ಸಾರಾಂಶ
ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಆಶ್ರಯದಲ್ಲಿ ವರ್ತಕರ ಸ್ನೇಹ ಮಿಲನ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಟ್ಟಡಕ್ಕೆ ಸ್ಥಳ ನೀಡಿದ ಯೋಗೇಶ್ ಕುಮಾರ್ ಅವರನ್ನು ಗೌರವಿಸಲಾಯಿತು. ಖ್ಯಾತ ಜಾದುಗಾರ ವಿಕ್ರಂ ಅವರ ತಂಡದಿಂದ ಜಾದೂ ಪ್ರದರ್ಶನ ನಡೆಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಅವಕಾಶಗಳನ್ನು ಬಳಸಿಕೊಂಡು ಗುರಿ ತಲುಪಲು ಪ್ರಯತ್ನಿಸುವುದರೊಂದಿಗೆ ಇತರರ ಬೆಳವಣಿಗೆಯಲ್ಲಿ ಕೂಡ ಪಾತ್ರ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಕುಶಾಲನಗರದ ವರ್ತಕರಿಗೆ ಎಸ್‌ಎಲ್‌ಎಸ್ ಕಾಫಿ ಸಂಸ್ಥೆಯ ಮುಖ್ಯಸ್ಥ ವಿಶ್ವನಾಥನ್ ಕರೆ ನೀಡಿದ್ದಾರೆ.ಅವರು ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಆಶ್ರಯದಲ್ಲಿ ನಡೆದ ವರ್ತಕರ ಸ್ನೇಹ ಮಿಲನ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವರ್ಷವಿಡಿ ವ್ಯಾಪಾರ ಉದ್ಯಮದ ನಡುವೆ ಜಂಜಾಟದಲ್ಲಿ ತೊಡಗಿರುವ ವರ್ತಕ ವೃಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಮ್ಮ ನೋವು ನಲಿವು ಹಂಚಿಕೊಂಡಿರುವುದು ಶ್ಲಾಘನೀಯ ಅಂಶವಾಗಿದೆ ಎಂದರು.ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಸನ್ಮಾನಕ್ಕೆ ಪಾತ್ರರಾದ ಕುಶಾಲನಗರದ ಸಹಕಾರಿ ಧುರೀಣ ಟಿ.ಆರ್. ಶರವಣಕುಮಾರ್ ಮಾತನಾಡಿ, ಪ್ರತಿಯೊಬ್ಬ ಸದಸ್ಯರು ಕೂಡ ಸಂಘಟನೆಯಲ್ಲಿ ತಮ್ಮ ಜವಾಬ್ದಾರಿ ನಿಭಾಯಿಸಬೇಕು. ಒಗ್ಗಟ್ಟಿನ ಮೂಲಕ ಎಲ್ಲಾ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಸಾಧ್ಯ ಎಂದರು.
ಸಂಸ್ಥೆಯ ಮೂಲಕ ನೂತನವಾಗಿ ನಿರ್ಮಾಣವಾಗಲಿರುವ ಸ್ವಂತ ಭವನ ಕಟ್ಟಲು ಎಲ್ಲರೂ ಕೈಜೋಡಿಸುವಂತೆ ಅವರು ಕೋರಿದರು.ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ರವೀಂದ್ರ ವಿ. ರೈ ಮಾತನಾಡಿ, ಒಗ್ಗಟ್ಟಿನ ಮೂಲಕ ಎಲ್ಲರ ಸಹಕಾರ ಕೋರಿದರು.
ಕಟ್ಟಡಕ್ಕೆ ಸ್ಥಳ ನೀಡಿದ ಯೋಗೇಶ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಖ್ಯಾತ ಜಾದುಗಾರ ವಿಕ್ರಂ ಅವರ ತಂಡದಿಂದ ಜಾದೂ ಪ್ರದರ್ಶನ ನಡೆಯಿತು.ಮಾಜಿ ಅಧ್ಯಕ್ಷ ಕೆ.ಎಸ್. ರಾಜಶೇಖರ್, ಕಾರ್ಯದರ್ಶಿ ಕೆ.ಎಸ್. ನಾಗೇಶ್, ಜಿಲ್ಲಾ ಪ್ರತಿನಿಧಿ ಎಂ.ಡಿ. ರಂಗಸ್ವಾಮಿ ಮತ್ತು ಸ್ಥಾನಿಯ ಸಮಿತಿಯ ಪದಾಧಿಕಾರಿಗಳು ಇದ್ದರು.