ಕುಶಾಲನಗರ: ಮಂಟಪಗಳ ಅದ್ಧೂರಿ ಶೋಭಾ ಯಾತ್ರೆ

| Published : Dec 15 2024, 02:04 AM IST

ಸಾರಾಂಶ

ಕುಶಾಲನಗರದಲ್ಲಿ ವಿವಿಧ ವಿನ್ಯಾಸಗಳ ಮಂಟಪಗಳ ಅದ್ಧೂರಿ ಶೋಭಾಯಾತ್ರೆ ನಡೆಯಿತು. ಸಾವಿರಾರು ಹನುಮ ಭಕ್ತರು ಭಾಗಿಯಾದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಹನುಮ ಜಯಂತಿ ಅಂಗವಾಗಿ ಕುಶಾಲನಗರದಲ್ಲಿ ವಿವಿಧ ವಿನ್ಯಾಸಗಳ ಮಂಟಪಗಳ ಅದ್ಧೂರಿ ಶೋಭಾ ಯಾತ್ರೆ ಶುಕ್ರವಾರ ರಾತ್ರಿ ನಡೆಯಿತು.

ಆಂಜನೇಯ ದೇವಾಲಯದ ಮೂಲ ಮಂಟಪದೊಂದಿಗೆ ಪ್ರತ್ಯೇಕ ಸಮಿತಿಗಳ ಮಂಟಪಗಳಿಂದ ಕುಶಾಲನಗರ ಪಟ್ಟಣದಲ್ಲಿ ರಾತ್ರಿ ಅಬ್ಬರದ ಡಿಜೆಯೊಂದಿಗೆ ಬೆಳಕಿನ ಚಿತ್ತಾರಗಳು ಮೂಡಿಬಂತು.

ಕುಶಾಲನಗರ ರಥ ಬೀದಿಯ ಆಂಜನೇಯ ದೇವಾಲಯದ ಶ್ರೀ ರಾಮಾಂಜನೇಯ ಉತ್ಸವ ಸಮಿತಿ ಮಂಟಪ, ಮಾದಾಪಟ್ಟಣ ರಾಮದೂತ ಜಯಂತಿ ಆಚರಣೆ ಸಮಿತಿ ಎಚ್ ಆರ್ ಪಿ ಕಾಲೋನಿಯ ಅಂಜನಿಪುತ್ರ ಜಯಂತಿ ಉತ್ಸವ ಆಚರಣೆ ಸಮಿತಿ, ಹಾರಂಗಿಯ ವೀರ ಹನುಮ ಸೇವಾ ಸಮಿತಿಯ ಮಂಟಪ, ಮುಳ್ಳುಸೋಗೆ ಚಾಮುಂಡೇಶ್ವರಿ ಉತ್ಸವ ಸಮಿತಿ, ಕೂಡಿಗೆ ಹನುಮ ಸೇವಾ ಸಮಿತಿ, ಗುಡ್ಡೆ ಹೊಸೂರು ವೀರಾಂಜನೇಯ ಸೇವಾ ಸಮಿತಿ ಹಾಗೂ ಬೈಚನಹಳ್ಳಿ ಗೆಳೆಯರ ಬಳಗದ ಮಂಟಪಗಳು ಹನುಮ ಭಕ್ತರ ಮೆರವಣಿಗೆಯಲ್ಲಿ ಬಂದು ವಿಶೇಷ ಕಥಾ ವಸ್ತುಗಳ ಪ್ರದರ್ಶನಗಳನ್ನು ನೀಡಿದವು.

ಕುಶಾಲನಗರ ಸೇರಿದಂತೆ ನೆರೆ ಜಿಲ್ಲೆಗಳಿಂದ ಸಾವಿರಾರು ಹನುಮ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಕುಣಿದು ಕುಪ್ಪಳಿಸಿದರು.

ದಶಮಂಟಪ ಸಮಿತಿ ಅಧ್ಯಕ್ಷ ಎಂ ಡಿ ಕೃಷ್ಣಪ್ಪ, ಉಪಾಧ್ಯಕ್ಷ ಕಿಶೋರ್ ಕುಮಾರ್, ಬಾಲಕೃಷ್ಣ, ಹೆಚ್‌ ಟಿ ವಸಂತ, ಪ್ರಧಾನ ಕಾರ್ಯದರ್ಶಿ ರಾಮನಾಥನ್, ಖಜಾಂಚಿ ಗಿರೀಶ್ ಮತ್ತು ಮಂಟಪಗಳ ಪ್ರಮುಖರು ಇದ್ದರು.

ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡ ಮಂಟಪಗಳಲ್ಲಿ ಗುಡ್ಡೆ ಹೊಸೂರು ವೀರಾಂಜನೇಯ ಸೇವಾ ಸಮಿತಿ ಮತ್ತು ಕೂಡಿಗೆ ಹನುಮ ಸೇವಾ ಸಮಿತಿ ಪ್ರಥಮ ಸ್ಥಾನ ಗಳಿಸಿದೆ.

ಮುಳ್ಳುಸೋಗೆ ಚಾಮುಂಡೇಶ್ವರಿ ಉತ್ಸವ ಸಮಿತಿ ದ್ವಿತೀಯ ಸ್ಥಾನ ಶ್ರೀರಾಮ ಮಂದಿರ ಅಂಜನಿಪುತ್ರ ಜಯಂತಿ ಉತ್ಸವ ಆಚರಣೆ ಸಮಿತಿ ಮಂಟಪಗಳು ತೃತೀಯ ಸ್ಥಾನ ಗಳಿಸಿದೆ.

ಪ್ರಥಮ ಸ್ಥಾನ ವಿಜೇತರಿಗೆ ತಲಾ 30,000 ರು. ನಗದು, ದ್ವಿತೀಯ ಸ್ಥಾನ ವಿಜೇತರಿಗೆ 25,000 ರು. ನಗದು ಮತ್ತು ತೃತೀಯ ಸ್ಥಾನ ಗಳಿಸಿದ ಮಂಟಪಕ್ಕೆ 20,000 ರು. ಬಹುಮಾನ ಮತ್ತು ಟ್ರೋಫಿ ಹಾಗೂ ಪಾಲ್ಗೊಂಡ ಎಲ್ಲ ಮಂಟಪಗಳಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.