ಕುಶಾಲನಗರ: ಮಳೆಯಿಂದ ವಿವಿಧೆಡೆ ಅಪಾರ ಹಾನಿ

| Published : May 22 2024, 12:55 AM IST

ಸಾರಾಂಶ

ಕೂಡು ಮಂಗಳೂರು ಕೂಡ್ಲೂರು, ಮುಳ್ಳು ಸೋಗೆ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಸುರಿದ ಭಾರಿ ಮಳೆಯಿಂದ ಸೋಮವಾರ ಸಂಜೆ ಹೆಚ್ಚಿನ ಪ್ರಮಾಣದ ಹಾನಿ ಉಂಟಾಗಿದೆ. ಕುಶಾಲನಗರ ಪಟ್ಟಣ ಹೊರವಲಯದ ಗ್ರಾಮ ವ್ಯಾಪ್ತಿಯಲ್ಲಿ ನಿಯಮಬಾಹಿರವಾಗಿ ನಿರ್ಮಾಣವಾಗಿರುವ ಹಲವು ಅಕ್ರಮ ಬಡಾವಣೆಗಳ ಕಡೆಯಿಂದ ಹರಿದು ಬಂದ ನೀರಿನಿಂದ ಹಲವು ಮನೆಗಳು ಹಾನಿಗಳಾಗಿವೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ತಾಲೂಕಿನ ಕೂಡು ಮಂಗಳೂರು ಕೂಡ್ಲೂರು, ಮುಳ್ಳು ಸೋಗೆ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಸುರಿದ ಭಾರಿ ಮಳೆಯಿಂದ ಸೋಮವಾರ ಸಂಜೆ ಹೆಚ್ಚಿನ ಪ್ರಮಾಣದ ಹಾನಿ ಉಂಟಾಗಿದೆ.

ಕುಶಾಲನಗರ ಪಟ್ಟಣ ಹೊರವಲಯದ ಗ್ರಾಮ ವ್ಯಾಪ್ತಿಯಲ್ಲಿ ನಿಯಮಬಾಹಿರವಾಗಿ ನಿರ್ಮಾಣವಾಗಿರುವ ಹಲವು ಅಕ್ರಮ ಬಡಾವಣೆಗಳ ಕಡೆಯಿಂದ ಹರಿದು ಬಂದ ನೀರಿನಿಂದ ಹಲವು ಮನೆಗಳು ಹಾನಿಗಳಾಗಿವೆ.

ತಡೆಗೋಡೆಗಳು ಕುಸಿದು ಹೋಗಿವೆ. ರಸ್ತೆ ಮೇಲೆ ನೀರು ಹರಿದ ಪರಿಣಾಮವಾಗಿ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಕುಶಾಲನಗರ ಪಟ್ಟಣದ ಸಾಯಿ ಬಡಾವಣೆಯಲ್ಲಿ ರಾಜಕಾರಣಿ ತಡೆಗೋಡೆ ಕುಸಿದು ವಿದ್ಯುತ್ ಕಂಬಕ್ಕೆ ಹಾನಿ ಉಂಟಾಗಿದೆ.

ಕುಶಾಲನಗರ ತಹಸಿಲ್ದಾರ್ ಕಿರಣ್ ಗೌರಯ್ಯ ಹಲವೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಟ್ಟಣದಲ್ಲಿ ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್ ಆರೋಗ್ಯ ಅಧಿಕಾರಿ ಉದಯಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ಚರಂಡಿ, ಕಾಲುವೆಗಳ ನಿರ್ವಹಣೆ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕುಶಾಲನಗರ ಸಮೀಪದ ಗುಮ್ಮನ ಕೊಲ್ಲಿ ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿ ಮನೆಯ ಸಾಮಗ್ರಿಗಳಿಗೆ ಹಾನಿ ಉಂಟಾಗಿದೆ.

ಕೈಗಾರಿಕಾ ಬಡಾವಣೆಯ ವ್ಯಾಪ್ತಿಯಲ್ಲಿ ಹಲವು ಉದ್ದಿಮೆಗಳ ಘಟಕಗಳ ಆವರಣಗಳಿಗೆ ನೀರು ಹರಿದು ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ.

ಇಂದು ಶಾಸಕ ಪರಿಶೀಲನೆ:

ಮಳೆ ಹಾನಿಯ ಪರಿಶೀಲನೆ ಹಿನ್ನೆಲೆಯಲ್ಲಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರು ಬುಧವಾರ ಮಧ್ಯಾಹ್ನ ಆಯಾ ಪ್ರದೇಶಗಳಿಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಕುಶಾಲನಗರ ಪುರಸಭೆ ವ್ಯಾಪ್ತಿಯ ಬಹುತೇಕ ಬಡಾವಣೆಗಳು ನಿಯಮಬಾಹಿರವಾಗಿ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಎಲ್ಲೆಡೆಯಿಂದ ಹೆಚ್ಚಿನ ಪ್ರಮಾಣದ ನೀರಿನ ಹರಿವಿನೊಂದಿಗೆ ಈ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಶಾಸಕ ಡಾ. ಮಂತರ್ ಗೌಡ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.