ಕುಶಾಲನಗರ ಪುರಸಭೆ ಆಯ ವ್ಯಯ ಪೂರ್ವಭಾವಿ ಸಿದ್ಧತೆ ಸಭೆ

| Published : Feb 21 2025, 12:48 AM IST

ಸಾರಾಂಶ

ಕುಶಾಲನಗರ ಪುರಸಭೆ 2025- 26ನೇ ಸಾಲಿನ ಆಯವ್ಯಯ ಬಗ್ಗೆ ಪೂರ್ವಭಾವಿ ಸಿದ್ಧತೆ ಸಭೆ ನಡೆಯಿತು. ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ಪುರಸಭೆಯ 2025 -26ನೇ ಸಾಲಿನ ಆಯ ವ್ಯಯ ಬಗ್ಗೆ ಪೂರ್ವಭಾವಿ ಸಿದ್ಧತೆ ಸಭೆ ನಡೆಯಿತು.

ಪುರಸಭೆಯ ಅಧ್ಯಕ್ಷೆ ಜಯಲಕ್ಷ್ಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆದಾಯದ ಮೂಲಗಳು ಮತ್ತು ವೆಚ್ಚದ ಮೂಲಗಳ ಬಗ್ಗೆ ಚರ್ಚೆ ನಡೆಯಿತು.

ವಿವಿಧ ಮೂಲಗಳಿಂದ ಅಂದಾಜು 15 ಕೋಟಿ 69 ಲಕ್ಷ 95 ಸಾವಿರ ರುಪಾಯಿ ಗಳ ಆದಾಯ ಮೂಲ ಬಗ್ಗೆ ಚರ್ಚಿಸಲಾಯಿತು. ಸರಕಾರದಿಂದ ಬರುವ ಮುಕ್ತ ನಿಧಿ ಅನುದಾನ, ವಿದ್ಯುತ್ ಅನುದಾನ, ವೇತನ ಅನುದಾನ ಮತ್ತು 15ನೇ ಹಣಕಾಸು ಅನುದಾನ ಸೇರಿದಂತೆ ವಿವಿಧ ಕಡೆಗಳಿಂದ ಬರುವ ಆದಾಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಇನ್ನುಳಿದಂತೆ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿ 2 ಕೋಟಿ 15 ಲಕ್ಷ, ರಸ್ತೆ, ಪಾದಚಾರಿ ರಸ್ತೆ, ಚರಂಡಿ ಅಭಿವೃದ್ಧಿ 2.5 ಕೋಟಿ ಅಧಿಕಾರಿ ಸಿಬ್ಬಂದಿ ವೇತನ ಮತ್ತು ಭತ್ಯೆಗಳ ಪಾವತಿಗೆ 2.64 ಕೋಟಿ ರು. ಸೇರಿದಂತೆ ವೆಚ್ಚಗಳ ಬಗ್ಗೆ ಚರ್ಚೆ ನಡೆಯಿತು.

ಕಾವೇರಿ ನದಿ ಸ್ವಚ್ಛತೆ ಸಂರಕ್ಷಣೆಯಲ್ಲಿ ಯೋಜನೆ ರೂಪಿಸಲು ಅನುದಾನ ಮೀಸಲಿಡುವಂತೆ ಹಿರಿಯ ಸದಸ್ಯರಾದ ಪ್ರಮೋದ್ ಮುತಪ್ಪ ಸಭೆಯ ಗಮನಕ್ಕೆ ತಂದರು. ತಮ್ಮ ವಾರ್ಡುಗಳ ಅಭಿವೃದ್ಧಿ ಕಾಮಗಾರಿಗೆ ಹಣ ಮೀಸಲಾತಿ ಇಡುವಂತೆ ಸಭೆಯಲ್ಲಿ ಸದಸ್ಯರು ಚರ್ಚೆ ನಡೆಸಿದರು.

ಉಪಾಧ್ಯಕ್ಷೆ ಪುಟ್ಟ ಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ ಬಿ ಸುರೇಶ್, ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್ ಮತ್ತು ಸದಸ್ಯರು, ಅಧಿಕಾರಿ, ಸಿಬ್ಬಂದಿ ಇದ್ದರು.