ಸಾರಾಂಶ
ಕುಶಾಲನಗರ ರೈತ ಸಹಕಾರ ಭವನದಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ತನಕ ಕೊಡಗು ಜಿಲ್ಲಾ ಮಟ್ಟದ ದೇವಸ್ಥಾನಗಳ ಪರಿಷತ್ತು ಸಮಾವೇಶ ನಡೆಯಲಿದೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7204082658 ಗೆ ಸಂಪರ್ಕಿಸುವಂತೆ ಕಾರ್ಯಕ್ರಮ ಸಂಯೋಜಕ ವಿಜಯಕುಮಾರ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕುಶಾಲನಗರದೇವಾಲಯಗಳು ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಶುಕ್ರವಾರ ಕುಶಾಲನಗರದಲ್ಲಿ ಕೊಡಗು ಜಿಲ್ಲಾ ಮಟ್ಟದ ದೇವಸ್ಥಾನಗಳ ಪರಿಷತ್ತು ಸಮಾವೇಶ ನಡೆಯಲಿದೆ ಎಂದು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಪ್ರಮುಖ ಚಂದ್ರ ಮೊಗವೀರ ತಿಳಿಸಿದ್ದಾರೆ.
ಕುಶಾಲನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇವಸ್ಥಾನಗಳ ಸರ್ಕಾರೀಕರಣ, ದೇವಸ್ಥಾನಗಳನ್ನು ಅಪವಿತ್ರಗೊಳಿಸುವುದು, ಮೂರ್ತಿಭಂಜನ, ದೇವಸ್ಥಾನಗಳನ್ನು ಅನಧಿಕೃತವೆಂದು ಧ್ವಂಸಗೊಳಿಸುವುದು, ದೇವಸ್ಥಾನಗಳ ಜಮೀನುಗಳನ್ನು ವಶಪಡಿಸಿಕೊಳ್ಳುವುದು, ದೇವನಿಧಿ ಅಪವ್ಯಯ ಈ ರೀತಿಯ ಆನೇಕ ಸಮಸ್ಯೆಗಳು ಮುಗಿಲು ಮುಟ್ಡಿದೆ ಎಂದು ಆತಂಕ ವ್ಯಕ್ತಪಡಿಸಿದರು.ಈ ಎಲ್ಲಾ ಕಾರಣಗಳಿಂದ ದೇವಸ್ಥಾನಗಳಲ್ಲಿನ ದೇವತಾ ತತ್ವನ್ನು ಕಾಪಾಡಲು, ದೇವಸ್ಥಾನಗಳಲ್ಲಿ ಧರ್ಮಪ್ರಸಾರ ಮಾಡಲು . ಭಕ್ತಾದಿಗಳಿಗೆ ಮೂಲ ಸೌಕರ್ಯ ಕಲ್ಪಿಸಲು , ದೇವಸ್ಥಾನಗಳ ಸಂಘಟನೆಯನ್ನು ಮಾಡುವ ಅನಿವಾರ್ಯತೆ ಬಂದಿದೆ. ದೇವಾಲಯಗಳಿಗೆ ಆಗಮಿಸುವ ಭಕ್ತಾದಿಗಳಿಗೆ ವಸ್ತ್ರಸಂಹಿತೆಯನ್ನು ಅಳವಡಿಸಲು ಕುಶಾಲನಗರ ದೇವಸ್ಥಾನಗಳ ಒಕ್ಕೂಟ ಮತ್ತು ಹಿಂದೂ ಜನಜಾಗೃತಿ ಆಶ್ರಯದಲ್ಲಿ ಶುಕ್ರವಾರ ಕುಶಾಲನಗರ ರೈತ ಸಹಕಾರ ಭವನದಲ್ಲಿ ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ತು ಅಧಿವೇಶನ ನಡೆಯಲಿದೆ ಎಂದರು.ಕುಶಾಲನಗರ ದೇವಸ್ಥಾನಗಳ ಒಕ್ಕೂಟದ ಅಧ್ಯಕ್ಷ ಎಂ.ಕೆ.ದಿನೇಶ್ ಮಾತನಾಡಿ, ಕುಶಾಲನಗರದಲ್ಲಿ ನಡೆಯುವ ದೇವಸ್ಥಾನ ಪರಿಷತ್ತು ಅಧಿವೇಶನಕ್ಕೆ ಜಿಲ್ಲೆಯಿಂದ 300 ಕ್ಕೂ ಹೆಚ್ಚು ಆಮಂತ್ರಿತ ದೇವಸ್ಥಾನಗಳ ಆಡಳಿತ ಮಂಡಳಿ ಸದಸ್ಯರು, ಅರ್ಚಕರು, ಪುರೋಹಿತರು, ಪ್ರತಿನಿಧಿಗಳು,ದೇವಸ್ಥಾನಗಳ ರಕ್ಷಣೆಗಾಗಿ ಹೋರಾಡುವ ನ್ಯಾಯವಾದಿಗಳು ಧಾರ್ಮಿಕ ಚಿಂತಕರು ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದರು.
ಹೊಸೂರಿನ ಮಹದೇಶ್ವರ ದೇವಸ್ಥಾನದ ಪ್ರಮುಖ ಕೊಳ್ಳಿರ ಧರ್ಮಜ ಮಾತನಾಡಿ, ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘವು ಕೇವಲ 6 ತಿಂಗಳುಗಳಲ್ಲಿ ದೇಶದ್ಯಾದ್ಯಂತ 275 ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೆ ತಂದಿದೆ ಮತ್ತು ಮಹಾಸಂಘದ ಅಭಿಯಾನದಿಂದ ಪ್ರೇರಿತರಾದ ಆನೇಕ ವಿಶ್ವಸ್ಥರು ತಮ್ಮ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸುತ್ತಿದ್ದಾರೆ ಎಂದು ಹೇಳಿದರು.ಅಧಿವೇಶನ ವಿರಾಜಪೇಟೆ ಅರೆಮೇರಿ ಮಠಾಧೀಶ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಚಾಲಕರಾದ ಮೋಹನ್ ಗೌಡ ಮತ್ತಿತರ ಗಣ್ಯರು ಪಾಲ್ಗೊಳ್ಳುವರು.ಕುಶಾಲನಗರ ರೈತ ಸಹಕಾರ ಭವನದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ತನಕ ಸಮಾವೇಶ ನಡೆಯಲಿದೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7204082658 ಗೆ ಸಂಪರ್ಕಿಸುವಂತೆ ಕಾರ್ಯಕ್ರಮ ಸಂಯೋಜಕ ವಿಜಯಕುಮಾರ್ ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ಪ್ರಮುಖರಾದ ಬಳಪಂಡ ಪವನ್ ಮತ್ತು ವಿವಿಧ ದೇವಾಲಯಗಳ ಪ್ರತಿನಿಧಿಗಳು ಇದ್ದರು.