ಕನ್ನಡಪ್ರಭವಾರ್ತೆ ಕುಶಾಲನಗರ

ಕುಶಾಲನಗರ ಗಡಿ ಭಾಗದಲ್ಲಿ ಬ್ರಿಟಿಷರ ಆಡಳಿತ ಅವಧಿಯಲ್ಲಿ (1846) ನಿರ್ಮಾಣಗೊಂಡ ಪುರಾತನ ಸೇತುವೆ ಪ್ರೆಷರ್ಪೇಟ್ ಬ್ರಿಜ್ ಗೆ ಖಾಸಗಿ ಸಂಘ ಸಂಸ್ಥೆಗಳ ಮೂಲಕ ಕಾಯಕಲ್ಪ ಕಲ್ಪಿಸಲು ಕುಶಾಲನಗರ ಪುರಸಭೆ ಮುಂದಾಗಿದೆ.

ಅತಿ ವಿಶಿಷ್ಟ ತಾಂತ್ರಿಕತೆ ಹೊಂದಿರುವ ಈ ಸೇತುವೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ರಾಜಾದಿ ರಾಜರು, ಮಹಾತ್ಮಾ ಗಾಂಧೀಜಿ ಸೇರಿದಂತೆ ಹಲವು ಗಣ್ಯರು ನಡೆದಾಡಿರುವ ಈ ಅಪರೂಪ ವಿನ್ಯಾಸದ ಸೇತುವೆಯನ್ನು ಪುರಸಭೆ ನೇತೃತ್ವದಲ್ಲಿ ಪುನಶ್ಚೇತನಗೊಳಿಸಲು ಸರ್ಕಾರದಿಂದ ಅನುಮತಿ ದೊರೆತಿದೆ.

ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿರುವ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಹಳೆಯ ಸೇತುವೆಗೆ ಎರಡು ಕಡೆ ಕಬ್ಬಿಣದ ಮೆಶ್ ಅಳವಡಿಸಿ ನವೀಕರಣ ಮಾಡಲು ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಟಿ ಜೆ ಗಿರೀಶ್ ಅವರಿಗೆ ಹೆದ್ದಾರಿ ಇಲಾಖೆ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಶಿಥಿಲಗೊಂಡ ಸೇತುವೆಯ ಪಕ್ಕದಲ್ಲಿ ಕಳೆದ 25 ವರ್ಷಗಳ ಹಿಂದೆ ನೂತನ ಸೇತುವೆ ನಿರ್ಮಾಣ ಮಾಡಲಾಗಿದ್ದು ಹಳೆ ಸೇತುವೆಯ ಮೂಲಕ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ನೂತನ ಸೇತುವೆ ನಿರ್ಮಾಣ ಸಂದರ್ಭ ಹಳೆಯ ಸೇತುವೆಯನ್ನು ತೆರೆವುಗೊಳಿಸಲು ಅಂದಿನ ಸರ್ಕಾರ ಗುತ್ತಿಗೆದಾರರಿಗೆ ಸೂಚನೆ ನೀಡಿತ್ತು. ಆ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಮುಖರು ಅಂದಿನ ಲೋಕೋಪಯೋಗಿ ಸಚಿವರಾಗಿದ್ದ ಧರ್ಮಸಿಂಗ್ ಅವರಿಗೆ ಪುರಾತನ ಸೇತುವೆ ಸ್ಮಾರಕವಾಗಿ ಉಳಿಸುವಂತೆ ಸಲ್ಲಿಸಿದ ಮನವಿ ಮೇರೆಗೆ ಸೇತುವೆಯನ್ನು ಕೆಡವದಂತೆ ಆದೇಶ ಹೊರಡಿಸಿತ್ತು.

ಪ್ರಸಕ್ತ ಸೇತುವೆಯ ಎರಡು ಭಾಗಗಳಲ್ಲಿ ಗಿಡಗಂಟಿಗಳು ಬೆಳೆದು ಸೇತುವೆ ದುಸ್ಥಿತಿಯಲ್ಲಿದ್ದು ಸೇತುವೆ ಮೇಲಿಂದ ಜನರು ಕಸ ಕಡ್ಡಿಗಳನ್ನು ನದಿಗೆ ಎಸೆಯುತ್ತಿದ್ದಾರೆ. ಇತ್ತೀಚೆಗೆ ಹಲವರು ಈ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೇತುವೆ ಎರಡು ಬದಿಯಲ್ಲಿ ಕಬ್ಬಿಣ ಗ್ರಿಲ್‌ ಅಳವಡಿಸಿ ವಿದ್ಯುತ್ ದೀಪ ಅಳವಡಿಸುವುದರೊಂದಿಗೆ ಸೇತುವೆಯನ್ನು ಉದ್ಯಾನವನದ ರೀತಿ ಪರಿವರ್ತಿಸಿ ಸ್ಮಾರಕವನ್ನಾಗಿ ಉಳಿಸಿಕೊಳ್ಳುವ ಉದ್ದೇಶವಿದೆ ಎಂದು ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಟಿ ಜೆ ಗಿರೀಶ್ ಮಾಹಿತಿ ನೀಡಿದ್ದಾರೆ.


ನದಿ ತ್ಯಾಜ್ಯಗಳನ್ನು ತೆರವುಗೊಳಿಸಲು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರೋಟರಿ ಕುಶಾಲನಗರ ನೇತೃತ್ವದಲ್ಲಿ ಸಮೀಪದ ಕೊಪ್ಪ ಭಾರತ ಮಾತಾ ಪದವಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸೇರಿ ನಿರಂತರವಾಗಿ ಸ್ವಚ್ಛತೆ ಕಾರ್ಯಕ್ರಮ ನಡೆಸಲಾಗುತ್ತಿದೆ.

ಸ್ವಚ್ಛ ಅಭಿಯಾನ: ಇತ್ತೀಚೆಗಷ್ಟೇ 25 ವಸಂತಗಳನ್ನು ಕಂಡಿರುವ ಪಕ್ಕದ ನೂತನ ಸೇತುವೆಗೆ ರೋಟರಿ ಕುಶಾಲನಗರ ಸ್ವಚ್ಛ ಕಾವೇರಿ ಮತ್ತು ಸ್ವಚ್ಛ ಪಟ್ಟಣಕ್ಕೆ ಅಭಿಯಾನ ರೂಪಿಸಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ನೂತನ ಸೇತುವೆಯ ಎರಡು ಬದಿಗಳಲ್ಲಿ ಕಬ್ಬಿಣದ ಮೆಶ್ ಹಾಗೂ ವಿದ್ಯುತ್ ಸಂಪರ್ಕ ಅಳವಡಿಸುವ ಕೆಲಸ ನಡೆದಿದೆ.

ಶಾಸಕ ಮಂತರ್‌ 5 ಲಕ್ಷ ರು. ಭರವಸೆ: ಎರಡು ಸೇತುವೆಗಳನ್ನು ಉತ್ತಮವಾಗಿ ನಿರ್ವಹಣೆ ಮಾಡುವುದರೊಂದಿಗೆ ಜಿಲ್ಲೆಯ ಕುಶಾಲನಗರ ಗಡಿ ಭಾಗವನ್ನು ಸೌಂದರೀಕರಣ ಮಾಡುವ ಉದ್ದೇಶವಿದೆ ಎಂದು ಕ್ಷೇತ್ರದ ಶಾಸಕ ಡಾ ಮಂತರ್ ಗೌಡ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ಸಂಬಂಧ ಪುರಾತನ ಸೇತುವೆಯನ್ನು ಪುನಶ್ಚೇತನ ಗೊಳಿಸಲು ತಾನು ಶಾಸಕರ ಅನುದಾನದಲ್ಲಿ 5 ಲಕ್ಷ ರು. ನೀಡುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಮತ್ತು ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರ ಮನವಿ ಮೇರೆಗೆ ಈ ಐತಿಹಾಸಿಕ ಸೇತುವೆಗೆ ಕಾಯಕಲ್ಪ ನೀಡುವ ಭರವಸೆ ನೀಡಿದ್ದರು.

ಸಿಮೆಂಟ್‌ ಇಲ್ಲ ಇಟ್ಟಿಗೆ ಗಾರೆ ಮಾತ್ರ

1846ರಲ್ಲಿ ನಿರ್ಮಾಣಗೊಂಡ ಪ್ರೆಷರ್ ಪೇಟ್ ಸೇತುವೆಯನ್ನು ಅಂದಿನ ಕೊಡಗು ಮೈಸೂರು ಕಮಿಷನರ್ ಆಗಿದ್ದ ಮಾರ್ಕ್ ಕಬ್ಬನ್ ಲೋಕಾರ್ಪಣೆಗೊಳಿಸಿದ್ದರು. ಸುಮಾರು 130 ಮೀಟರ್ ಉದ್ದ ಹಾಗೂ 8 ಮೀಟರ್ ಅಗಲ ಇರುವ ಈ ಸೇತುವೆ ಸಿಮೆಂಟ್ ಬಳಸದೆ ಕೇವಲ ಇಟ್ಟಿಗೆ ಗಾರೆ ಮೂಲಕ ಕಟ್ಟಿದ್ದು ಈಗಲೂ ಒಂದಿಂಚು ಶಿಥಿಲಗೊಳ್ಳದೆ ಭದ್ರವಾಗಿ ನಿಂತಿರುವುದು ಗಮನಾರ್ಹ ಅಂಶವಾಗಿದೆ.

ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಎರಡು ಸೇತುವೆಗಳನ್ನು ಒಳಗೊಂಡಂತೆ ಬೃಹತ್ ಗಾತ್ರದ ಪ್ರವೇಶ ದ್ವಾರ ನಿರ್ಮಿಸಲು ಪುರಸಭೆ ಈಗಾಗಲೇ ಕಾರ್ಯ ಯೋಜನೆ ಹಮ್ಮಿಕೊಂಡಿದೆ.