ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದೊಂದಿಗೆ 2023-24ನೇ ಸಾಲಿನ ಮಿಶನ್ ಶಕ್ತಿ ಯೋಜನೆಯಯಡಿ ‘ಬೇಟಿ ಬಚವೊ-ಬೇಟಿ ಪಡಾವೊ’ ಜಿಲ್ಲಾ ಮಟ್ಟದ ಕಾರ್ಯಕ್ರಮದ ಅಂಗವಾಗಿ ಕುಶಾಲನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಹೆಣ್ಣುಮಕ್ಕಳ ಹಕ್ಕುಗಳ ಕುರಿತು ತರಬೇತಿ ಕಾರ್ಯಾಗಾರ’ ನಡೆಯಿತು.ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿದೇರ್ಶಕ ನಟರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿದ್ದು, ಈ ಕುರಿತು ಮಕ್ಕಳಿಗೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಆದ್ದರಿಂದ ಮಕ್ಕಳು ಹೆಚ್ಚು ಓದಿನ ಕಡೆ ಆಸಕ್ತಿ ವಹಿಸಬೇಕು ಮತ್ತು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.ಒಂದು ಮಗುವು ತಾಯಿಯ ಗರ್ಭದಲ್ಲಿರುವಾಗಲೇ ಮಗು ಹಕ್ಕುಗಳನ್ನು ಪಡೆಯಲು ಅರ್ಹವಾಗಿರುತ್ತದೆ. ಲಿಂಗ ಪತ್ತೆ ಕಾನೂನು ಪ್ರಕಾರ ಅಪರಾಧ. ಮಗುವಿಗೆ ಹೃದಯ ಬಡಿತ ಶುರುವಾದ ಸಮಯದಿಂದಲೇ ಮಗುವಿಗೆ ಬದುಕುವ ಹಕ್ಕು ಹೊಂದುತ್ತದೆ. 2015 ರಲ್ಲಿ ಭಾರತ ಸರ್ಕಾರ ‘ಬೇಟಿ ಬಚಾವೊ ಬೇಟಿ ಪಡಾವೋ’ ಕಾರ್ಯಕ್ರಮವನ್ನು ಪ್ರಾರಂಭಮಾಡಿದ್ದು, ಭಾರತ ದೇಶದಲ್ಲಿ ಹೆಣ್ಣು ಮಕ್ಕಳ ಲಿಂಗಾನುಪಾತ ಕಡೆಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಯಾಗಿದೆ ಎಂದರು.ಜಿಲ್ಲೆಯಲ್ಲಿ 1000 ಪುರುಷರಿಗೆ 962 ಹೆಣ್ಣು ಮಕ್ಕಳು ಜನಿಸುತ್ತಿರುವುದು ಕಂಡು ಬರುತ್ತಿದೆ. ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಮಕ್ಕಳ ಕುರಿತು ತಾತ್ಸರ ಭಾವನೆ ಇದ್ದು ಇದನ್ನು ತೊಡೆದು ಹಾಕುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಗಂಡು-ಹೆಣ್ಣು ಮಕ್ಕಳನ್ನು ಸಮಾಜದಲ್ಲಿ ಸಮಾನ ಮನೋಭಾವದಿಂದ ಕಾಣುತ್ತಿರುವುದು ಶ್ಲಾಘನೀಯ ವಿಷಯ ಎಂದರು.ಕುಶಾಲನಗರ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕಿ ಉಮಾ ಮಾತನಾಡಿ, ಗ್ರಾಮೀಣ ಪ್ರದೇಶದ ಪೋಷಕರು ಹೆಚ್ಚು ಕಾರ್ಮಿಕರಾಗಿ ದುಡಿಯುತ್ತಿದ್ದು, ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಅದರಂತೆ ವಿದ್ಯಾರ್ಥಿಗಳು ಓದಿನಕಡೆ ಹೆಚ್ಚು ಆಸಕ್ತಿ ವಹಿಸಿ ಸಾಧನೆ ಮಾಡಬೇಕು ಎಂದು ಹೇಳಿದರು.ಕೆಲವು ಮಕ್ಕಳು ಶಾಲೆಗೆ ಸೈಕಲ್, ಬಸ್ ಅಲ್ಲದೆ ನಡೆದು ಬರುತ್ತಿದ್ದು. ಇಂತಹ ಸಮಯದಲ್ಲಿ ಯಾವುದೇ ರೀತಿಯ ಆಸೆ ಆಮಿಷಗಳಿಗೆ ಬಲಿಯಾದೆ ಜಾಗೃತರಾಗಿರಬೇಕು. ಒಂದು ವೇಳೆ ಸಮಸ್ಯೆ ಎದುರಾದ ಮಕ್ಕಳ ಸಹಾಯವಾಣಿ 1098 ಗೆ ಕರೆಮಾಡುವುದು ಸೂಕ್ತ ಎಂದು ತಿಳಿಸಿದರು. ಕುಶಾಲನಗರದ ಮಕ್ಕಳ ವಿಶೇಷ ಪೊಲೀಸ್ ಘಟಕ ಗಾಯತ್ರಿ ಮಾತನಾಡಿ, ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಪಡೆದುಕೊಳ್ಳಲಿ ಎಂಬ ಉದ್ದೇಶದಿಂದ ಪೊಲೀಸ್ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದು, ವಿದ್ಯಾರ್ಥಿಗಳು ಕೇವಲ ಪಾಠಗಳಿಗೆ ಅಷ್ಟೇ ಸೀಮಿತವಾಗಿರದೆ ಇತರ ಕ್ರೀಡೆ, ನೃತ್ಯ ಸೇರಿದಂತೆ ಪಠ್ಯೇತರ ಚಟುವಟಿಕೆಗಳಿಗಳಲ್ಲಿಯೂ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.ಇಂದು ಮಕ್ಕಳು ಮೊಬೈಲ್ ಬಳಕೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ತೊಡಗಿಕೊಂಡು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿದರು. ಶಾಲಾ ಹಿರಿಯ ಶಿಕ್ಷಕ ಎ.ಸಿ.ಮಂಜುನಾಥ್ ಮಾತನಾಡಿ, ಮಕ್ಕಳು ಮೊಬೈಲ್‍ಗಳಿಂದ ಹಾಗೂ ಜಾಲತಾಣಗಳಿಂದ ದೂರವಿದ್ದು ಓದಿನ ಕಡೆ ಆಸಕ್ತಿ ವಹಿಸಬೇಕು. ಮಕ್ಕಳಿಗೆ ಉತ್ತಮ ಕಡ್ಡಾಯ ಶಿಕ್ಷಣದ ಸೌಲಭ್ಯವಿದ್ದು ಒಳ್ಳೆಯ ಸಂಸ್ಕೃತಿ, ಉತ್ತಮ ಆಲೋಚನೆಗಳಿಂದ ಗುರಿ ಸಾಧಿಸಬೇಕು ಎಂದು ಕರೆ ನೀಡಿದರು.ಮಕ್ಕಳ ಸಹಾಯವಾಣಿಯ ಮೇಲ್ವಿಚಾರಕಿ ಮಧು ಮಾತನಾಡಿ, ಮಕ್ಕಳ ಸಹಾಯವಾಣಿಯ ಕುರಿತಂತೆ ಮಾಹಿತಿ ನೀಡಿದರು. ಮಕ್ಕಳಿಗೆ ಮಾನಸಿಕ, ದೈಹಿಕ ಸಮಸ್ಯೆಗಳಾದಂತಹ ಪಕ್ಷದಲ್ಲಿ 1098 ಗೆ ಕರೆಮಾಡಿ ತಿಳಿಸಬೇಕು. ದೂರು ದಾಖಲಾದ ಪಕ್ಷದಲ್ಲಿ ನಿಮ್ಮ ದೂರನ್ನು ಗೌಪ್ಯವಾಗಿಟ್ಟು ಮನೆಭೇಟಿ ನೀಡುವುದರೊಂದಿಗೆ ಉಚಿತ ಆಪ್ತ ಸಮಾಲೋಚನೆ ನೀಡಲಾಗುತ್ತದೆ ಎಂದು ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಇಲಾಖೆಯ ಜೆಂಡರ್ ಸ್ಪೆಷಲಿಸ್ಟ್ ಎಸ್.ಆರ್.ಕೇಶಿನಿ ಸ್ವಾಗತಿಸಿದರು. ಶಾಲಾ ಶಿಕ್ಷಕಿ ಹೇಮಾವತಿ ನಿರೂಪಿಸಿ, ವಂದಿಸಿದರು.