ಸಾರಾಂಶ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಹಾಗೂ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ವಿದ್ಯಾರ್ಥಿ ಸಮೂಹ ದುಶ್ಚಟಗಳಿಗೆ ಬಲಿಯಾಗದೆ, ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸಿದರೆ ಮಾತ್ರ ಸಾಮಾಜಿಕ ಪಿಡುಗುಗಳು ಶಾಶ್ವತವಾಗಿ ನಿವಾರಣೆಯಾಗಲು ಸಾಧ್ಯ ಎಂದು ಕುಶಾಲನಗರ ಟೌನ್ ಠಾಣೆಯ ಇನ್ಸ್‌ಪೆಕ್ಟರ್ ಬಿ.ಜಿ. ಪ್ರಕಾಶ್ ಅಭಿಪ್ರಾಯಪಟ್ಟರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಹಾಗೂ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ನಡೆದ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮ ಬೀರುತ್ತವೆ. ದುಶ್ಚಟಗಳಿಗೆ ಬಲಿಯಾಗಬಾರದು. ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ಅಭ್ಯಾಸ ರೂಢಿಸಿಕೊಳ್ಳಬೇಕು. ಕಾಲೇಜು ದಿನಗಳಲ್ಲಿ ದುಶ್ಚಟಗಳಿಗೆ ಆಕರ್ಷಣೆಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಸಿಗರೇಟ್, ಗುಟ್ಕಾ ಮುಂತಾದ ತಂಬಾಕುಯುಕ್ತ ಪದಾರ್ಥ ಸೇವಿಸುವುದನ್ನು ತ್ಯಜಿಸಬೇಕು. ಯಾವುದೇ ಸಂದರ್ಭ ಕೆಟ್ಟ ಚಟಗಳಿಗೆ ಬಲಿಯಾಗಬೇಡಿ ಎಂದು ಕಿವಿಮಾತು ಹೇಳಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸದಸ್ಯ ಎಂ.ಎನ್. ಚಂದ್ರಮೋಹನ್ ಮಾತನಾಡಿ, ವಿದ್ಯಾರ್ಥಿ ಜೀವನವು ಭವಿಷ್ಯದ ಬದುಕನ್ನು ರೂಪಿಸಿಕೊಳ್ಳುವ ಮಹತ್ವದ ಘಟ್ಟವಾಗಿದೆ. ಈ ಹಂತದಲ್ಲಿ ಮಾದಕವಸ್ತು ಸೇರಿದಂತೆ ಆರೋಗ್ಯ ಮತ್ತು ಭವಿಷ್ಯಕ್ಕೆ ಮಾರಕವಾಗುವಂತಹ ಯಾವುದೇ ಚಟಗಳ ಆಕರ್ಷಣೆಗೆ ಒಳಗಾಗದೆ ದೂರವಿರಬೇಕು ಎಂದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕ್ಷೇತ್ರ ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಜನೆಯ ಮಾಹಿತಿಯನ್ನು ಒದಗಿಸಿದರು.ಕಾಲೇಜು ಪ್ರಭಾರ ಪ್ರಾಂಶುಪಾಲ ಡಾ. ನಾಗೇಂದ್ರ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕ ನಾಗರಾಜು ಸ್ವಾಗತಿಸಿದರು. ಸಮಾಜ ಶಾಸ್ತ್ರ ವಿಭಾಗದ ಉಪನ್ಯಾಸಕ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಯೋಜನೆಯ ಸೇವಾ ಪ್ರತಿನಿಧಿ ಜಯಲಕ್ಷ್ಮಿ, ಗೀತಾ ಮತ್ತಿತರರು ಇದ್ದರು.