ ಹಂತದಲ್ಲಿರುವ ಸಾರಿಗೆ ಬಸ್ ಡಿಪೋ‌ ಕಾಮಗಾರಿ ವೀಕ್ಷಿಸಿದ ಸಚಿವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ನಿಗದಿತ ಅವಧಿ ಒಳಗೆ ಕುಶಾಲನಗರ ಬಸ್ ಡಿಪೋ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು

ರಾಜ್ಯ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.

ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಬಸವನಹಳ್ಳಿ ಬಳಿ‌ ನಿರ್ಮಾಣ ಹಂತದಲ್ಲಿರುವ ಸಾರಿಗೆ ಬಸ್ ಡಿಪೋ‌ ಕಾಮಗಾರಿ ವೀಕ್ಷಿಸಿದ ಸಚಿವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಾರಿಗೆ ಸಂಸ್ಥೆ ಮೂಲಕ ರಾಜ್ಯದ ಜನತೆಗೆ ಉತ್ತಮ ಸೇವೆ ಒದಗಿಸುವುದು‌ ನಮ್ಮ ಮುಖ್ಯ ಗುರಿ, ಗ್ಯಾರೆಂಟಿ ಯೋಜನೆಗಳು ಮುಂದಿನ 10 ವರ್ಷಗಳು ಕೂಡ ನಿರಾತಂಕವಾಗಿ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಗುಂಡೂರಾಯರ ಅವಧಿಯಲ್ಲಿ ಕುಶಾಲನಗರದಲ್ಲಿ ಸಾರಿಗೆ ನಿಲ್ದಾಣ ಸ್ಥಾಪಿಸಲಾಗಿತ್ತು. ನಂತರದ ದಿನಗಳಲ್ಲಿ ಡಿಪೋ ಸ್ಥಾಪನೆಗೆ ಪ್ರಮುಖ‌ ಬೇಡಿಕೆ ವ್ಯಕ್ತಗೊಂಡಿತ್ತು. ಈ ಹಿನ್ನಲೆಯಲ್ಲಿ ಬಸವನಹಳ್ಳಿಯಲ್ಲಿ 4 ಎಕರೆ ಪ್ರದೇಶದಲ್ಲಿ 8 ಕೋಟಿ‌ ರು. ವೆಚ್ಚದಲ್ಲಿ ಡಿಪೋ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮುಂದಿನ ವರ್ಷದ ಮಾರ್ಚ್‌ನಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದರು.

ಹೆಚ್ಚುವರಿ ಬಸ್‌ ಸೇವೆ:

ಜಿಲ್ಲೆಯ ‌ಜನರ ಬೇಡಿಕೆಯಂತೆ ಶಾಸಕ ಡಾ.ಮಂತರ್ ಗೌಡ ಹೆಚ್ಚುವರಿ ಬಸ್ ಗಳಿಗೆ ಸಲ್ಲಿಸಿದ ಕೋರಿಕೆ ಮೇರೆಗೆ ಕೆಲವು ಬಸ್ ಗಳನ್ನು ಒದಗಿಸಲಾಗಿದ್ದು ಮುಂದಿನ ದಿನಗಳಲ್ಲಿ ಕುಶಾಲನಗರ ಮೂಲಕ ಮತ್ತಷ್ಟು ಬಸ್ ಒದಗಿಸಲು ಕ್ರಮವಹಿಸಲಾಗುವುದು ಎಂದರು.

ಕುಶಾಲನಗರ ಪಟ್ಟಣ ಶೈಕ್ಷಣಿಕವಾಗಿ, ಪ್ರವಾಸೋದ್ಯಮ ಹಾಗೂ ಔದ್ಯೋಗಿಕವಾಗಿ ವಿಸ್ತಾರವಾಗಿ ಬೆಳೆದಿದೆ. ಈ‌ ಹಿನ್ನಲೆಯಲ್ಲಿ ಕುಶಾಲನಗರ ಸಾರಿಗೆ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಬೇಕು. ನೆಲ ಅಂತಸ್ತು ಪಾರ್ಕಿಂಗ್ ಸೌಲಭ್ಯ ಕಲ್ಪಿಸಿ ಉನ್ನತೀಕರಣಗೊಳಿಸಬೇಕಿದೆ, ಸಾರಿಗೆ ಬಸ್ ವರ್ಕ್ ಶಾಪ್, ಕುಶಾಲನಗರ ಕೇಂದ್ರವಾಗಿಸಿ ವಿಭಾಗೀಯ ಕಾರ್ಯಗಾರ ಸ್ಥಾಪಿಸಬೇಕಿದೆ ಎಂದು ಆಗ್ರಹಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಸಚಿವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕೆಪಿಸಿಸಿ ಸದಸ್ಯರಾದ ಮಂಜುನಾಥ್ ಗುಂಡುರಾವ್, ನಟೇಶ್ ಗೌಡ, ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಕಾಂಗ್ರೆಸ್ ಪ್ರಮುಖರಾದ ಲೋಕೇಶ್, ಟಿ.ಪಿ.ಹಮೀದ್, ಕಿರಣ್, ಕೃಷ್ಣೇಗೌಡ, ಸುನಿತಾ, ಅರುಣ್ ರಾವ್, ಬಿ.ಡಿ.ಅಣ್ಣಯ್ಯ ಮತ್ತಿತರರು ಇದ್ದರು.