ಸಾರಾಂಶ
ಕುಶಾಲನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ವಾರ್ಷಿಕೋತ್ಸವ ನಡೆಯಿತು. ಆದಿಚುಂಚನಗಿರಿ ವಿಶ್ವವಿದ್ಯಾಲಯ ಕುಲಸಚಿವ ಡಾ. ಸಿ.ಕೆ. ಸುಬ್ಬರಾಯ ಕಾರ್ಯಕ್ರಮ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಶಿಕ್ಷಣದ ಮೂಲಕ ಮಾತ್ರ ಸ್ವಾವಲಂಬಿಗಳಾಗಬಹುದು ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯ ಕುಲಸಚಿವ ಡಾ. ಸಿ.ಕೆ. ಸುಬ್ಬರಾಯ ಅಭಿಪ್ರಾಯಪಟ್ಟರು.ಅವರು ಕುಶಾಲನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಹೆಣ್ಣು ಮಕ್ಕಳಿಗೆ ಶಿಕ್ಷಣ ಅತ್ಯಗತ್ಯವಾಗಿದ್ದು, ಆರ್ಥಿಕ ಕೊರತೆ ಹೆಸರಿನಲ್ಲಿ ಶಿಕ್ಷಣವನ್ನು ಮೊಟಕುಗೊಳಿಸಬಾರದು. ಶಿಸ್ತು ಮತ್ತು ಗುರು ಹಿರಿಯರಿಗೆ ವಿಧೇಯತೆ ಮೂಲಕ ಸಾಧನೆ ಸಾಧ್ಯ. ಗುಣಮಟ್ಟ ಸೃಷ್ಟಿಸಲು ಅತ್ಯಂತ ಶ್ರಮದ ಅಗತ್ಯತೆ ಇದೆ ಎಂದರು.ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಸತೀಶ್ ಎನ್.ಎಸ್. ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಬೆಂಗಳೂರಿನ ಕ್ಯೂ ಸ್ಪೈಡರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ಶಿವಣ್ಣ, ಶನಿವಾರಸಂತೆ ವಿಘ್ನೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಜಯಕುಮಾರ್ ಮಾತನಾಡಿದರು.
ಪ್ರಾಂಶುಪಾಲ ಡಾ.ಸತೀಶ್ ಎನ್.ಎಸ್. ಕಾಲೇಜಿನ ಸಮಗ್ರ ವರದಿ ವಾಚಿಸಿದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ತಂಡದ ವಿದ್ಯಾರ್ಥಿಗಳಿಗೆ ಸಾಧಕರಿಗೆ ಬಹುಮಾನ ವಿತರಣೆ ನಡೆಯಿತು.ವೇದಿಕೆಯಲ್ಲಿ ವಿವಿಧ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಂಕಿತ ಮತ್ತು ತಂಡ ಪ್ರಾರ್ಥಿಸಿದರು. ವಿಭಾಗ ಮುಖ್ಯಸ್ಥ ಡಾ.ಪರಶಿವಮೂರ್ತಿ ಸ್ವಾಗತಿಸಿದರು. ಅಧೀಕ್ಷಕರಾದ ರೂಪ ಮತ್ತು ಉಪನ್ಯಾಸಕ ಮಹೇಂದ್ರ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.