ಕುಶಾಲನಗರ: ದಲಾಯಿಲಾಮ ಶಿಬಿರದಿಂದ ನಿರ್ಗಮನ

| Published : Feb 17 2025, 12:30 AM IST

ಸಾರಾಂಶ

ಬೈಲುಕುಪ್ಪೆ ಶಿಬಿರದಲ್ಲಿ ವಿಶ್ರಾಂತಿ ಪಡೆದ ಟಿಬೆಟಿಯನ್‌ ಧಾರ್ಮಿಕ ಗುರು 14ನೇ ದಲೈಲಾಮ ಭಾನುವಾರ ಬೆಳಗ್ಗೆ ಶಿಬಿರದಿಂದ ನಿರ್ಗಮಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರಕಳೆದ 40 ದಿನಗಳ ಕಾಲ ಕುಶಾಲನಗರ ಸಮೀಪ ಬೈಲುಕುಪ್ಪೆ ಶಿಬಿರದಲ್ಲಿ ವಿಶ್ರಾಂತಿ ಪಡೆದ ಟಿಬೆಟಿಯನ್ ಧಾರ್ಮಿಕ ಗುರು, ನೋಬೆಲ್ ಪ್ರಶಸ್ತಿ ವಿಜೇತ 14ನೇ ದಲೈಲಾಮ ಭಾನುವಾರ ಬೆಳಗ್ಗೆ ಶಿಬಿರದಿಂದ ನಿರ್ಗಮಿಸಿದರು.ತಮ್ಮ ಅನುಯಾಯಿಗಳಿಗೆ ಧಾರ್ಮಿಕ ಪ್ರವಚನ ಹಾಗೂ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಟಿಬೆಟಿಯನ್ನರ ನಡೆದಾಡುವ ದೈವ ಎಂದೇ ನಂಬಿದ ದಲೈಲಾಮ ಅವರನ್ನು ಅನುಯಾಯಿಗಳು ಬೆಳಗ್ಗೆ ಬೈಲುಕುಪ್ಪೆಯ ತಶಿ ಲೊಂಪೊ ಬೌದ್ಧ ಮಂದಿರದಿಂದ ಬೀಳ್ಕೊಟ್ಟರು.ದಲೈಲಾಮ ಅವರು ರಸ್ತೆ ಮಾರ್ಗವಾಗಿ ಹುಣಸೂರು ಬಳಿಯ ಗುರುಪುರ ನಿರಾಶ್ರಿತ ಶಿಬಿರಕ್ಕೆ ತೆರಳಿದರು.ಎರಡು ದಿನಗಳ ಕಾಲ ಅಲ್ಲಿ ತಂಗಲಿರುವ ದಲೈಲಾಮ 18ರಂದು ದೆಹಲಿಗೆ ತೆರಳಿದ್ದಾರೆ.

--------------------------

ಕೊಡಗು ವಿ.ವಿ. ಮುಚ್ಚುವ ನಿರ್ಧಾರ: ಬಿಜೆಪಿ ಖಂಡನೆಕನ್ನಡಪ್ರಭ ವಾರ್ತೆ ಸೋಮವಾರಪೇಟೆರಾಜ್ಯದಲ್ಲಿ ಹಿಂದಿನ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ೭ ವಿ.ವಿಗಳನ್ನು ಸ್ಥಾಪಿಸಿದ್ದರು. ಅದನ್ನು ಇಂದಿನ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದ ಉಪ ಸಮಿತಿ ಮುಚ್ಚುವ ನಿರ್ಧಾರಕ್ಕೆ ಶಿಫಾರಸ್ಸು ಮಾಡಿರುವುದು ಖಂಡನೀಯ ಎಂದು ಬಿಜೆಪಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಸೋಮೇಶ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಅಭಿವೃದ್ಧಿ ಶೂನ್ಯವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಇದ್ದ ಹಣವನ್ನು ವ್ಯಯ ಮಾಡುವ ಮೂಲಕ, ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸಾಧ್ಯವಾಗದ ಸ್ಥಿತಿಗೆ ತಲುಪಿದೆ. ವಿಶಿಷ್ಟ ಸಂಸ್ಕೃತಿ ಹೊಂದಿರುವ ಕೊಡಗು ಜಿಲ್ಲೆಗೆ ಒಂದು ವಿಶ್ವ ವಿದ್ಯಾಲಯವನ್ನು ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನೀಡಿತ್ತು. ಆದರೆ, ಇಂದಿನ ಕಾಂಗ್ರೆಸ್ ಸರ್ಕಾರ ಅದರ ನಿರ್ವಹಣೆಗೆ ಬೇಕಾದ ಹಣಕಾಸನ್ನು ನೀಡದೆ, ಮುಚ್ಚುವ ತೀರ್ಮಾನ ಕೈಗೊಂಡಿದ್ದಾರೆ ಎಂದರು.

ಜಿಲ್ಲೆಗೆ ಅಂದಿನ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರ ಪರಿಶ್ರಮದಿಂದಾಗಿ ಕೊಡಗು ಜಿಲ್ಲೆಗೆ ವಿ.ವಿ. ನೀಡಲಾಗಿತ್ತು. ಆದರೆ ಹಿಂದಿನ ಶಾಸಕರು ಅನುದಾನದಲ್ಲಾಗುವ ಯೋಜನೆಗಳನ್ನು ತಮ್ಮದೆಂದು ಬಿಂಬಿಸಿಕೊಳ್ಳುತ್ತಿರುವ ಇಂದಿನ ಶಾಸಕರು, ವಿ.ವಿ.ಯನ್ನು ಉಳಿಸಿಕೊಳ್ಳಲು ಮುಂದಾಗುತ್ತಿಲ್ಲ. ಇದರಲ್ಲಿ ಸಾಕಷ್ಟು ಬಡ ವಿದ್ಯಾರ್ಥಿಗಳೇ ವಿದ್ಯಾಭ್ಯಾಸ ಮಾಡುತ್ತಿದ್ದು, ವಿ.ವಿ. ಮುಚ್ಚಿದಲ್ಲಿ ಅವರಿಗೆ ನಷ್ಟವಾಗಲಿದೆ. ವಿ.ವಿ.ಯನ್ನು ಮುಚ್ಚಲು ಸರ್ಕಾರ ಮುಂದಾದಲ್ಲಿ ಪಕ್ಷದ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್ ಚಂದ್ರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ವಿರೋಧಿಯಾಗಿದ್ದಾರೆ. ದೇಶಕ್ಕೆ ಹಲವಾರು ಸೇನಾನಿಗಳು ಹಾಗೂ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಆಟಗಾರರನ್ನು ನೀಡುತ್ತಿರುವ ವಿಶಿಷ್ಟ ಜಿಲ್ಲೆ ಕೊಡಗನ್ನು ನಿರ್ಲಕ್ಷ್ಯಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಹಣಕಾಸಿನ ನೆರವನ್ನು ನೀಡಲು ಮುಂದೆ ಬರಲಿಲ್ಲ. ಹಣಕಾಸಿನ ನೆರವಿಲ್ಲದೆ ಸಿಬ್ಬಂದಿಗೆ ಸಂಬಳ ನೀಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ನೂತನ ಕೋರ್ಸ್‌ಗಳನ್ನು ಪ್ರಾರಂಭಿಸಿ, ವಿದ್ಯಾರ್ಥಿಗಳು ಸೇರ್ಪಡೆಯಾದ ನಂತರ ವಿ.ವಿ. ಮುಚ್ಚಲು ಮುಂದಾಗಿದೆ. ರಾಜ್ಯ ಸರ್ಕಾರ ವಿ.ವಿ. ಮುಚ್ಚುವ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ, ಮುಂದಿನ ದಿನಗಳಲ್ಲಿ ಜಿಲ್ಲೆಗೆ ಮುಖ್ಯ ಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಆಗಮಿಸುವ ಸಂದರ್ಭ ಪಕ್ಷದ ವತಿಯಿಂದ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್, ಪ್ರಮುಖರಾದ ಕಿಬ್ಬೆಟ್ಟ ಮಧು ಹಾಗೂ ಚಂದ್ರ ಇದ್ದರು.