ಕುಶಾಲನಗರ: ಇಂದು 295 ಕೋಟಿ ರು. ವೆಚ್ಚದ ಯೋಜನೆಗೆ ಸಿಎಂ ಚಾಲನೆ

| Published : Jan 24 2024, 02:01 AM IST

ಕುಶಾಲನಗರ: ಇಂದು 295 ಕೋಟಿ ರು. ವೆಚ್ಚದ ಯೋಜನೆಗೆ ಸಿಎಂ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ ಸಮೀಪದ ಮುತ್ತಿನ ಮುಳ್ಳುಸೋಗೆ ಗ್ರಾಮದ ಬಳಿ ಕಾವೇರಿ ನದಿಯಿಂದ ನೀರೆತ್ತಿ 79 ಗ್ರಾಮಗಳಲ್ಲಿ ಬರುವ 150 ಕೆರೆ ಹಾಗೂ ಕಟ್ಟೆಗಳಿಗೆ ನೀರು ತುಂಬಿಸುವ 295 ಕೋಟಿ ರು. ವೆಚ್ಚದ ಯೋಜನೆ ಉದ್ಘಾಟನೆಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ಸಮೀಪದ ಮುತ್ತಿನ ಮುಳ್ಳುಸೋಗೆ ಗ್ರಾಮದಲ್ಲಿ ಅಂದಾಜು 295 ಕೋಟಿ ರು. ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜ.24ರಂದು ಚಾಲನೆ ನೀಡಲಿದ್ದಾರೆ ಎಂದು ಪಿರಿಯಪಟ್ಟಣ ಶಾಸಕ ಕೆ.ವೆಂಕಟೇಶ್ ತಿಳಿಸಿದ್ದಾರೆ.

ಅವರು ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿದರು.ಬೆಳಗ್ಗೆ 11.20ಕ್ಕೆ ಮೈಸೂರಿನಿಂದ ಹೆಲಿಕಾಪ್ಟರ್ ಮೂಲಕ ಬೈಲುಕೊಪ್ಪೆಯ ಟಿಬೇಟಿಯನ್ ಸೆಂಟ್ರಲ್ ಸ್ಕೂಲ್ ಮೈದಾನದಲ್ಲಿ ಇಳಿದು ನಂತರ ರಸ್ತೆ ಮೂಲಕ ಕೊಪ್ಪ ಸಮೀಪದ ಮುತ್ತಿನ ಮುಳ್ಳುಸೋಗೆ ಗ್ರಾಮದ ಬಳಿ ಕಾವೇರಿ ನದಿಯಿಂದ ನೀರೆತ್ತಿ 79 ಗ್ರಾಮಗಳಲ್ಲಿ ಬರುವ 150 ಕೆರೆ ಹಾಗೂ ಕಟ್ಟೆಗಳಿಗೆ ನೀರು ತುಂಬಿಸುವ 295 ಕೋಟಿ ರು. ವೆಚ್ಚದ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಕೊಪ್ಪ ಗ್ರಾಮದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮೈಸೂರಿಗೆ ಹಿಂತಿರುಗುವರು ಎಂದು ತಿಳಿಸಿದರು. ಈ ಯೋಜನೆಯಿಂದ ತಾಲೂಕಿನ ರೈತರಿಗೆ ಭಾರಿ ಅನುಕೂಲವಾಗಲಿದೆ. 2017ರಲ್ಲಿ ಕುಶಾಲನಗರ ಸಮೀಪದ ಮುತ್ತಿನ ಮುಳ್ಳುಸೋಗೆ ಗ್ರಾಮದ ಕಾವೇರಿ ನದಿ ತಟದಲ್ಲಿ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆಗೊಂಡ ಈ ಯೋಜನೆ, ಪಿರಿಯಾಪಟ್ಟಣದ ಸುಮಾರು 79 ಗ್ರಾಮಗಳ 150 ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯಾಗಿದೆ ಎಂದು ತಿಳಿಸಿದರು.ಕುಶಾಲನಗರ ಸಮೀಪ ಗುಮ್ಮನ ಕೊಲ್ಲಿ ಅಂಚಿನಲ್ಲಿರುವ ಈ ಗ್ರಾಮದ ನದಿ ತಟದಲ್ಲಿ ನಿರ್ಮಾಣಗೊಂಡಿರುವ ಯೋಜನೆಗೆ ವರ್ಷದ ಜೂನ್, ಜುಲೈ, ಆಗಸ್ಟ್‌ನಲ್ಲಿ ಪಂಪ್ ಮೂಲಕ ನೀರು ಹಾಯಿಸಲಾಗುವುದು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ. ಬೃಹತ್ ಪಂಪ್ ಹೌಸ್‌ನಲ್ಲಿ ನದಿಯಿಂದ ನೀರೆತ್ತಲು 1200 ಅಶ್ವ ಶಕ್ತಿಯ 6 ಪಂಪುಗಳನ್ನು ಅಳವಡಿಸಲಾಗಿದೆ. ಮಳೆಗಾಲ ಅವಧಿಯಲ್ಲಿ ಈ ಘಟಕ ಕಾರ್ಯ ಆರಂಭಗೊಳ್ಳಲಿದೆ ಎಂದರು.