ಕುಶಾಲನಗರ: ಬಡಾವಣೆಗಳಿಗೆ ನುಗ್ಗಿದ ಮಳೆ ನೀರು

| Published : May 25 2024, 12:50 AM IST

ಸಾರಾಂಶ

ಬೆಟ್ಟ ಗುಡ್ಡಗಳಿಂದ ಹರಿದ ನೀರು ತಗ್ಗು ಪ್ರದೇಶದ ಬಡಾವಣೆಗಳಿಗೆ ನುಗ್ಗಿ ರಸ್ತೆ, ಮನೆಗಳ ಮೂಲಕ ಹರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಪ್ರಸಕ್ತ ಸುರಿಯುತ್ತಿರುವ ಮಳೆ ಕುಶಾಲನಗರದ ಬಹುತೇಕ ಬಡಾವಣೆ ನಿವಾಸಿಗಳ ನೆಮ್ಮದಿಯನ್ನು ದಿನನಿತ್ಯ ಕೆಡಿಸುತ್ತಿದೆ.ಕಳೆದ ಒಂದು ವಾರದಿಂದ ನಿರಂತರವಾಗಿ ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಮಳೆ ಸುರಿಯುತ್ತಿದೆ. ಬೆಟ್ಟ ಗುಡ್ಡಗಳಿಂದ ಹರಿದ ನೀರು ತಗ್ಗು ಪ್ರದೇಶದ ಬಡಾವಣೆಗಳಿಗೆ ನುಗ್ಗಿ ರಸ್ತೆ, ಮನೆಗಳ ಮೂಲಕ ಹರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.ಕುಶಾಲನಗರದ ಗೊಂದಿ ಬಸವನಹಳ್ಳಿ, ಗುಮ್ಮನ ಕೊಲ್ಲಿ ಕೂಡ್ಲೂರು ವ್ಯಾಪ್ತಿಯಲ್ಲಿ ಮಳೆ ನೀರು ಚರಂಡಿ ತುಂಬಿ ರಸ್ತೆ ಮೇಲೆ ಹರಿದು ಮನೆಗಳಿಗೆ ನುಗ್ಗಿದೆ. ರೊಂಡಕೆರೆ, ತಾವರೆಕೆರೆ ಮುಂತಾದ ಕೆರೆಗಳು ತುಂಬಿ ಹರಿಯಲು ಆರಂಭಿಸಿವೆ.

ಸ್ಥಳೀಯ ಆಡಳಿತ ಚರಂಡಿಯ ನಿರ್ವಹಣೆ ಮಾಡಿದರೂ ಕೂಡ ಮತ್ತೆ ಅದೇ ರೀತಿಯ ಸಮಸ್ಯೆ ಪುನರಾವರ್ತನೆಗೊಳ್ಳುತ್ತಿದೆ. ಕೂಡ್ಲೂರು ವೀರಭೂಮಿ ಪ್ರವಾಸಿ ಕೇಂದ್ರದ ಸಮೀಪದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮೂರು ಬಡಾವಣೆಗಳ ಪ್ರದೇಶದ ಮಳೆ ನೀರು ನೇರವಾಗಿ ಕೆಳ ಭಾಗದಲ್ಲಿರುವ ಅಮರನಾಥ ಲೇಔಟ್ ಮನೆಗಳಿಗೆ ನುಗ್ಗುತ್ತಿದೆ ಎಂದು ಅಲ್ಲಿನ ನಿವಾಸಿ ನಿವೃತ್ತ ಅಧಿಕಾರಿ ವಾಸುದೇವ್ ತಿಳಿಸಿದ್ದಾರೆ.

ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಶಾಶ್ವತವಾಗಿ ಸಮಸ್ಯೆ ಬಗೆಹರಿಸಬೇಕೆಂದು ಮನವಿ ಮಾಡಿದ್ದಾರೆ.ಹತ್ತಕ್ಕೂ ಅಧಿಕ ಬಡಾವಣೆಗಳ ಬಹುತೇಕ ನಾಗರಿಕರು ಆತಂಕಕ್ಕೆ ಒಳಗಾಗಿದ್ದು, ಈ ಮಳೆಗಾಲದ ಅವಧಿಯ ಬಗ್ಗೆ ಚಿಂತಿತರಾಗಿದ್ದಾರೆ.